ಬೆಂಗಳೂರು : ಡಿಸಿಎಂ ಡಿ.ಕೆ.ಶಿವಕುಮಾರ್ ಸುಮಾರು ಎರಡು ಗಂಟೆಗಳ ಕಾಲ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಬಿಬಿಎಂಪಿ ಕಚೇರಿಯಲ್ಲಿ ಸಭೆ ನಡೆಸಿದರು. ಬಳಿಕ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇನ್ನು ಮುಂದೆ ಕಾಮಗಾರಿ ನಡೆಸುವಾಗ ವಿಡಿಯೋ ಮಾಡಿ ಇಡಬೇಕು. ಎಲ್ಲವನ್ನೂ ಪರಿಶೀಲಿಸುತ್ತೇನೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜಕಾಲುವೆ ಅಭಿವೃದ್ಧಿ, ಟೌನ್ ಪ್ಲಾನಿಂಗ್, ಟ್ಯಾಕ್ಸ್ ಸಂಗ್ರಹಣೆ, ಒತ್ತುವರಿ ತೆರವು ಕಾರ್ಯಗಳಿಗೆ ಸಂಬಂಧಿಸಿದಂತೆ ಸುಧೀರ್ಘ ಚರ್ಚೆ ನಡೆಸಿ, ಪ್ರತಿ ವಲಯದ ಅಧಿಕಾರಿಗಳನ್ನು ಡಿಕೆಶಿ ತರಾಟೆಗೆ ತೆಗೆದುಕೊಂಡರು. ಇಂದು ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. 40-50 ಲಕ್ಷ ಜನ ಬಂದು ಹೋಗುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಉತ್ತಮ ಸೌಲಭ್ಯ ನೀಡುವ ಕೆಲಸ ಮಾಡಬೇಕು ಎಂದರು.
ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಮುಕ್ತ ಕೆಲಸ ಆಗಬೇಕು. ಜನರು ಕಷ್ಟ ಎಂದು ಬಂದಾಗ ಅಧಿಕಾರಿಗಳು ಸರಿಯಾದ ಸ್ಪಂದನೆ ನೀಡಬೇಕು. ಒಂದು ವೇಳೆ ತಪ್ಪು ಕಂಡು ಬಂದಲ್ಲಿ ಶಿಸ್ತು ಕ್ರಮ ಗ್ಯಾರಂಟಿ. ಇಲಾಖೆಯ ಆಡಳಿತದ ಬಗ್ಗೆ ನನಗೂ ತುಂಬಾ ವಿಷಯ ಗೊತ್ತಿದೆ. ಬಿಬಿಎಂಪಿ ಇದೊಂದು ಸ್ನೇಹ ಜೀವಿ ಇಲಾಖೆಯಾಗಿದ್ದು, ಒಳ್ಳೆಯ ಕಾರ್ಯಗಳು ಆಗಬೇಕು ಎಂದು ಡಿಕೆಶಿ ಖಡಕ್ ಸೂಚನೆ ನೀಡಿದರು.
ಬಿಬಿಎಂಪಿ ಇಲಾಖೆಯಲ್ಲಿ 40% ಕಮಿಷನ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಕೆಶಿ, ಈ ಬಗ್ಗೆ ಎಲ್ಲರೊಂದಿಗೆ ಮಾತನಾಡುತ್ತೇನೆ. ಒಂದೇ ದಿನ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ. ಅದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಯಲಿದೆ. ಈ ಬಗ್ಗೆ ಅಧಿಕಾರಗಳು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಬೇಕು ಎಂದು ಹೇಳಿದರು.