ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಆತಂಕ; ಕೀಟನಾಶಕಕ್ಕೂ ಬಗ್ಗುತ್ತಿಲ್ಲ ಕೀಟಬಾಧೆ
ದಾ.ರಾ.ಮಹೇಶ್
ವೀರನಹೊಸಹಳ್ಳಿ: ಈ ಭಾಗದಲ್ಲಿ ಎಡೆಬಿಡದೆ ಸುರಿದ ಭಾರಿ ಮಳೆಯ ಪರಿಣಾಮ ಇಲ್ಲಿನ ಹೊಲ ಗದ್ದೆಗಳಲ್ಲಿ ಬೆಳೆದಿದ್ದ ಶುಂಠಿ ಬೆಳೆ ಕೊಳೆ ರೋಗದಿಂದ ನೆಲ ಕಚ್ಚುತ್ತಿದ್ದು, ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ಕೃಷಿ ಹಂಗಾಮಿನಲ್ಲಿ ಶುಂಠಿಗೆ ಮತ್ತೆ ಚಿನ್ನದ ಬೆಲೆ ಬಂದಿದ್ದು, ಇದರಿಂದಾಗಿ ಪಟ್ಟಣ ಸೇರಿದಂತೆ ಸುತ್ತಲಿನ ಅರೆ ಮಲೆನಾಡಿನ ಪ್ರದೇಶದಲ್ಲಿ ಶುಂಠಿ ಬೆಳೆ ಹೆಚ್ಚಾಗಿ ಕಂಡು ಬಂದಿದೆ. ಮೊದಲು ಈ ಭಾಗದಲ್ಲಿ ಶುಂಠಿ ಬೆಳೆಯಲಾಗುತ್ತಿರಲಿಲ್ಲ. ಮಲೆನಾಡು ಭಾಗದ ಅನೇಕ ರೈತರು ಈ ಭಾಗಕ್ಕೆ ವಲಸೆ ಬಂದಿದ್ದು ರೈತರ ಕೃಷಿ ಭೂಮಿಯನ್ನು ೨-೩ ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದ್ದು ಶುಂಠಿ ಬೆಳೆಯುತ್ತಿದ್ದಾರೆ.
ಕಳೆದ ೪-೫ ವರ್ಷಗಳ ಅವಧಿಯಲ್ಲಿ ಸುತ್ತಲಿನ ಪ್ರದೇಶದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಶುಂಠಿ ಬೆಳೆಯಲಾಗುತ್ತಿದ್ದು, ಇದೀಗ ಶುಂಠಿಗೆ ರೋಗ ಬಾಧೆ ಒಕ್ಕರಿಸಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಶೇ. ೫೦ ರಷ್ಟು ಪ್ರಮಾಣದಲ್ಲಿ ಶುಂಠಿ ಕೊಳೆ ರೋಗಕ್ಕೆ ತುತ್ತಾಗಿರುವುದು ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದೆ.
ಇಲ್ಲಿ ಎಡಬಿಡದೆ ಸುರಿದ ಮಳೆ ಶುಂಠಿ ಬೆಳೆದಿರುವ ರೈತರ ಆಸೆಗೆ ತಣ್ಣೀರೆರೆಚಿದೆ. ಪ್ರಸ್ತುತ ಅವಧಿಯಲ್ಲಿ ವಾಡಿಕೆಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದಿರುವುದು ಕೊಳೆ ರೋಗ ಹರಡಲು ಕಾರಣವಾಗಿದೆ. ಮಳೆ ಹೆಚ್ಚಾದ ಕಾರಣ ಬ್ಯಾಕ್ಟಿರಿಯಲ್ ವಿಲ್ಟ್, ಪಿಜೋರಿಯಂ ವಿಲ್ಟ್ ಎಂಬ ಕೀಟಾಣುಗಳ ದಾಳಿಯಿಂದ ಬೆಳೆ ಕೊಳೆಯಲು ಆರಂಭಿಸಿದೆ. ಹಂತ ಹಂತವಾಗಿ ಇಡೀ ಶುಂಠಿ ಬೆಳೆಯನ್ನು ಈ ರೋಗ ಆಕ್ರಮಿಸುತ್ತಿರುವುದು ಬೆಳೆಗಾರರನ್ನು ಹೈರಾಣಾಗಿಸಿದೆ.
ಕೀಟನಾಟಕ ದುಬಾರಿ: ಶುಂಠಿಗೆ ತಗುಲಿರುವ ಕೊಳೆ ರೋಗಕ್ಕೆ ಕ್ವಿನಾಲ್ ಫಾಸ್ಟ್, ಮಾನೋಕ್ವೇರಿ ಫಾಸ್ಟ್ಲಿಂಡನ್ ಕೀಟನಾಶಕ ಸಿಂಪಡಿಸಲಾಗುತ್ತಿದೆ. ಇದರ ಬೆಲೆ ದುಬಾರಿ ಕೂಡ. ಆದರೆ ಮಳೆ ಬಿಡುವು ನೀಡದೇ ಎಡಬಿಡದೇ ಸುರಿಯುತ್ತಿರುವ ಕಾರಣ ಎಷ್ಟೇ ಕೀಟನಾಶಕ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಬೆಳೆಗಾರ ಸ್ವಾಮೀಗೌಡ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಒಂದು ಕಂದು ಶುಂಠಿಗೆ ಕೊಳೆ ರೋಗ ಬಂದರೆ ಅದು ಇಡೀ ಭೂಮಿಯನ್ನು ಆಕ್ರಮಿಸುತ್ತದೆ. ಕೊಳೆ ರೋಗದಿಂದ ಶುಂಠಿಯ ಇಳುವರಿ ಕಡಿಮೆಯಾಗುತ್ತದೆ. ಮಾತ್ರವಲ್ಲದೇ ಶುಂಠಿಯ ಗಡ್ಡೆಗಳು ಬೆಳವಣಿಗೆಯನ್ನೇ ಹೊಂದುವುದಿಲ್ಲ. ಇದರಿಂದಾಗಿ ಸಾಕಷ್ಟು ರೈತರು ಅವದಿಗೆ ಮುಂಚಿತವಾಗಿಯೇ ಶುಂಠಿ ಕಿತ್ತು ಕೊಡುವ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಮಳೆ ಹೀಗೆೆುೀಂ ಮುಂದುವರಿದರೆ ಶುಂಠಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ.
ಏಕಾಏಕಿ ಶುಂಠಿ ಬೆಲೆ ಹೆಚ್ಚಳಗೊಂಡಿದ್ದರಿಂದ ಮಲೆನಾಡಿನಿಂದ ಇಲ್ಲಿಗೆ ವಲಸೆ ಬಂದಿರುವ ಸಾಕಷ್ಟು ಸಂಖ್ಯೆಯ ಬೆಳೆಗಾರರು ಈ ಭಾಗದ ರೈತರ ಕೃಷಿ ಭೂಮಿಗೆ ಅಧಿಕ ಹಣ ನೀಡಿ ಗುತ್ತಿಗೆ ಪಡೆದುಕೊಂಡು ಶುಂಠಿ ಬೆಳೆಯಲಾರಂಭಿಸಿದ್ದಾರೆ. ಕಾರ್ಮಿಕರ ಕೊರತೆಯ ನಡುವೆಯೂ ದೂರದ ಊರುಗಳಿಂದ ದುಪ್ಪಟ್ಟು ವೇತನ ನೀಡಿ ಕಾರ್ಮಿಕರನ್ನು ಕರೆತಂದು ಕೆಲಸ ನಿರ್ವಹಿಸಿದ್ದಾರೆ. ನಿರ್ವಹಣೆ, ಕೂಲಿ ವೇತನ, ಕೀಟನಾಶಕ ಹೀಗೆ ಹೆಚ್ಚು ಹಣ ವ್ಯಯಿಸಿ ಆರ್ಥಿಕ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಕೊಳೆ ರೋಗ ಬಾಧಿಸಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. -ಚಂದನಗೌಡ, ಹಿಂಡಗೂಡ್ಲು ಗ್ರಾಮ.