ಬೆಂಗಳೂರು: ಅಕ್ರಮ ಡಿನೋಟಿಫಿಕೇಶನ್ ಪ್ರಕರಣದ ಆರೋಪಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಮುಂದಿನ ವಿಚಾರಣೆಯಲ್ಲಿ ತಪ್ಪದೇ ಹಾಜರಾಗಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿಳಿಸಿದೆ. ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಮಾಹಿತಿ ಹಕ್ಕು ಕಾರ್ಯಕರ್ತ ಎಂ ಎಸ್ ಮಹದೇವಸ್ವಾಮಿ ಅವರು ದಾಖಲಿಸಿರುವ ಪ್ರಕರಣವನ್ನು ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ, ಈ ಆದೇಶವನ್ನು ಹೊರಡಿಸಿದೆ.ಈ ಪ್ರಕರಣದ ವಿಚಾರಣೆ ವೇಳೆ, ಪ್ರಕರಣದ ಇತರ ಆರೋಪಿಗಳಾದ ಪದ್ಮಾ, ಶ್ರೀದೇವಿ, ಚೇತನ್ ಕುಮಾರ್, ಕೆ ಬಿ ಶಾಂತಮ್ಮ, ಆರ್ ಬಾಲಕೃಷ್ಣ, ಜಿ ಮಲ್ಲಿಕಾರ್ಜುನ ಮತ್ತು ಪಿ ಜಗದೀಶ್ ಅವರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಆದರೆ, ಮೊದಲನೇ ಆರೋಪಿಯಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಆರನೇ ಆರೋಪಿ ರೇಖಾ ಎಸ್. ಚಂದ್ರು, ಏಳನೇ ಆರೋಪಿ ಯೋಗ ಮೂರ್ತಿ, 8ನೇ ಆರೋಪಿ ನರಸಿಂಹಲು ನಾಯ್ಡು, 10ನೇ ಆರೋಪಿ ಟಿ ಮುರಳೀಧರ್, 12ನೇ ಆರೋಪಿ ಇ ಎ ಯೋಗೇಂದ್ರನಾಥ್, 14 ಹಾಗೂ 18 ನೇ ಆರೋಪಿಗಳಾದ ಡಿ ಎಸ್ ದೀಪಕ್, ಎಂ ಸುಬ್ರಮಣಿ, ಬಾಲಾಜಿ ಇನ್ಫ್ರಾ, ಶುಭೋದಯ ಬಿಲ್ಡರ್ಸ್ ಮತ್ತು ಸನ್ರೈಸ್ ಬಿಲ್ಡರ್ಸ್ ಪ್ರತಿನಿಧಿಗಳು ಹಾಜರಾತಿಯಿಂದ ವಿನಾಯಿತಿ ಕೋರಿದ್ದರು.ಮೊದಲ ಆರೋಪಿಯಾದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಮುಂದಿನ ವಿಚಾರಣೆಗೆ ತಪ್ಪದೇ ಹಾಜರುಪಡಿಸಲಾಗುವುದು ಎಂದು ಕುಮಾರಸ್ವಾಮಿ ಅವರ ಪರ ವಕೀಲ ನ್ಯಾಯಪೀಠಕ್ಕೆ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿದೆ.