ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ನವರು ಭಿಕ್ಷುಕರ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ದೇಶದೆಲ್ಲೆಡೆ ಚುನಾವಣೆಯಲ್ಲಿ ಸೋತು ಮೂಲೆಗುಂಪಾಗಿರುವ ಕಾಂಗ್ರೆಸ್ ಹಾಗೂ ಆ ಪಕ್ಷದ ನಾಯಕರು ಭಿಕ್ಷುಕರಂತಾಗಿದ್ದಾರೆ. ಇಂಥವರ ಬಾಯಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ಮೌಲ್ಯಗಳ ಬಗ್ಗೆ ಕೇಳುವುದೇ ತಮಾಷೆಯಾಗಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಮೊದಲಿನಿಂದಲೂ ಮುಸ್ಲಿಮರ ಬಗ್ಗೆ ಅತಿಯಾದ ಪ್ರೀತಿಯಿದೆ. ಸಂವಿಧಾನ ತಿದ್ದುಪಡಿ ಮಾಡುವುದು ಇವರೇ. ಇವರು ಸಂವಿಧಾನದ ಬಗ್ಗೆ ಮಾತನಾಡುವುದು ದೇಶದ ದುರಂತ ಎಂದು ಕಿಡಿಕಾರಿದರು.
ಯಾರದ್ದೋ ಕಿತ್ತು ಯಾರಿಗೋ ಕೊಟ್ಟರು ಎಂದು ಕೇಳೋದಿಕ್ಕೆ ನೀವ್ಯಾರು? ನಿಮ್ಮ ಸರ್ಕಾರ ಇದ್ದಾಗ ನೀವ್ಯಾಕೆ ಮಾಡಲಿಲ್ಲ? ನಮ್ಮ ಸರ್ಕಾರ ಮಾಡಿದೆ ಎಂದು ಅವರಿಗೆ ಸಹಿಸುವುದಕ್ಕೆ ಆಗುತ್ತಿಲ್ಲ ಎಂದು ಹರಿಹಾಯ್ದರು.
ಕಾಡಿ ಬೇಡುವುದು ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರ ಗುಣ. ನೀವು ಆಡಳಿತದಲ್ಲಿದ್ದಾಗ ಮೀಸಲಾತಿಯನ್ನು ಏಕೆ ಅನುಷ್ಠಾನ ಮಾಡಲಿಲ್ಲ. ನಿಮ್ಮ ಪರಿಸ್ಥಿತಿ ಹೇಗಿದೆ ಎಂದರೆ ಭಿಕ್ಷುಕರ ರೀತಿ ವರ್ತಿಸುತ್ತಿದ್ದೀರಿ. ನಮಗೆ ಅವರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಕ್ಷಮೆ ಕೇಳಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶಕುನಿ ಎಂದಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಕೂಡಲೇ ಕ್ಷಮೆ ಕೇಳಬೇಕು ಎಂದು ಅಶೋಕ್ ಒತ್ತಾಯ ಮಾಡಿದರು.
ಭಿಕ್ಷುಕರಿಗೆ ಯಾವುದೇ ಆಯ್ಕೆ ಇಲ್ಲ ಎಂದು ಕೆಂಡಕಾರಿದ ಅಶೋಕ್, ಸುರ್ಜೆವಾಲ ಹೇಳಿಕೆ ಮುಖ್ಯಮಂತ್ರಿ ಪದವಿ ಹಾಗೂ ಕರ್ನಾಟಕದ ಸಮಸ್ತ ಜನತೆಗೆ ಮಾಡಿದ ಅಪಮಾನ. ಕೂಡಲೇ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದರು.
ಲಿಂಗಾಯತ, ಒಕ್ಕಲಿಗ ಸ್ವಾಮೀಜಿಗಳಿಗೆ ಹೆದರಿಸಿ ಬೆದರಿಸಿ ಮೀಸಲಾತಿಗೆ ಒಪ್ಪಿಸಲಾಗಿದೆ ಎಂಬ ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಸ್ವಾಮೀಜಿಗಳ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ಕೊಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಸ್ವಾಮೀಜಿಗಳು ಜ್ಞಾನಗಳು, ಸಾಕಷ್ಟು ತಿಳಿದವರು. ಅವರ ಬಗ್ಗೆ ಹೀಗೆ ಮಾತಾಡಿದ್ದು ಸರಿಯಲ್ಲ. ಡಿಕೆಶಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಕೂಡಲೇ ಸ್ವಾಮೀಜಿಗಳ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.
ಡಿಕೆಶಿ ಸಹೋದರರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆ ಕುರಿತು, ಈ ಹಿಂದೆ ಡಿಕೆಶಿ ಮಂಗಳೂರು ಕುಕ್ಕರ್ ಬಾಂಬರ್ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದರು. ಅವನು ಅಮಾಯಕ, ಸುಮ್ಮೆ ಕುಕ್ಕರ್ ತಗೊಂಡು ಹೋಗುತ್ತಿದ್ದ ಅಮಾಯಕ ಅಂದಿದ್ದರು. ಈ ಹೇಳಿಕೆ ಬಗ್ಗೆ ಸಿ.ಟಿ ರವಿ ಮಾತಾಡಿರಬಹುದು. ಸಿ.ಟಿ.ರವಿ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ಆ ಹೇಳಿಕೆ ನೋಡಿ ನಾನು ಮಾತಾಡುತ್ತೇನೆ ಎಂದರು.
ಡಿಕೆಶಿ ಅನುಕಂಪ ವ್ಯಕ್ತಪಡಿಸಿದ್ದು ಸತ್ಯ. ರಾಹುಲ್ ಗಾಂಧಿಗೆ ಜೈಲು ಶಿಕ್ಷೆಯಾಗಿದೆ. ಹೀಗಾಗಿ ಕಾಂಗ್ರೆಸ್ನವರು ನಾವೇಕೆ ಹಿಂದೆ ಉಳಿಬೇಕು ಎಂದು ಮಾನನಷ್ಟ ಮೊಕದ್ದಮೆ ಹಾಕುತ್ತಿರಬಹುದು ಎಂದು ವ್ಯಂಗ್ಯವಾಡಿದರು.