ನಾಳೆ ಮೈಸೂರು, ಮಂಡ್ಯ, ಕೊಡಗಿಗೆ ಯೆಲ್ಲೋ ಅಲರ್ಟ್
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮದಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಭಾನುವಾರ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು, ಬೆಂ. ಗ್ರಾಮಾಂತರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬಿದ್ದಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಆ.೨೨ರಿಂದ ಮುಂದಿನ ಮೂರು ದಿನ ಹಾಗೂ ಮೈಸೂರು, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು ಮತ್ತು ಕೋಲಾರದಲ್ಲಿ ಆ. ೨೪ರಂದು ಭಾರಿ ಮಳೆ ಬೀಳುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಚದುರಿದಂತೆ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ವಾತಾವರಣ ಬದಲು: ವಾರದಿಂದ ಮಳೆ ಕುಂಠಿತ ಕಾರಣದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ದಿಢೀರ್ ಏರಿಕೆಯಾಗಿತ್ತು. ಮೈಸೂರು, ಮಂಡ್ಯ, ಬೆಂಗಳೂರು, ಮಂಗಳೂರು, ಕಲಬುರಗಿ, ಬೀದರ್, ಗದಗ, ರಾಯಚೂರು ಮತ್ತು ವಿಜಯಪುರದಲ್ಲಿ ಗರಿಷ್ಠ ತಾಪಮಾನದಲ್ಲಿ ಆಗಸ್ಟ್ ೨ನೇ ವಾರದಲ್ಲಿದ್ದ ೨೨-೨೪ ಡಿಗ್ರಿ ಸೆಲ್ಸಿಯಸ್ನಿಂದ ೩೦-೩೨ ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿತ್ತು. ತಿಳಿ ವಾತಾವರಣ ಇರುವುದರಿಂದ ಬೇಸಿಗೆಗಾಲದಂತೆ ಭಾಸವಾಗುತ್ತಿತ್ತು. ಪ್ರಸ್ತುತ ತಿಂಗಳು ಮೊದಲ ವಾರದಲ್ಲಿ ರಾಜ್ಯಾದ್ಯಂತ ಭಾರಿ ಮಳೆಯಾಗಿತ್ತು. ನಂತರ ಕುಂಠಿತವಾಗಿತ್ತು. ಇದೀಗ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾದ ಹಿನ್ನೆಲೆಯಲ್ಲಿ ಮಳೆಯಾಗುತ್ತಿದೆ.
ಸಧ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಮುಂದಿನ ೨-೩ ದಿನಗಳಲ್ಲಿ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಆದರೆ, ಚಂಡಮಾರುತ ಉಂಟಾಗಲಿದೆಯೇ ಅಥವಾ ಇಲ್ಲವೋ ಎಂಬ ಕುರಿತು ಒಂದೆರಡು ದಿನಗಳಲ್ಲಿ ನಿಖರ ಮಾಹಿತಿ ಸಿಗಲಿದೆ. ಒಟ್ಟಿನಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ. ಇದರ ಪ್ರಭಾವದಿಂದ ರಾಜ್ಯಕ್ಕೂ ಮಳೆಯಾಗಲಿದೆ.
-ಎಂ.ಬಿ.ರಾಜೇಗೌಡ, ಹವಾಮಾನ ವೈಪರೀತ್ಯ ವಿಜ್ಞಾನಿ