ಬೆಂಗಳೂರು : ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಾಯಗೊಂಡಿರುವ ಆನೆಮರಿಗೆ ತುರ್ತು ವೈದ್ಯಕೀಯ ಆರೈಕೆ ಒದಗಿಸುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವನ್ನು ಬರೆದಿರುವ ರಾಹುಲ್ ಗಾಂಧಿ ಅವರು ನಾನು ಮತ್ತು ಕಾಂಗ್ರೆಸ್ ಅಧ್ಯಕ್ಷರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ವಲ್ಪ ಸಮಯ ಭೇಟಿ ನೀಡಿದ್ದೆವು, ಅಲ್ಲಿ ಗಾಯಗೊಂಡ ಆನೆಯೊಂದು ತನ್ನ ತಾಯಿಯಂದಿಗಿರುವ ನೋವಿನ ದೃಶ್ಯವನ್ನು ನೋಡಿದೆವು. ಪುಟ್ಟ ಆನೆ ಮರಿಗೆ ಬಾಲ ಹಾಗೂ ಸೊಂಡಿಲು ಬಳಿ ತೀವ್ರವಾಗಿ ಗಾಯವಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಮುಂದುವರಿದು ಪ್ರಕೃತಿಯು ನನ್ನದೇ ಆದ ಹಾದಿಯನ್ನು ತೆಗೆದುಕೊಳ್ಳಲು ಅನುಮತಿಸಬೇಕು ಎಂಬ ದೃಷ್ಟಿ ಕೋನವಿದೆ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಆದರೂ ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿ ಕೆಲವು ವಿನಾಯಿತಿಗಳನ್ನು ನೀಡಬೇಕಾಗುತ್ತದೆ. ಈ ಮರಿ ಆನೆಗೆ ನಿಸ್ಸಂದೇಹವಾಗಿ ತುರ್ತು ವೈದ್ಯಕೀಯ ಆರೈಕೆ ಅಗತ್ಯವಿದೆ ಎಂದು ರಾಹುಲ್ ಗಾಂಧಿಯವರು ಪತ್ರದಲ್ಲಿ ತಿಳಿಸಿದ್ದಾರೆ. ನಾನು ರಾಜಕೀಯ ಗಡಿಗಳನ್ನು ದಾಟಿ ಈ ಪುಟ್ಟ ಆನೆಯನ್ನು ಉಳಿಸಲು ನಿಮ್ಮ ಸಹಾನುಭೂತಿಯನ್ನು ಯಾಚಿಸುತ್ತೇನೆ. ಈ ಮರಿ ಆನೆಗೆ ಸೂಕ್ತ ಚಿಕಿತ್ಸೆ ನೀಡಿದರೆ ಅದು ಬದುಕುಳಿಯುವ ವಿಶ್ವಾಸವಿದೆ. ಈ ಪುಟ್ಟ ಆನೆಯನ್ನು ಉಳಿಸಲು ನೀವು ಸಮಯೋಚಿತ ಸಹಾಯವನ್ನು ನೀಡುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ತದನಂತರ ತಮ್ಮ ಟ್ವೀಟರ್ ಮಾತೃಪ್ರೇಮ. ಗಾಯಗೊಂಡು ಬದುಕಲು ಹೋರಾಟ ನಡೆಸುತ್ತಿರುವ ತನ್ನ ಮರಿಯ ಜೊತೆಗಿರುವ ಸುಂದರವಾದ ಆನೆಯನ್ನು ನೋಡಿ ನನಗೆ ಬಹಳ ದುಃಖವಾಯಿತು ಎಂದು ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.