ಬೆಂಗಳೂರು : ಕಾಂಗ್ರೆಸ್ ಸರ್ಕಾರದಲ್ಲಿ ಜಾತಿ ಆಧಾರದಲ್ಲಿ ಪೋಸ್ಟಿಂಗ್ ಮಾಡೋದಿಲ್ಲ. ಸಾಮರ್ಥ್ಯದ ಆಧಾರದಲ್ಲಿ ಪೋಸ್ಟಿಂಗ್ ಆಗಲಿದೆ ಅಂತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿದೆ, ಲಿಂಗಾಯತ ಸಿಎಂ ಆಗಬೇಕು ಎಂಬ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಮನೂರು ಶಿವಶಂಕರಪ್ಪ ಹಿರಿಯರು, ಅವರು ಸರ್ಕಾರಕ್ಕೆ ಮಾರ್ಗದರ್ಶನ ನೀಡೋದು ತಪ್ಪಲ್ಲ. ಏನಾದ್ರು ಅನಿಸಿಕೆ ಇದ್ದರೇ ತಿದ್ದೋದು ಪಕ್ಷದಲ್ಲಿ, ಸರ್ಕಾರದಲ್ಲಿ ಇದ್ದರೆ ಮಾಡ್ತೀವಿ ನಮ್ಮ ಸಮಾಜದವರಿಗೆ ಸಿಗಬೇಕು ಅಂತ ಎಲ್ಲಾ ಸಮಾಜದವರು ಬಯಸುತ್ತಾರೆ. ಅದರಲ್ಲಿ ತಪ್ಪೇನು ಇಲ್ಲ. ಅವರ ಅನುಭವ, ಮಾರ್ಗದರ್ಶನ ಪಕ್ಷ ಮತ್ತು ಸರ್ಕಾರಕ್ಕೆ ಬೇಕಾಗಿದೆ. ಅವರು ಹೇಳೋದನ್ನು ಹಿರಿಯರ ಮುಂದಿಡುತ್ತಾರೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರದಲ್ಲಿ ಯಾವ ಸಮುದಾಯದವರಿಗೂ ಅನ್ಯಾಯ ಆಗುತ್ತಿಲ್ಲ. ನಾವು ಅಧಿಕಾರಕ್ಕೆ ಬಂದಿರೋದು ಸಂವಿಧಾನದ ಪ್ರಕಾರ. ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ಇದೆ. ಜಾತಿ ನೋಡಿ ಅಧಿಕಾರಿಗಳನ್ನ ನಾವು ಪೋಸ್ಟಿಂಗ್ ಮಾಡೋದಿಲ್ಲ ಎಂದು ಹೇಳಿದ್ದಾರೆ.
ಅವರ ಸಾಮರ್ಥ್ಯ ನೋಡಿ ಪೋಸ್ಟಿಂಗ್ ಮಾಡ್ತೀವಿ. ನನ್ನ ಇಲಾಖೆ ವ್ಯಾಪ್ತಿಯಲ್ಲಿ ಎಲ್ಲಾ ಸಮುದಾಯದ ಅಧಿಕಾರಿಗಳೂ ಇದ್ದಾರೆ. ದಲಿತ, ಬ್ರಾಹ್ಮಣ, ಹಿಂದುಳಿದ ವರ್ಗ, ಲಿಂಗಾಯತ, ಅಲ್ಪಸಂಖ್ಯಾತ ಎಲ್ಲರೂ ಇದ್ದಾರೆ. ಜಾತಿ ನೋಡಿ ನಾವು ಕೆಲಸ ಕೊಡುವುದಿಲ್ಲ. ಸಾಮರ್ಥ್ಯ, ಜನರಿಗೆ ಸ್ಪಂದಿಸೋ ರೀತಿ, ಕಾನೂನು, ಯೋಜನೆಗಳ ಅರಿವಿದೆಯಾ ಅವರಿಗೆ ಅಂತ ನೋಡಿ ಪೋಸ್ಟಿಂಗ್ ಮಾಡ್ತೀವಿ. ಒಂದು ಸಮುದಾಯಕ್ಕೆ ಸರ್ಕಾರದಿಂದ ಅನ್ಯಾಯ ಆಗುತ್ತಿದೆ ಅಂತ ನಾವು ಭಾವಿಸೋದಿಲ್ಲ ಎಂದು ಸರ್ಕಾರದ ಆರೋಪಗಳನ್ನು ತಳ್ಳಿಹಾಕಿದ್ದಾರೆ.