ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ ಮತ್ತು ಮನುಷ್ಯರ ನಡುವೆ ಸಂಘರ್ಷ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ರಾಜ್ಯ ಸರ್ಕಾರವು ಮುಂದಾಗಿದೆ.
ಕಳೆದ ಕೆಲವು ವರ್ಷಗಳಿಂದ ಅರಣ್ಯ ಪ್ರದೇಶದ ಆಸುಪಾಸಿನಲ್ಲಿರುವ ಪ್ರದೇಶಗಳಲ್ಲಿನ ಜನರ ಮೇಲೆ ಕಾಡಾನೆಗಳು ದಾಳಿ ಮಾಡುತ್ತಿರುವುದು ವರದಿ ಆಗಿದೆ.
ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು, ಹೆಚ್ಚಾಗಿ ಕಾಡನೆಗಳು ದಾಳಿ ಮಾಡುತ್ತಿರುವ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಆನೆ ಟಾಸ್ಕ್ ಫೋರ್ಸ್ ರಚಿಸಲು ಮುಂದಾಗಿದೆ.
ಆನೆ ಮತ್ತು ಮಾನವ ಸಂಘರ್ಷವನ್ನು ತಪ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಎಲಿಫಾಂಟ್ ಟಾಸ್ಕ್ ಪೋರ್ಸ್ ರಚನೆಗೆ ನಿರ್ಧರಿಸಲಾಗಿದೆ.
ಹಾಸನ, ಚಿಕ್ಕಮಗಳೂರು, ಮೈಸೂರು, ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು, ಈ ನಿರ್ದಿಷ್ಟ ಜಿಲ್ಲೆಗಳಲ್ಲಿ ಆನೆಗಳಿಂದ ಆಗುವ ದಾಳಿಯನ್ನು ತಪ್ಪಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಗೊಂದರಂತೆ ಉಪಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲಿಫಾಂಟ್ ಟಾಸ್ಕ್ ಫೋರ್ಸ್ ರಚಿಸಲು ತೀರ್ಮಾನಿಸಲಾಗಿದೆ.
ಟಾಸ್ಕ್ ಫೋರ್ಸ್ಗಳನ್ನು ತಕ್ಷಣದಿಂದಲೇ ರಚಿಸಿ ಕಾರ್ಯಪ್ರವೃತ್ತರಾಗಬೇಕಿದ್ದು,
ಆಯಾ ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ಜಾರಿಗೆ ತರಬೇಕಿರುವ ಪ್ರಮುಖ ಅಂಶಗಳನ್ನು ಈ ರೀತಿ ಸೂಚಿಸಲಾಗಿದೆ.
ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು, ಜನವಸತಿ, ಕೃಷಿ ಪ್ರದೇಶ ಹಾಗೂ ಕಾಫಿ ಎಸ್ಟೇಟ್ ಗಳಲ್ಲಿ ಆನೆಗಳ ಚಲನವಲನ ಗುರುತಿಸಿ ಅರಣ್ಯಕ್ಕೆ ಆನೆಗಳನ್ನು ಹಿಮ್ಮೆಟ್ಟಿಸುವುದು ಮುಂತಾದ ಕಾರ್ಯಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ಕೈಗೊಳ್ಳಬೇಕು.
- ಕಾಡಾನೆ ಹಾವಳಿ ಕಂಡುಬರುವ ಸ್ಥಳಗಳಲ್ಲಿ ಆನೆಗಳ ಚಲನವಲನಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಅರಣ್ಯ ಪ್ರದೇಶದೊಳಗೆ ಸಂಚರಿಸದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು.
- ಪ್ರತಿ ಟಾಸ್ಕ್ ಫೋರ್ಸ್ (Elephant taskforce) ಕೇಂದ್ರಸ್ಥಾನದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಿ ದೂರವಾಣಿ ಸಂಖ್ಯೆಯನ್ನು ಪ್ರಚುರಪಡಿಸುವುದು.
- ಆನೆಗಳನ್ನು ಹಿಮ್ಮೆಟ್ಟಿಸಲು ಅಗತ್ಯವಿರುವ ವಾಕಿಟಾಕಿ, ಬಂದೂಕು, ಪಟಾಕಿ ಇನ್ನಿತರೆ ಅವಶ್ಯಕ ಸಲಕರಣೆಗಳನ್ನು ಅರಣ್ಯ ಪಡೆ ಮುಖ್ಯಸ್ಥರು ಒದಗಿಸುವುದು
- ಅರಣ್ಯ ಪಡೆ ಮುಖ್ಯಸ್ಥರು ಜಿಲ್ಲಾ ಟಾಸ್ಕ್ ಪೋರ್ಸ್ಗೆ ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕರನ್ನು ಸ್ಥಳ ನಿಯುಕ್ತಿಗೊಳಿಸಿ ಕೂಡಲೇ ಆದೇಶ ಹೊರಡಿಸುವುದು.
- ಆನೆ ಹಾವಳಿ ಪ್ರದೇಶಗಳಿಗೆ ಕೂಡಲೇ ತಲುಪಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಟಾಸ್ಕ್ ಪೋರ್ಸ್ಗೆ ಮೂರು ಬೊಲೆರೋ ಜೀಪ್ಗಳನ್ನು ಒದಗಿಸುವುದು ಹಾಗೂ ಕ್ಯಾಂಟರ್ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನಿಯೋಜಿಸುವುದು.
- ಆನೆಗಳನ್ನು ಹಿಮ್ಮೆಟ್ಟಿಸುವ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ಸಹಾಯ ಪಡೆಯುವುದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.