ರಾಜ್ಯ

ದಲಿತರ ಬಗ್ಗೆ ಮಾತಾಡೋ ನೈತಿಕತೆ ಬಿಜೆಪಿಯವರಿಗಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದ ಘನತೆವೆತ್ತ ರಾಜ್ಯಪಾಲರಾಗಿರುವ ಥಾವರ್ ಚಂದ್ ಗೆಹೋತ್ ಅವರ ತಪ್ಪು ನಡೆಯ ಬಗೆಗಿನ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಾಗದ ರಾಜ್ಯದ ಬಿಜೆಪಿ ನಾಯಕರು “ದಲಿತ ಗುರಾಣಿ” ಬಳಸುತ್ತಿರುವುದು ಸಮಸ್ತ ಸ್ವಾಭಿಮಾನಿ ದಲಿತ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ. “ಹಿಂದುಗಳಲ್ಲಿ ಜಾತಿಯೇ ಇಲ್ಲ, ಧರ್ಮವೇ ಎಲ್ಲ” ಎಂದು ಉಪದೇಶ ಮಾಡುತ್ತಿರುವ ಬಿಜೆಪಿ ನಾಯಕರ ಬುಡಕ್ಕೆ ನೀರು ಬಂದಾಗ ಜಾತಿ ನೆನಪಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಗುರುವಾರ(ಆ.22) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ರಾಜ್ಯಪಾಲರಿಗೆ ಅವಮಾನವಾಗಿದೆ ಎಂದು ಪ್ರತಿಭಟಿಸುತ್ತಿರುವ ರಾಜ್ಯದ ಬಿಜೆಪಿ ನಾಯಕರಿಗೆ ನನ್ನ ಕೆಲವು ಸರಳ ಪ್ರಶ್ನೆಗಳಿವೆ ಎಂದಿದ್ದಾರೆ.

ಮೊದಲನೆಯದಾಗಿ, ದಲಿತ ಸಮುದಾಯಕ್ಕೆ ಸೇರಿರುವ ಥಾವರಚಂದ್ ಗೆಹೋತ್ ಅವರ ಬಗ್ಗೆ ನಿಮ್ಮಲ್ಲಿ ಅಷ್ಟೊಂದು ಗೌರವ ಮತ್ತು ಅಭಿಮಾನವಿದ್ದರೆ ಕೇಂದ್ರ ಸಚಿವ ಸಂಪುಟದಲ್ಲಿರಬೇಕಾಗಿದ್ದ ಅವರನ್ನು ಇಲ್ಲಿ ತಂದು “ಪಂಜರದ ಗಿಣಿ” ಯನ್ನಾಗಿ ಯಾಕೆ ಮಾಡಿದ್ದೀರಿ? “ಮಾರ್ಗದರ್ಶಕ ಮಂಡಳಿ ಎಂಬ ವನವಾಸಾಶ್ರಮ” ಸೇರುವಷ್ಟು ವಯಸ್ಸಾಗದೆ ಇದ್ದರೂ ಅವರ ಸಕ್ರಿಯ ರಾಜಕೀಯ ಜೀವನವನ್ನು ಯಾಕೆ ಮೊಟಕುಗೊಳಿಸಿದಿರಿ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸಚಿವ ಸ್ಥಾನದಿಂದ ವಂಚಿತರನ್ನಾಗಿ ಮಾಡಿ, ತಮ್ಮ ರಾಜಕೀಯ ವಿರೋಧಿಗಳ ವಿರುದ್ಧದ ದ್ವೇಷದ ರಾಜಕಾರಣಕ್ಕೆ ದಲಿತ ಸಮುದಾಯದ ನಾಯಕನನ್ನು ದುರ್ಬಳಕೆ ಮಾಡಿಕೊಳ್ಳುವುದು ಆ ಸಮುದಾಯಕ್ಕೆ ಮಾಡುವ ಅನ್ಯಾಯ-ಅವಮಾನ ಅಲ್ಲವೇ?ಬಿಜೆಪಿ ನಾಯಕರೇ, ದಲಿತ ನಾಯಕರೊಬ್ಬರನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯೂ ಚುಚ್ಚಲಿಲ್ಲವೇ? ಎಂದು ಖಾರವಾಗಿ ಕೇಳಿದ್ದಾರೆ.

ದಲಿತರನ್ನು ಬಳಸಿ ಬಿಸಾಡುವ ಬಿಜೆಪಿ ಮತ್ತು ಸಂಘ ಪರಿವಾರದ ಪಿತೂರಿ ರಾಜಕಾರಣವನ್ನು ಅರ್ಥಮಾಡಿಕೊಳ್ಳುವಷ್ಟು ದಲಿತ ಸಮುದಾಯ ಜಾಗೃತವಾಗಿದೆ. ಈಗ ನೀವು ದಲಿತರ ಹೆಸರಲ್ಲಿ ಸುರಿಸುತ್ತಿರುವ ಮೊಸಳೆ ಕಣ್ಣೀರಿನ ಹಿಂದಿನ ಪ್ರಾಮಾಣಿಕತೆ ತಿಳಿಯದಷ್ಟು ದಡ್ಡರಲ್ಲ. ಕನಿಷ್ಠ ಅಟಲ್ ಬಿಹಾರಿ ವಾಜಪೇಯಿ ಅವರು ದಲಿತ ಸಮುದಾಯಕ್ಕೆ ಸೇರಿರುವ ಬಂಗಾರು ಲಕ್ಷ್ಮಣ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಆದರೆ ಬಿಜೆಪಿಯೊಳಗಿನ “ಸಂಘಿ ಮನಸ್ಸು” ಅದನ್ನು ಸಹಿಸಿಕೊಳ್ಳದೆ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿತು, ಕೊನೆಗೆ ಅದೇ ಕೊರಗಿನಲ್ಲಿ ಅವರು ಸಾವಿಗೀಡಾದರು ಎಂದು ಹೇಳಿದ್ದಾರೆ.

ದಲಿತ ಸಮುದಾಯದಕ್ಕೆ ಸೇರಿರುವ ನಮ್ಮ ಪಕ್ಷದ ಈಗಿನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಹಿರಿಯ ನಾಯಕರು ಎಷ್ಟು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನೋಡಿ ಕಲಿಯಿರಿ ಎಂದು ಸಲಹೆ ಮಾಡಿದ್ದಾರೆ.

ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವ, ಮೀಸಲಾತಿಯನ್ನು ವಿರೋಧಿಸುತ್ತಿರುವ ಮತ್ತು ಜಾತಿ ತಾರತಮ್ಯವನ್ನು ಅಂತರಂಗದಲ್ಲಿ ಒಪ್ಪಿಕೊಂಡು ಬಹಿರಂಗದಲ್ಲಿ ಜಾತ್ಯತೀತತೆಯ ಸೋಗುಹಾಕಿರುವ ನಿಮಗೆ ದಲಿತರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ನಿಮಗೆ ದಲಿತ ಸಮುದಾಯದ ಬಗ್ಗೆ ನಿಜವಾಗಿಯೂ ಗೌರವ ಇದ್ದರೆ ಥಾವರಚಂದ್ ಗೆಹೋತ್ ಅವರ ಮೇಲೆ ಕೆಟ್ಟ ಕೆಲಸ ಮಾಡಲು ರಾಜಕೀಯ ಒತ್ತಡ ಹೇರಲು ಹೋಗದೆ, ಅವರು ಸಂವಿಧಾನದತ್ತವಾಗಿ ಕರ್ತವ್ಯ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಿ, ಈ ಪ್ರತಿಭಟನೆ, ಪ್ರತಿರೋಧದ ನಾಟಕಗಳನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಡಿ.26ರಿಂದ ಕೊಡವ ಹಾಕಿ ಚಾಂಪಿಯನ್ ಟ್ರೋಫಿ

ಪುನೀತ್ ಕೊಡವ ಹಾಕಿ ಅಕಾಡೆಮಿ ಆಶ್ರಯದಲ್ಲಿ ಆಯೋಜನೆ; ವಿಜೇತ ತಂಡಕ್ಕೆ ೨ ಲಕ್ಷ ರೂ. ಬಹುಮಾನ ಮಡಿಕೇರಿ: ಕೊಡವ ಹಾಕಿ…

18 mins ago

ಡಿ.21ರಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಪ್ರತಿದಿನ ರಾತ್ರಿ ಅರಮನೆಗೆ ದೀಪಾಲಂಕಾರ ಹೂವಿನಿಂದ ಶೃಂಗೇರಿ ದೇವಸ್ಥಾನದ ಮಾದರಿ ನಿರ್ಮಾಣ ಪುಷ್ಪ ಪ್ರಿಯರ ಕಣ್ಮನ ಸೆಳೆಯಲಿರುವ ವಿವಿಧ ಮಾದರಿಗಳು…

27 mins ago

ಪುಕ್ಕಟೆ ಪಾರ್ಕಿಂಗ್ ಮಾಡಬೇಕೆ? ಇಲ್ಲಿಗೆ ಬನ್ನಿ!

ಎಸ್.ಎಸ್.ಭಟ್ ಹಾಗಂತ ಇಲ್ಲಿ ಫಲಕ ಹಾಕಿಲ್ಲ, ವಾಹನ ನಿಲ್ಲುವುದು ತಪ್ಪುತ್ತಿಲ್ಲ; ಇದು ನಂಜನಗೂಡಿನ ತಾಯಿ-ಮಕ್ಕಳ ಆಸ್ಪತ್ರೆ ಆವರಣದ ಸ್ಥಿತಿ ನಂಜನಗೂಡು:…

35 mins ago

ಮನ್ರೆಗಾ ಓಕೆ… ವಿಬಿ ಜೀ ರಾಮ್ ಜೀ ಯಾಕೆ?

ಮೈಸೂರು: ಕೇಂದ್ರದ ಯುಪಿಎ ಸರ್ಕಾರ ೨೦೦೫ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯಡಿ ಗ್ರಾಮೀಣ ಕುಟುಂಬಗಳಲ್ಲಿ ಜೀವನೋಪಾಯಕ್ಕೆ ಭದ್ರತೆ…

41 mins ago

ಆಕಸ್ಮಿಕ ಬೆಂಕಿ : ಒಕ್ಕಣೆ ಕಣದ ರಾಗಿ ಫಸಲು ನಾಸ

ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…

11 hours ago