ಬೆಂಗಳೂರು : ಬಿಜೆಪಿ ಆಡಳಿತದ ಬಗ್ಗೆ ಜನಸಾಮಾನ್ಯರಷ್ಟೇ ಅಲ್ಲ ಸ್ವತಃ ಬಿಜೆಪಿ ಕಾರ್ಯಕರ್ತರೇ ಬೇಸತ್ತಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿಗಳ ಸಂಖ್ಯೆ ಹೆಚ್ಚಾಗಿತ್ತು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್-2 ಉದ್ಘಾಟನೆ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಕಂಚಿನ ಪ್ರತಿಮೆ ಅನಾವರಣದಲ್ಲಿ ಪ್ರಧಾನಿ ನರೇಂದ್ರಮೋದಿ ಭಾಗವಹಿಸಿದ್ದರು. ಬಳಿಕ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಕುರ್ಚಿಗಳು ಖಾಲಿ ಇರುವ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಜನತೆ ಸುಳ್ಳುಗಳನ್ನು ಎಷ್ಟು ದಿನ ಸಹಿಸಬಲ್ಲರು. ಟೊಳ್ಳುಗಳನ್ನು ಎಷ್ಟು ದಿನ ನಂಬಬಲ್ಲರು ಎಂದು ತಿರುಗೇಟು ನೀಡಿದೆ.
ಹಣ ನೀಡಿ
ಜನರನ್ನೂ ಕರೆತಂದರು
ಕುರ್ಚಿಗಳನ್ನೂ ತಂದರು,
ಆದರೆ ಉಳಿದಿದ್ದು ಕುರ್ಚಿಗಳು ಮಾತ್ರ!ಜೀವವಿದ್ದಿದ್ದರೆ ಕುರ್ಚಿಗಳಿಗೂ ಜಿಗುಪ್ಸೆ ಹುಟ್ಟಿ ಎದ್ದು ಹೊರಡುತ್ತಿದ್ದವು!@BJP4Karnataka ಗೆ ಖಾಲಿ ಕುರ್ಚಿಗಳೇ ಪ್ರೇಕ್ಷಕರು, ಕುರ್ಚಿಗಳು ಎದ್ದುಹೋಗುವುದಿಲ್ಲ ಎಂಬ ಖಾತರಿ ಇದೆ! pic.twitter.com/mFuUmLwuHb
— Karnataka Congress (@INCKarnataka) November 12, 2022
ಜನ ಸಂಕಟ ಯಾತ್ರೆಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ಬಿಜೆಪಿ ಸರ್ಕಾರ ಪ್ರಧಾನಿಯನ್ನೂ ಕರೆಸಿ ಚುನಾವಣಾ ತಯಾರಿ ನಡೆಸಿದರೂ ಜನರಿಲ್ಲದೆ ಕುರ್ಚಿಗಳು ಖಾಲಿಯಾಗಿವೇ ಉಳಿದಿವೆ ಎಂದು ಲೇವಡಿ ಮಾಡಿದೆ.
ಟ್ರಬಲ್ ಇಂಜಿನ್ ಸರ್ಕಾರದ ಮೇಲೆ ಜನಸಾಮಾನ್ಯರಷ್ಟೇ ಅಲ್ಲ ಸ್ವತಃ ಬಿಜೆಪಿ ಕಾರ್ಯಕರ್ತರೇ ಬೇಸತ್ತಿದ್ದಾರೆ. ಹಾಗಾಗಿ ಕಾರ್ಯಕ್ರಮಕ್ಕೆ ಬಲವಂತಪಡಿಸಿದರೂ ಜನ ಬರುತ್ತಿಲ್ಲ ಎಂದು ತಿರುಗೇಟು ನೀಡಿದೆ.