ಬೆಂಗಳೂರು : ತನ್ನ ಮನೆ ಪಕ್ಕದ ನಿರ್ಮಾಣ ಹಂತದ ಕಟ್ಟಡದ ಆವರಣದಲ್ಲಿನ ತೆರೆದ ನೀರಿನ ಸಂಪ್ಗೆ ಆಕಸ್ಮಿಕವಾಗಿ ಬಿದ್ದು 14 ವರ್ಷದ ಬುದ್ಧಿಮಾಂದ್ಯ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಡೇರಹಳ್ಳಿಯ ಮುನೇಶ್ವರ ಬಡಾವಣೆ ನಿವಾಸಿ ಸಾಯಿ ಚರಣ್ (14) ಮೃತ ದುರ್ದೈವಿ. ತನ್ನ ಮನೆ ಪಕ್ಕದ ನಿರ್ಮಾಣದ ಮನೆ ಕಟ್ಟಡದ ನೀರಿನ ಸಂಪ್ಗೆ ಸಂಜೆ 5.30ರ ಸುಮಾರಿಗೆ ಬಿದ್ದು ಸಾಯಿ ಮೃತಪಟ್ಟಿದ್ದು, ಕೆಲ ಹೊತ್ತಿನ ಬಳಿಕ ಮಗುವಿಗಾಗಿ ಪೋಷಕರು ಹುಡುಕಾಡಿದಾಗ ನೀರಿನ ಸಂಪ್ನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಟೈಲರ್ ರಾಜು ಅವರು, ಮುನೇಶ್ವರ ಬಡಾವಣೆಯಲ್ಲಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದರು. ಅವರ ಕಿರಿಯ ಪುತ್ರ ಚರಣ್ ಬುದ್ಧಿಮಾಂದ್ಯನಾಗಿದ್ದು, ಹಲವು ಕಡೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದರೂ ಆರೋಗ್ಯ ಸುಧಾರಣೆ ಕಂಡಿರಲಿಲ್ಲ. ಮನೆಯಲ್ಲಿ ತಾಯಿ ಇದ್ದಾಗ ಹೊರಗೆ ಬಂದ ಆತ, ಆಟವಾಡುತ್ತ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆ ಕಟ್ಟಡದ ಬಳಿಗೆ ತೆರಳಿದ್ದಾನೆ. ಆ ವೇಳೆ ಆಕಸ್ಮಿಕವಾಗಿ ತೆರೆದ ನೀರಿನ ಸಂಪ್ಗೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.