ಚಿಕ್ಕಬಳ್ಳಾಪುರ : ಕೋಳಿಫಾರಂ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಬಳಿಯ ಹೊಲೆಯರಹಳ್ಳಿ ಬಳಿ ನಡೆದಿದೆ.
ನೇಪಾಳ ಮೂಲದವರಾದ ಕಾಲೇ ಸರೇರಾ (60), ಲಕ್ಷ್ಮಿ ಸರೇರಾ (50), ಉಷಾ ಸರೇರಾ (40) ಹಾಗೂ ಪೂಲ್ ಸರೇರಾ (16) ಮೃತಪಟ್ಟವರು. ಸ್ಮಶಾನ ರಸ್ತೆಯಲ್ಲಿರುವ ಕೋಳಿ ಫಾರಂನಲ್ಲಿ 8 ದಿನಗಳ ಹಿಂದೆಯಷ್ಟೇ ಕೆಸಲ ಅರಸಿ ಕುಟುಂಬ ಸಮೇತ ಇವರು ಬಂದಿದ್ದರು.
ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದ್ದವರು ಭಾನುವಾರ ಬೆಳಗ್ಗೆ ನೋಡಿದಾಗ ಮಲಗಿದ್ದಂತೆಯೇ ಎಲ್ಲರೂ ಶವವಾಗಿ ಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ಕೋಳಿ ಫಾರಂ ಮಾಲೀಕ ಕರೆ ಮಾಡಿದಾಗ ಕರೆ ಸ್ವೀಕರಿಸದ ಕಾರಣ, ಇದರಿಂದ ಅನುಮಾನಗೊಂಡು ಪಕ್ಕದ ಊರಿನ ಕೋಳಿ ಫಾರಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೃತರ ಸಂಬಂಧಿಕರಿಗೆ ಕರೆ ಮಾಡಿದ್ದಾರೆ. ಅವರು ಶೆಡ್ ಕಿಟಕಿ ಬಳಿ ಹೋಗಿ ನೋಡಿದಾಗ, ಮಲಗಿದ್ದವರು ಮಲಗಿದ್ದಂತೆಯೇ ಸಾವನ್ನಪ್ಪಿರುವುದು ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಂದೇ ಕುಟುಂಬದ ನಾಲ್ವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸೊಳ್ಳೆ ಕಾಟ ಎಂದು ಕುಟುಂಬಸ್ಥರು ಇದ್ದಿಲು ಮೂಲಕ ಹೊಗೆ ಹಾಕಿದ್ದರು. ಶೆಡ್ ನ ಕಿಟಕಿ ಬಾಗಿಲು ಸಂಪೂರ್ಣ ಮುಚ್ಚಿದ ಹಿನ್ನೆಲೆ ಹೊಗೆ ತುಂಬಿಕೊಂಡಿದೆ. ಕೋಣೆ ತುಂಬಾ ಹೊಗೆ ತುಂಬಿಕೊಂಡು ಆಮ್ಲಜನಕದ ಕೊರತೆಯಿಂದ ನಾಲ್ವರು ಸಾವನ್ನಪ್ಪಿರುವ ಶಂಕೆ ಎದುರಾಗಿದೆ.