ಬೆಂಗಳೂರು: ಅತ್ಯಂತ ವಿಶಿಷ್ಟವಾದ ಹವ್ಯಕ ಭಾಷೆ ಉಳಿಯಬೇಕು, ಈ ಭಾಷೆ ಉಳಿಯುವ ನಿಟ್ಟಿನಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹವ್ಯಕ ಸಮಾಜಕ್ಕೆ ಭರವಸೆ ನೀಡಿದರು.
ನಗರದಲ್ಲಿ ಭಾನುವಾರ ಸಮಾರೋಪಗೊಂಡ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹವ್ಯಕ ಭಾಷೆ ಅಭಿವೃದ್ಧಿಗೆ ಪ್ರತ್ಯಕ ಆಕಾಡೆಮಿ, ವಿಶ್ವವಿದ್ಯಾಲಯ ಹಾಗೂ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು. ಅಂತಹ ಎಲ್ಲಾ ಪ್ರಯತ್ನಗಳಿಗೆ ನನ್ನ ಬೆಂಬಲ ಇದೆ ಎಂದು ಅವರು ಭರವಸೆ ನೀಡಿದರು.
ಅಡಿಕೆ ಬೇಸಾಯದಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಹವ್ಯಕರು ಆತಂಕಪಡಬೇಕಿಲ್ಲ. ನಾನು ಸ್ವತಃ ಅಡಿಕೆ ಬೆಳೆಗಾರನೇ. ಅಡಿಕೆಯ ಬೆಳೆಗಾರರ ಸಂಕಷ್ಟಗಳು ಏನು ಎಂಬುದನ್ನು ನಾನು ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದೇನೆ. ಹೀಗಾಗಿ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಅಡಿಕೆ ಸಂಶೋಧನೆಗೆ ₹10 ಹತ್ತು ಕೋಟಿಯನ್ನು ಕೇಂದ್ರ ಈಗಾಗಲೇ ನೀಡಿದೆ. ಅಡಿಕೆ ಬಗ್ಗೆ ಅಪಪ್ರಚಾರ ಅನಗತ್ಯ, ಅದನ್ನು ಹತ್ತಿಕ್ಕಲು ಕೇಂದ್ರವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.
ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ನಾನು ಸೇರಿದಂತೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರುವ ರಾಜ್ಯದ ಎಲ್ಲ ಸಚಿವರು ಸೇರಿ ಬಗೆಹರಿಸುವ ಬಗ್ಗೆ ಪ್ರಾಮಾಣಿಕ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಹೇಳಿದರು.
ಹವ್ಯಕ ಸಮುದಾಯದ ಹಿರಿಮೆ ಬಗ್ಗೆ ಸಚಿವರ ಮೆಚ್ಚುಗೆ:
ವಿಶೇಷವಾಗಿ ಹವ್ಯಕ ಸಮುದಾಯದ ಹಿರಿಮೆ ಬಗ್ಗೆ ಉಲ್ಲೇಖಿಸಿದ ಕೇಂದ್ರ ಸಚಿವರು; ನಿಮ್ಮ ಸಮುದಾಯ ಗಾತ್ರದಲ್ಲಿ ಸಣ್ಣದು ಇರಬಹುದು. ಆದರೆ, ನಿಮ್ಮ ಸಾಧನೆ, ಬುದ್ಧಿವಂತಿಕೆ, ಸಮಾಜಕ್ಕೆ ನೀವು ಕೊಟ್ಟಿರುವ ಕೊಡುಗೆ ಸಣ್ಣದಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿಯೂ ನಿಮ್ಮ ಛಾಪು ಗಣನೀಯ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.
ಜನಸಂಖ್ಯೆಯಲ್ಲಿಯು ನೀವು ಕಡಿಮೆ ಇದ್ದೀರಿ ಎಂದು ಭಾವಿಸಿದ್ದೀರಿ. ಅದರ ಬಗ್ಗೆ ನೀವು ಆಲೋಚನೆ ಮಾಡಬೇಕಿಲ್ಲ, ದೊಡ್ಡ ಸಮಾಜಗಳು ಕೊಟ್ಟಿರುವಷ್ಟೇ ಕೊಡುಗೆಯನ್ನು ಹವ್ಯಕ ಸಮುದಾಯವೂ ಕೊಟ್ಟಿದೆ. ಸಾಹಿತ್ಯ, ಸಂಗೀತ, ಕಲೆ, ಮಾಧ್ಯಮ ಸೇರಿ ಅನೇಕ ಕ್ಷೇತ್ರಗಳಲ್ಲಿ ನಿಮ್ಮ ಸಮುದಾಯ ಅಚ್ಚಳಿಯದ ಛಾಪು ಮೂಡಿಸಿದೆ ಎಂದು ಕೇಂದ್ರ ಸಚಿವರು ಹೇಳಿದರು.
ನಮ್ಮ ಹಳ್ಳಿಯ ಗ್ರಾಮೀಣ ಸೊಗಡು ಮರೆಯುತ್ತಿದ್ದೇವೆ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂದು ಹೇಳಿದ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರ ಹೇಳಿಕೆ ಸರಿ ಇದೆ. ಹಳ್ಳಿಗಳ ಅಸ್ತಿತ್ವ ನಶಿಸಿ ಹೋಗುತ್ತಿದೆ. ಅದರ ಬಗ್ಗೆ ನಾವು ಆಲೋಚನೆ ಮಾಡಬೇಕಿದೆ. ಹಳ್ಳಿಗಳಲ್ಲಿ ಅನೇಕ ಸಮಸ್ಯೆಗಳು ಹಾಗೆಯೇ ಇವೆ, ಮೂಲಸೌಕರ್ಯಗಳು ಇಲ್ಲ, ಇದನ್ನು ಸುಧಾರಣೆ ಮಾಡುವ ಅಗತ್ಯ ಇದೆ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ನಮ್ಮ ಪೂರ್ವಜರು ಬಹಳ ಶಿಸ್ತಿನಿಂದ ಬದುಕುತ್ತಿದ್ದರು, ಆದರೆ, ಇವತ್ತು ಅಂತಹ ಪರಿಸ್ಥಿತಿ ಇಲ್ಲ. ಹಳ್ಳಿಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲಿ ಅಂತಹ ಶಿಸ್ತು ಬರಬೇಕು. ಇಲ್ಲವಾದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು.
ರಾಮಕೃಷ್ಣ ಹೆಗಡೆ ಅವರ ಸಹೋದರರನ್ನು ನೆನೆದ ಸಚಿವರು:
ಹವ್ಯಕ ಸಮುದಾಯದ ಬಾಂಧವ್ಯದ ಬಗ್ಗೆ ಕೊಂಡಾಡಿದ ಕುಮಾರಸ್ವಾಮಿ ಅವರು; ಬಹಳ ವರ್ಷಗಳ ಹಿಂದಿನ ಮಾತು.. ದಿವಂಗತ ರಾಮಕೃಷ್ಣ ಹೆಗಡೆ ಅವರ ಸಹೋದರ ಗಣೇಶ ಹೆಗಡೆ ಅವರ ಮನೆಗೆ ಒಮ್ಮೆ ಭೇಟಿ ನೀಡಿದ್ದೆ. ಅವರ ಧರ್ಮಪತ್ನಿ ಅವರು ನನಗೆ ಮಾತೃ ಸಮಾನರು. ನಾನು ಹೋದ ಕ್ಷಣ ಅವರೆಷ್ಟು ಸಂತೋಷಪಟ್ಟರು ಎಂದರೆ, ಬಹಳ ದಿನಗಳಿಂದ ತಪ್ಪಿಹೋದ ಮಗ ಮನೆಗೆ ಬಂದ ಎನ್ನುವಷ್ಟು ವಾತ್ಸಲ್ಯ ತೋರಿದರು. ನನಗೆ ಈಗಲೂ ಆ ಸಂದರ್ಭ ಕಣ್ಣಿಗೆ ಕಟ್ಟಿದಂತಿದೆ ಎಂದು ಸ್ಮರಿಸಿಕೊಂಡರು.
ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು, ಹರಿಹರದ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿಗಳು, ಕೂಡಲಿ ಶೃಂಗೇರಿ ಮಹಾ ಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಅಲ್ಲದೇ, ಕಂಚಿ ಕಾಮಕೋಟಿ ಪೀಠದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗಳು ಅನ್ ಲೈನ್ ವೇದಿಕೆಯ ಮೂಲಕ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಮ್ಮೇಳನದ ಗೌರವಾಧ್ಯಕ್ಷ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಹೊರನಾಡು ಕ್ಷೇತ್ರದ ಭೀಮೇಶ್ವರ ಜೋಷಿ, ಮಾಜಿ ಸಚಿವ ಸಿ.ಟಿ.ರವಿ, ವಿಶ್ವವಾಣಿ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್, ಕನ್ನಡಪ್ರಭ ಪತ್ರಿಕೆ ಸಮೂಹ ಸಂಪಾದಕ ರವಿ ಹೆಗಡೆ , ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಗೌಡ ಮತ್ತು ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ ಕೆಜೆ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇಸ್ಲಾಮಾಬಾದ್: ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಇಸ್ಲಾಮಾಬಾದ್‌ನಲ್ಲಿ ಅಮೇರಿಕಾ-ಇರಾನ್ ನಡುವೆ ಕದನ ವಿರಾಮ ಮಾತುಕತೆ ನಡೆದಿದೆ. ಸಂಸದೀಯ ಸ್ಪೀಕರ್ ಮೊಹಮ್ಮದ್…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹೀಟ್ ವೇವ್ ಎಚ್ಚರಿಕೆ…
ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…
ನವದೆಹಲಿ: ಇದೇ ಏಪ್ರಿಲ್.15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…
ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…
ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…