ಹನೂರು : ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಲಂಚವಿಲ್ಲದೆ ಯಾವುದೇ ಕೆಲಸಗಳಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹನೂರು ಪಟ್ಟಣದ ಹೊರವಲಯದ ಆರ್ ಎಸ್ ದೊಡ್ಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಜಾ ಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರದ ಪಿಎಸ್ಐ ಹಗರಣದಲ್ಲಿ ಹಿರಿಯ ಅಧಿಕಾರಿಗಳೇ ಜೈಲಿನಲ್ಲಿದ್ದಾರೆ. ಇದಕ್ಕಿಂತ ಉದಾಹರಣೆ ಬೇಕೇ, ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿ ಮಾಡಿ ಬಿಲ್ ಪಾಸ್ ಮಾಡಲು ಸಚಿವರು ಕೇಳಿದ 40 ಪರ್ಸೆಂಟ್ ಲಂಚಕ್ಕೆ ಬೇಸತ್ತು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಚಾರವನ್ನೆಲ್ಲ ತನಿಖೆ ಮಾಡಿಸಲಾಗುವುದು. ಹೃದಯ ಮನಸ್ಸುಗಳನ್ನು ಕತ್ತರಿಸುವ ಕೆಲಸವನ್ನು ಬಿಜೆಪಿ ಮಾಡುತ್ತದೆ. ಆದರೆ, ಕಾಂಗ್ರೆಸ್ ಸೂಜಿಯ ಹಾಗೇ ಜೋಡಿಸುವ ಕೆಲಸ ಮಾಡುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ೨೫೦ ಯೂನಿಟ್ ಉಚಿತ ವಿದ್ಯುತ್, ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ೨ ಸಾವಿರ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.
ಪ್ರಜಾಧ್ವನಿ ಸಮಾವೇಶವು ಒಂದು ಐತಿಹಾಸಿಕ ಸಮಾವೇಶವಾಗಿದೆ. ನಾನು ದಿ.ರಾಜೂಗೌಡರ ಜೊತೆ ಕೆಲಸ ಮಾಡಿದ್ದೇನೆ. ಶಾಸಕರಾಗಿ ಆರ್.ನರೇಂದ್ರ, ಸಂಸದರಾಗಿ ಆರ್.ಧ್ರುವನಾರಾಯಣ ಅವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕ್ಷೇತ್ರದಲ್ಲಿ ೭೫೦೦ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ನನ್ನ ಕ್ಷೇತ್ರದಲ್ಲಿ ೧೫೦ ಸಮುದಾಯ ಭವನ ನಿರ್ಮಾಣ ಮಾಡಲು ಆಗಿಲ್ಲ. ಆದರೆ, ನರೇಂದ್ರ ಅವರು ತಮ್ಮ ಕ್ಷೇತ್ರದಲ್ಲಿ ೧೫೦ಕ್ಕೂ ಹೆಚ್ಚು ಸಮುದಾಯ ಭವನಗಳನ್ನು ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.
ಶಾಸಕ ಆರ್.ನರೇಂದ್ರ ಮಾತ ನಾಡಿ, ಕಳೆದ ಮೂರುವರೆ ವರ್ಷದಿಂದ ಬಿಜೆಪಿ ಸರ್ಕಾರ ದಿಂದ ಕ್ಷೇತ್ರಕ್ಕೆ ಯಾವುದೇ ಕೊಡುಗೆ ಇಲ್ಲ. ಕಳೆದ ತಿಂಗಳು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ಹನೂರಿಗೆ ಆಗಮಿಸಿದ್ದರು. ೯೦೦ ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಅದೆಲ್ಲ ಸಿದ್ದರಾಮ ಯ್ಯ ಅವರ ಕಾಲದಲ್ಲಿ ಆಗಿದ್ದು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಕೆರೆ ತುಂಬಿಸುವ ಯೋಜನೆಗೆ ೧೩೨ ಕೋಟಿ ಬಿಡುಗಡೆ ಮಾಡಿದರು. ೧೫ ಸಾವಿರ ಎಕರೆ ಜಮೀನಿಗೆ ನೀರು ಸಿಗುತ್ತಿದೆ. ಕೊಳ್ಳೇಗಾಲ ದಿಂದ ಹನೂರು ತನಕ ಕೆಶಿಪ್ ಯೋಜನೆಯಡಿ ರಸ್ತೆ ಅಭಿವೃ ದ್ಧಿಗೆ ಕಾಂಗ್ರೆಸ್ ಅವಧಿಯಲ್ಲಿ ಹಣ ಬಿಡುಗಡೆಯಾಗಿತ್ತು. ಆದರೆ, ಹನೂರಿನಿಂದ ಮ.ಬೆಟ್ಟ ತನಕ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ, ತಾಲೂಕು ಕೇಂದ್ರವಾಗಿ 5 ವರ್ಷಗಳ ಕಳೆದರೂ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ನಿರ್ಮಾಣ ಮಾಡಲು ಅನುದಾನ ನೀಡಿಲ್ಲ, ಹನೂರು ಪಟ್ಟಣದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಉತ್ತಮ ರಸ್ತೆ ಮಾಡಲು ಅನುದಾನ ನೀಡಿಲ್ಲ ಇದೊಂದು ಭ್ರಷ್ಟ ಸರ್ಕಾರ ಎಂದು ದೂರಿದರು.
ಕ್ಷೇತ್ರದಲ್ಲಿ ೩ ಅರಣ್ಯ ಪ್ರದೇ ಶಗಳಿದ್ದು ೩೫ ಸಾವಿರ ಗ್ಯಾಸ್ನ ಉಚಿತವಾಗಿ ಕೊಡಿಸಿದ್ದೇನೆ. ಹನೂರಿಗೆ ಮಿನಿ ವಿಧಾನಸೌಧಕ್ಕೆ ಕಳೆದ ಬಜೆಟ್ನಲ್ಲಿ ಘೋಷಣೆ ಮಾಡಿದ ಯಾವ ಯೋಜನೆ ಗಳನ್ನು ನೀಡಿಲ್ಲ. ಬೆಲೆ ಏರಿಕೆಯಿಂದಾಗಿ ಜನತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜನ ವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರು ಶ್ರಮಿಸುವಂತೆ ಮನವಿ ಮಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ ಬಿಜೆಪಿ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಎಸ್ ಸಿ ಎಸ್ ಟಿ ಸಮುದಾಯಕ್ಕೆ 30,000 ಕೋಟಿ ಅನುದಾನ ಮೀಸಲಿಟ್ಟಿದ್ದರು. ಆದರೆ ಬಿಜೆಪಿ ಸರ್ಕಾರ ಅದನ್ನು ಕಡಿತಗೊಳಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹನೂರು ಕಾಂಗ್ರೆಸ್ ನ ಭದ್ರಕೋಟೆ ಈ ಬಾರಿಯೂ ಶಾಸಕ ಆರ್ ನರೇಂದ್ರನವರನ್ನು ನಾಲ್ಕನೇ ಬಾರಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ರಾಜ್ಯಸಭಾ ಸದಸ್ಯ ಬಿ.ಸಿ.ಚಂದ್ರಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ನಟ ಸಾಧುಕೋಕಿಲ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ. ವಿ ಶ್ರೀನಿವಾಸ್, ಕರ್ನಾಟಕದ ಉಸ್ತುವಾರಿ ಹಾಗೂ ಕೇರಳ ರಾಜ್ಯದ ಶಾಸಕ ಅನಿಲ್ಕುಮಾರ್, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜು, ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ಲತಾ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಶಾಹುಲ್, , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮುಕುಂದವರ್ಮ, ಈಶ್ವರ್ ಪಪಂ ಉಪಾಧ್ಯಕ್ಷ ಗಿರೀಶ್ ಸದಸ್ಯರುಗಳಾದ ಸೋಮಶೇಖರ್, ಸುದೇಶ್ ಸಂಪತ್, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಗುಂಡಾಪುರ ಮಾದೇಶ್, ಬಿದರಹಳ್ಳಿ ಸುರೇಶ್, ದಿನಳ್ಳಿ ಗ್ರಾಪಂ ಅಧ್ಯಕ್ಷ ಮುರುಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.