ರಾಜ್ಯ

ಸಿಇಸಿ ಆದೇಶ ಪಾಲಿಸಿ ಎನ್ನುವುದು ರಾಜಕೀಯ ದ್ವೇಷವೇ?: ಎಚ್‌.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ ಈಶ್ವರ್‌ ಖಂಡ್ರೆ

ಬೆಂಗಳೂರು: ರಿಯಲ್ ಎಸ್ಟೇಟ್‌ಗೆ ಅರಣ್ಯ ಭೂಮಿ ಮಾರಲು ಎಚ್ಎಂಟಿಗೆ ಬಿಡಬೇಕಾ? ಸಿಇಸಿ ಆದೇಶ ಪಾಲಿಸಿ ಎನ್ನುವುದು ರಾಜಕೀಯ ದ್ವೇಷವೇ? ನಮ್ಮ ಸರ್ಕಾರ ಅಭಿವೃಧಿಗೆ ಎಂದೂ ಅಡ್ಡಿ ಮಾಡಿಲ್ಲ. ರಾಜ್ಯದ ಹಿತ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಗೆ ಸಚಿವ ಈಶ್ವರ್‌ ಖಂಡ್ರೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಫೆಬ್ರವರಿ.3) ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕುದುರೇಮುಖ ಕಬ್ಬಿಣದ ಅದಿರು ಕಂಪನಿ ವಿಚಾರದಲ್ಲಿ ಕೆಐಓಸಿಎಲ್ ತಪ್ಪು ಮುಚ್ಚಿಕೊಳ್ಳಲು ಕರ್ನಾಟಕ ಸರ್ಕಾರದ ಮೇಲೆ ಕುಮಾರಸ್ವಾಮಿ ಅವರು ಪ್ರತಿನಿತ್ಯ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ನಮ್ಮ ಸರ್ಕಾರ ರಾಜಕೀಯ ಬೆರಸುವುದಿಲ್ಲ. ಆದರೆ ಕೆ.ಐ.ಓ.ಸಿ.ಎಲ್. ಈ ಹಿಂದೆ ಗಣಿಗಾರಿಕೆ ನಡೆಸುವಾಗ ಸರಿಪಡಿಸಲು ಸಾಧ್ಯವೇ ಆಗದಷ್ಟು ಪರಿಸರ ಹಾನಿ ಮಾಡಿದೆ. ಅಲ್ಲದೇ ಪರಿಸರ ಹಾನಿಯ ಮೊತ್ತ ಸೇರಿದಂತೆ 1400 ಕೋಟಿ ರೂ. ಬಾಕಿ ಹಣವನ್ನು ಸರ್ಕಾರಕ್ಕೆ ಕಟ್ಟಿಲ್ಲ. ತನ್ನ ತಪ್ಪು ಸರಿಪಡಿಸಿಕೊಳ್ಳಲು ತಯಾರಿಲ್ಲದ ಕಂಪನಿಗೆ ಮತ್ತಷ್ಟು ಪರಿಸರ ಹಾನಿ ಮಾಡಲು ಬಿಡಬೇಕೆ ಎಂದು ಕಿಡಿಕಾರಿದ್ದಾರೆ.

ಸರ್ಕಾರಿ ಸ್ವಾಮ್ಯದ ಕೆಐಓಸಿಎಲ್ ಅಕ್ರಮವಾಗಿ ಲಕ್ಯಾ ಜಲಾಶಯದ ಎತ್ತರ ಹೆಚ್ಚಿಸಿ, ಅರಣ್ಯ ಮುಳುಗಡೆ ಮಾಡಿತ್ತು. ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಎನ್.ಪಿ.ವಿ. ಮೊತ್ತ, ಬಡ್ಡಿ ಸೇರಿ ಸುಮಾರು 1349.52948 ಕೋಟಿ ರೂ.ಗಳನ್ನು ಅರಣ್ಯ ಇಲಾಖೆಗೆ ಪಾವತಿಸಬೇಕಿದೆ, ಇದರ ಜೊತೆಗೆ 1334.33 ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕಿದೆ. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರು, ಅರಣ್ಯ ಇಲಾಖೆಗೆ ಕಟ್ಟಬೇಕಾದ ಬಾಕಿ ಮತ್ತು ಹಿಂತಿರುಗಿಸಬೇಕಾದ ಭೂಮಿಯ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಇನ್ನೂ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿ.ಇ.ಸಿ.) ವರದಿಯಲ್ಲಿ ಹಾಗೂ 13ನೇ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ನೀಡಿರುವ 3ನೇ ವರದಿಯಲ್ಲೂ ಕೆಐಓಸಿಎಲ್ ಪರಿಸರಕ್ಕೆ ಮಾಡಿರುವ ಹಾನಿಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖವಿದೆ. ಕಂಪನಿ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಸೂಕ್ತ ಅನುಮತಿ ಪಡೆಯದೇ ನಿಯಮ ಉಲ್ಲಂಘಿಸಿದೆ. ಮಾಡಿರುವ ತಪ್ಪು ಸರಿಪಡಿಸಿಕೊಂಡು, ದಂಡ ಪಾವತಿಸಿ ಎಂದು ಹೇಳಿದರೆ ಅದು ಅಭಿವೃದ್ಧಿಗೆ ಅಡ್ಡಿ ಮಾಡುವ ರಾಜಕೀಯ ಆಗುತ್ತದೆಯೇ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಉಕ್ಕು ಸಚಿವಾಲಯದಡಿ ಬರುವ ಎನ್.ಎಂ.ಡಿ.ಸಿ.ಗೆ ಉಕ್ಕು ಕಾರ್ಖಾನೆ ಸ್ಥಾಪಿಸಲು 2014ರಲ್ಲಿಯೇ ಬಳ್ಳಾರಿ ಬಳಿ ವೇಣಿವೀರಾಪುರದಲ್ಲಿ 2857.54 ಎಕರೆ ಜಮೀನು ನೀಡಲಾಗಿದೆ. ಉಕ್ಕು ಕಾರ್ಖಾನೆ ಆರಂಭಿಸಿದರೆ 50 ಸಾವಿರ ಜನರಿಗೆ ಉದ್ಯೋಗ ಲಭಿಸುತ್ತದೆ. ಕೆಐಓಸಿಎಲ್ ಮುಚ್ಚಿದರೆ 300 ಕಾರ್ಮಿಕರಿಗೆ ತೊಂದರೆ ಆಗುತ್ತದೆ ಎನ್ನುತ್ತಿದ್ದ ಕುಮಾರಸ್ವಾಮಿ ಈಗ 1000 ಕಾರ್ಮಿಕರು ಎನ್ನುತ್ತಿದ್ದಾರೆ, ವೇಣಿಪುರದಲ್ಲಿ ಕಾರ್ಖಾನೆ ಆರಂಭಿಸಿದರೆ ಉದ್ಯೋಗ ನೀಡಬಹುದು. ಏಕೆ ಆರಂಭ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಎಚ್.ಎಂ.ಟಿ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ಕೊಡಬೇಕೆ? ಎಂದು ಆರೋಪಿಸಿದರು.

ಎಚ್.ಎಂ.ಟಿ. ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ ಅರಣ್ಯ ಜಮೀನು ಮಂಜೂರಾತಿಯ ಬಗ್ಗೆಯೇ ಅನುಮಾನವಿದೆ. ಎಚ್.ಎಂ.ಟಿ. ತನಗೆ ಮಂಜೂರಾಗಿದೆ ಎಂದು ಒದಗಿಸಿರುವ ದಾಖಲೆಯಲ್ಲಿ ಸರ್ವೆ ನಂಬರ್ ಮತ್ತು ಮಂಜೂರಾದ ದಿನಾಂಕವೂ ಇಲ್ಲ. 443 ಎಕರೆ ಭೂಮಿ ಮಂಜೂರಾತಿ ಬಗ್ಗೆ ಅಥವಾ ಅರಣ್ಯೇತರ ಉದ್ದೇಶಕ್ಕೆ ಸರ್ಕಾರಿ ಆದೇಶ ಆಗಿರುವ ಯಾವುದೇ ಗೆಜೆಟ್ ಅಧಿಸೂಚನೆ ಇಲ್ಲ. ಹೀಗಿದ್ದೂ ಪ್ರಸ್ತುತ ಮುಚ್ಚಿಹೋಗಿರುವ ಎಚ್.ಎಂ.ಟಿ. ಅರಣ್ಯ ಜಮೀನನ್ನು ಖಾಸಗಿ ಬಿಲ್ಡರ್ ಗಳು ಸೇರಿದಂತೆ ಹಲವು ಕಂಪನಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದೆ. ಹೀಗಾಗಿ ಎಚ್.ಎಂ.ಟಿ.ಗೆ ರಿಯಲ್ ಎಸ್ಟೇಟ್ ದಂಧೆ ನಡೆಸಲು ಸರ್ಕಾರ ಅವಕಾಶ ಕೊಡಬೇಕೇ ಎಂದು ಪ್ರಶ್ನಿಸಿದರು.

ಸುಪ್ರೀಂಕೋರ್ಟ್‌ Once a Forest is Always a Forest – Environment is more important than civil rights ಎಂದು ಪದೇ ಪದೇ ಹೇಳಿದೆ. ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿ ಡಿನೋಟಿಫೈ ಆಗಿಲ್ಲ. ಹೀಗಾಗಿ ಅದನ್ನು ಪರಭಾರೆ, ದಾನ ಮಾಡಲು ಅವಕಾಶವೇ ಇಲ್ಲ. ಅರಣ್ಯ ಭೂಮಿ ಮರಳಿ ಪಡೆಯುವುದರಲ್ಲಿ ತಪ್ಪೇನು? ಜೊತೆಗೆ ಕೆಲವೇ ಕೆಲವು ಅಧಿಕಾರಿಗಳು ಸಚಿವ ಸಂಪುಟದ ಗಮನಕ್ಕೂ ತಾರದೆ, ತಾವೇ ಸ್ವಯಂ ನಿರ್ಧಾರ ಕೈಗೊಂಡು ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ (IA) ಹಾಕಿದ್ದರು, ಈ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಸಹ ನೀಡಲಾಗಿದೆ. ಸರ್ಕಾರದ ಸಮ್ಮತಿ ಇಲ್ಲದ ಐಎ ಹಿಂಪಡೆಯಲು ನಿರ್ಧರಿಸಲಾಗಿತ್ತು, ಇದಕ್ಕೆ ಸಚಿವ ಸಂಪುಟವೂ ಘಟನೋತ್ತರ ಅನುಮೋದನೆ ನೀಡಿದೆ. ಇದರಲ್ಲಿ ಅಭಿವೃದ್ಧಿಗೆ ಅಡ್ಡಿ ಪಡಿಸುವ ಯಾವುದೇ ರಾಜಕೀಯ ಇಲ್ಲ. ಬದಲಾಗಿ ರಾಜ್ಯದ ಹಿತವಿದೆ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ಎಚ್.ಎಂ.ಟಿ, ಮತ್ತು ಕೆ.ಐ.ಓ.ಸಿ.ಎಲ್. ವಿಚಾರದಲ್ಲಿ ಆರೋಪ ಮಾಡುವುದನ್ನು ಬಿಟ್ಟು, ರಾಜ್ಯದ ಹಿತದ ಬಗ್ಗೆಯೂ ಚಿಂತಿಸಬೇಕು ಎಂದು ತಿಳಿಸಿದರು.

ಅರ್ಚನ ಎಸ್‌ ಎಸ್

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

2 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

3 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

5 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

7 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

7 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

8 hours ago