ರಾಜ್ಯ

ಡಿ.ಕೆ ಸುರೇಶ್‌ಗೆ ಬಮೂಲ್‌ ಅಧ್ಯಕ್ಷಗಿರಿ

ಬೆಂಗಳೂರು : ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್)ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರು ಸಂಘದ ಅಧ್ಯಕ್ಷರಾಗಿ ಹಾಗೂ ಕುದೂರು ರಾಜಣ್ಣ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಮೂಲ್ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಿಕಟಪೂರ್ವ ಸಂಸದ ಡಿ ಕೆ ಸುರೇಶ್ ಅವರು ಬೆಂಗಳೂರು ಡೈರಿ ಸರ್ಕಲ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಬೇರೆ ಯಾರೂ ಉಮೇದುವಾರಿಕೆ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಂತರ ಸುರೇಶ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ (ಬಮೂಲ್)ನಲ್ಲಿ 16 ನಿರ್ದೇಶಕರ ಪೈಕಿ 14 ಜನ ಚುನಾವಣೆ ಮೂಲಕ ಆರಿಸಲಾಗಿದ್ದು, ಇಬ್ಬರು ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದಾರೆ. ಬಮೂಲ್ ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನನ್ನನ್ನು ಅಧ್ಯಕ್ಷನನ್ನಾಗಿ, ಮಾಗಡಿ ತಾಲೂಕಿನ ಕುದೂರು ರಾಜಣ್ಣ ಅವರನ್ನು ಉಪಾಧ್ಯಕ್ಷರನ್ನಾಗಿ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ” ಎಂದು ತಿಳಿಸಿದರು.

“ನಮ್ಮ ಪಕ್ಷದ ಅಧ್ಯಕ್ಷರಾದ ಡಿಸಿಎಂ ಡಿ.ಕೆ. ಶಿವಕುಮಾರ್, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ, ಶಾಸಕರಾದ ಬಾಲಕೃಷ್ಣ, ಸಿ.ಪಿ. ಯೋಗೇಶ್ವರ್, ಇಕ್ಬಾಲ್ ಹುಸೇನ್, ಶಿವಣ್ಣ, ಶರತ್ ಬಚ್ಚೇಗೌಡ, ಕೃಷ್ಣಭೈರೇಗೌಡರು ಸೇರಿದಂತೆ ಬಮೂಲ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಸಕರ ಸರ್ವಸಮ್ಮತದ ತೀರ್ಮಾನದಂತೆ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ” ಎಂದರು.

“ಈ ಸಂದರ್ಭದಲ್ಲಿ ಎಲ್ಲರಿಗೂ ನಾನು ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದು ನಡೆದ ಚುನಾವಣೆಯಲ್ಲಿ ಸಹಕಾರ ಸಂಸ್ಥೆ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಈ ಒಕ್ಕೂಟದ ಹಾಲು ಉತ್ಪಾದಕರು, ರೈತ ಬಾಂಧವರು ನಮ್ಮ ಮೇಲೆ ನಿರೀಕ್ಷೆ ಇಟ್ಟು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಅವರಿಗೂ ಧನ್ಯವಾದ ತಿಳಿಸುತ್ತೇನೆ. ಹಾಲು ಉತ್ಪಾದಕರು, ನಿರ್ದೇಶಕರು ಬದಲಾವಣೆ ತರುವ ನಿರೀಕ್ಷೆ ಹೊಂದಿದ್ದು, ಎಲ್ಲರ ಸಹಕಾರ ಪಡೆದು ಬೆಂಗಳೂರು ಸಹಕಾರ ಹಾಲು ಒಕ್ಕೂಟ ಹಾಗೂ ರೈತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ” ಎಂದು ಹೇಳಿದರು.

ರಾಜ್ಯಾದ್ಯಂತ ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಪರಿಚಯಿಸುವ ಚಿಂತನೆ: “ಕನಕಪುರ ಹಾಲು ಒಕ್ಕೂಟದಲ್ಲಿ ಇತ್ತೀಚೆಗೆ ಪರಿಸರಸ್ನೇಹಿ ಹಾಲಿನ ಪ್ಯಾಕೆಟ್ ಪರಿಚಯಿಸಿದ್ದಿರಿ, ಅದನ್ನು ಬಮೂಲ್ ಗೂ ವಿಸ್ತರಣೆ ಮಾಡುತ್ತೀರಾ ಎಂದು ಕೇಳಿದಾಗ, “ನಾವು ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಅನ್ನು ಪರಿಚಯಿಸಿದ್ದು, ಇದನ್ನು ಬೆಂಗಳೂರಿಗೆ ಮಾತ್ರವಲ್ಲ ಕರ್ನಾಟಕ ರಾಜ್ಯಾದ್ಯಂತ ಪರಿಚಯಿಸುವ ಚಿಂತನೆ ಇದೆ. ಪ್ರಾಯೋಗಿಕವಾಗಿ ಒಂದು ಪಂಚಾಯ್ತಿ ಮಟ್ಟದಲ್ಲಿ ಇದನ್ನು ವಿತರಣೆ ಮಾಡಿದ್ದೇವೆ. ಮುಂದಿನ ಆಡಳಿತ ಮಂಡಳಿಯಲ್ಲಿ ಇದರ ಸಾಧಕ ಬಾಧಕಗಳನ್ನು ವಿಸ್ತೃತವಾಗಿ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ಮಾರುಕಟ್ಟೆ ವ್ಯಾಪ್ತಿ ಹೆಚ್ಚಿಸಿ, ಹಾಲು ಉತ್ಪಾದಕರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಹಂತಹಂತವಾಗಿ ಇದನ್ನು ಮಾಡುತ್ತೇವೆ” ಎಂದು ತಿಳಿಸಿದರು.

“ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಸೇರಿ ಸಂಘದ ಹಾಗುಹೋಗುಗಳ ಬಗ್ಗೆ ಸರ್ಕಾರದ ಜತೆ ಚರ್ಚಿಸಿ, ಬದಲಾವಣೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಸೇರಿದಂತೆ ಎಲ್ಲರ ಸಹಕಾರ ಕೋರುತ್ತೇನೆ” ಎಂದು ತಿಳಿಸಿದರು.

ರೈತರಿಗೆ ಯಾವ ಸಂದೇಶ ನೀಡುತ್ತೀರಿ ಎಂದು ಕೇಳಿದಾಗ, “ರೈತರ ಬದುಕು ಹಾಲಿನ ಕ್ಷೇತ್ರದಲ್ಲಿದೆ. ನೀವು ನನ್ನ ಮೇಲೆ ಹಾಗೂ ಒಕ್ಕೂಟದ ಮೇಲೆ ನಂಬಿಕೆ ಇಟ್ಟಿದ್ದು ಇದಕ್ಕೆ ನ್ಯಾಯವನ್ನು ಒದಗಿಸುವಂತೆ ಬದಲಾವಣೆ ತರುವ ಪ್ರಯತ್ನ ಮಾಡುತ್ತೇನೆ” ಎಂದು ತಿಳಿಸಿದರು.

ಆಂದೋಲನ ಡೆಸ್ಕ್

Recent Posts

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

2 hours ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

2 hours ago

ಕೋಳಿ ಮೊಟ್ಟೆಗೆ ಬರ: ಏರಿದ ದರ

ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ  ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…

2 hours ago

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

12 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

12 hours ago