ರಾಜ್ಯದ ಐದು ಸಾವಿರ ಮಕ್ಕಳ ಸಿರೋ (ಎಸ್ಇಆರ್ಒ SERO) ಸರ್ವೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಅಬ್ಬರವನ್ನು ಆರಂಭದಲ್ಲಿಯೇ ಚಿವುಟಿ ಹಾಕುವ ಜತೆಗೆ, ಮಕ್ಕಳ ದೇಹದಲ್ಲಿರುವ ಪ್ರತಿರೋಧಕ ಶಕ್ತಿಯನ್ನು ಅಧ್ಯಯನ ಮಾಡುವುದು ಈ ಸರ್ವೆಯ ಲೆಕ್ಕಾಚಾರವಾಗಿದೆ.
ರಾಜ್ಯದ ಕೋವಿಡ್ ತಾಂತ್ರಿಕ ಸಮಿತಿ ವಾರದ ಕೆಳಗೆ ಆರೋಗ್ಯ ಇಲಾಖೆಗೆ ಹೊಸ ಸೂಚನೆ ನೀಡಿತ್ತು. ಕೋವಿಡ್ನ ಸಂಭಾವ್ಯ ನಾಲ್ಕನೇ ಅಲೆಯಲ್ಲಿ ಮಕ್ಕಳಲ್ಲಿ ಕೋವಿಡ್ ತೀವ್ರತೆ ಜತೆಗೆ ಲಸಿಕೆ ಪಡೆಯುವ ಮಕ್ಕಳಲ್ಲಿ ಪ್ರತಿರೋಧಕ ಶಕ್ತಿಯನ್ನು ಅಧ್ಯಯನ ಮಾಡಲು ಈ ಸಿರೋ ಸರ್ವೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ 5,072 ಮಕ್ಕಳನ್ನು ಟಾರ್ಗೆಟ್ ಇಟ್ಟುಕೊಂಡು 4,677 ಮಕ್ಕಳ ಸ್ಯಾಂಪಲ್ ಸಂಗ್ರಹಿಸಲಾಗಿದೆ.
ಮೊದಲ ಲಸಿಕೆ ಪಡೆದವರು: ರಾಜ್ಯದಲ್ಲಿ ವಿಶೇಷವಾಗಿ 6 – 14 ವರ್ಷದೊಳಗಿನ ಮಕ್ಕಳ ಬಗ್ಗೆ ಈ ಸಿರೋ ಸರ್ವೆ ಕೈಗೊಳ್ಳಲಾಗುತ್ತಿದೆ. ಮೊದಲ ಕೋವಿಡ್ ಲಸಿಕೆ ಪಡೆದುಕೊಂಡು ಕೋವಿಡ್ ಸೋಂಕಿತರಾದವರನ್ನು ಮಾತ್ರ ಈ ಸರ್ವೆಗೆ ಪರಿಗಣಿಸಲಾಗುತ್ತಿದೆ. ಕೋವಿಡ್ ಮೂರನೇ ಅಲೆಯಲ್ಲಿ ಲಸಿಕೆ ಪಡೆದವರಲ್ಲಿ ಹೆಚ್ಚು ಕೋವಿಡ್ ಕಾಣಿಸಿಕೊಂಡಿತ್ತು. ಆದರೆ ಲಸಿಕೆ ಪಡೆದವರಲ್ಲಿ ಕೋವಿಡ್ ಸೌಮ್ಯ ಲಕ್ಷಣಗಳನ್ನು ಪ್ರದರ್ಶಿಸಿತ್ತು.
ಇದರ ಹೊರತಾಗಿ ತೀವ್ರ ರೀತಿಯ ಅನಾರೋಗ್ಯ ಸಮಸ್ಯೆ ಲಸಿಕೆ ಪಡೆದುಕೊಂಡವರಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಎಲ್ಲ ಲೆಕ್ಕಚಾರದಲ್ಲಿ ಈ ಬಾರಿ ಲಸಿಕೆ ಪಡೆಯದ ಮಕ್ಕಳು ಎಂದರೆ 0 – 12 ವರ್ಷದೊಳಗಿನ ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಳ್ಳಬಹುದು ಎನ್ನುವ ಉದ್ದೇಶದಿಂದ ರಾಜ್ಯ ಕೋವಿಡ್ ತಾಂತ್ರಿಕ ಸಮಿತಿಯವರು ಕಳೆದ ಮೂರು ಕೋವಿಡ್ ಅಲೆಯಲ್ಲೂ ಒಂದೊಂದು ವರ್ಗದಲ್ಲಿ ಕೋವಿಡ್ ಪ್ರಮಾಣ ಪತ್ತೆ, ಪ್ರತಿರೋಧಕ ಶಕ್ತಿ ಅಲೆಯಲು ಸಿರೋ ಸರ್ವೆ ಮಾಡಿತ್ತು. ಇದೇ ಮೊದಲ ಬಾರಿಗೆ ಮಕ್ಕಳ ವಿಚಾರದಲ್ಲಿ ಸರ್ವೆ ಮಾಡಲಾಗುತ್ತಿದೆ.
ಮಕ್ಕಳ ಆರೋಗ್ಯ ಸ್ಥಿತಿ ಅಧ್ಯಯನ: ರಾಜ್ಯದ ಐದು ಸಾವಿರ ಮಕ್ಕಳನ್ನು ರ್ಯಾಂಡಮ್ ಮಾದರಿಯಲ್ಲಿ ಈ ಸರ್ವೆಗೆ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಮಕ್ಕಳ ಆರೋಗ್ಯ ಸ್ಥಿತಿಗತಿಯನ್ನು ಮುಖ್ಯವಾಗಿ ಅಧ್ಯಯನ ಮಾಡಲಾಗುತ್ತಿದೆ. ಈ ಸರ್ವೆ ಕಾರ್ಯ ಪೂರ್ಣವಾದ ಬಳಿಕ ಮಕ್ಕಳಲ್ಲಿ ಲಸಿಕೆ ಪ್ರಮಾಣ ಹೆಚ್ಚಳ ಮಾಡುವುದು, ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಳ್ಳುವುದಾದರೆ ಪಾಲಿಸಬೇಕಾದ ಮುಂಜಾಗ್ರತಾ ಕ್ರಮ ತಿಳಿಯಲು ಈ ಸರ್ವೆ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ.