ಬೆಂಗಳೂರು : ರಾಜ್ಯದಲ್ಲಿ ಆನೆ ಹಾವಳಿಯಿಂದ ಆಗುವ ಬೆಳೆ ನಷ್ಟ ಪರಿಹಾರವನ್ನು ದ್ವಿಗುಣ ಮಾಡಲಾಗಿದೆ. ಹಾಗೆಯೇ ಆನೆ ದಾಳಿಯಿಂದ ಮೃತಪಟ್ಟವರಿಗೆ ನೀಡುವ ಪರಿಹಾರವನ್ನು 7.5 ಲಕ್ಷದಿಂದ 15 ಲಕ್ಷದವರೆಗೆ ಏರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಕಾರ್ಮಿಕರ ಸಚಿವ ಶಿವರಾಮ್ ಹೆಬ್ಬಾರ್ ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎಂ.ಪಿ. ಕುಮಾರಸ್ವಾಮಿಯವರ ಪ್ರಶ್ನೆಗೆ ಉತ್ತರಿಸಿದ ಅವರು, ಆನೆ ಹಾವಳಿಯ ಬಗ್ಗೆ ನಿನ್ನೆ ಸದನದಲ್ಲಿ ಚರ್ಚೆಯಾಗಿದೆ. ಮುಖ್ಯಮಂತ್ರಿಗಳು ಉತ್ತರ ನೀಡುವ ಸಂದರ್ಭದಲ್ಲಿ ಆನೆ ದಾಳಿಯಿಂದ ಮೃತಪಡುವವರಿಗೆ ನೀಡುವ ಪರಿಹಾರವನ್ನು 7.5 ಲಕ್ಷದಿಂದ 15 ಲಕ್ಷಕ್ಕೆ ಏರಿಸುವ ಪ್ರಕಟಣೆ ಮಾಡಿದ್ದಾರೆ. ಹಾಗೆಯೇ ಬೆಳೆ ಪರಿಹಾರ ಮೊತ್ತವನ್ನು ದ್ವಿಗುಣ ಮಾಡಲಾಗಿದೆ ಎಂದರು.
ಆನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ ಆನೆ ಹಾವಳಿ ಹೆಚ್ಚಿರುವ ಕಡೆ ಆನೆಗಳನ್ನು ಹಿಡಿದು ಬೇರೆಡೆ ಬಿಡಲಾಗುತ್ತಿದೆ. ಜತೆಗೆ ರೈಲ್ವೆ ಹಳಿಗಳ ಪೆನ್ಷಿಂಗ್ನ್ನು ಹಾಕಲಾಗುತ್ತಿದೆ. ಇದಕ್ಕಾಗಿಯೇ 100 ಕೋಟಿ ರೂ. ಅನುದಾವನ್ನು ಮುಖ್ಯಮಂತ್ರಿಗಳು ಒದಗಿಸಿದ್ದಾರೆ ಎಂದರು.
ಆನೆಗಳಿಗೆ ರೇಡಿಯೋ ಕಾಲರ್ಗಳನ್ನು ಅಳವಡಿಸಿ ಅವು ಎಲ್ಲಿವೆ, ಏನು ಮಾಡುತ್ತಿವೆ ಎಂಬ ಬಗ್ಗೆಯೂ ಗಮನ ಹರಿಸಲಾಗುತ್ತಿದೆ. ಆನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಮೂಡಿಗೆರೆ ಭೈರ ಎಂಬ ಕಾಡಾನೆ ಸಾರ್ವಜನಿಕರಿಗೆ ಉಪಟಳ ಕೊಡುತ್ತಿದೆ. ಈ ಆನೆಯನ್ನು ಸೆರೆ ಹಿಡಿಯಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಸಚಿವರು ಉತ್ತರ ನೀಡಿದರು.
ಇದಕ್ಕೂ ಮೊದಲು ಪ್ರಶ್ನೆ ಕೇಳಿದ್ದ ಕುಮಾರಸ್ವಾಮಿ ಅವರು ಮೂಡಿಗೆರೆ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಆನೆ ದಾಳಿಯನ್ನು ಪ್ರಸ್ತಾಪಿಸಿ, ಜನ ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ. ನಾವು ಜನರಿಗೆ ಉತ್ತರ ಕೊಡುವುದು ಹೇಗೆ, ಆನೆ ದಾಳಿಯನ್ನಾದರೂ ನಿಯಂತ್ರಿಸಿ, ಇಲ್ಲ ಆನೆ ಭ್ರೂಣ ಹತ್ಯೆಯನ್ನಾದರೂ ಮಾಡಿ, ನಮಗೆ ತಿರುಗಾಡಲು ಆಗುತ್ತಿಲ್ಲ. ಸರ್ಕಾರದ ಪಾಲಿಸಿ ಹೇಗಿದೆ ಎಂದರೆ ಪರಿಹಾರ ಕೊಡುತ್ತೇವೆ, ಸಾಯಲು ಸಿದ್ದರಿವಿರಿ ಎಂಬಂತಿದೆ. ಆನೆಗಳನ್ನು ಸ್ಥಳಾಂತರವನ್ನಾದರೂ ಮಾಡಿ, ಬೆಳೆ ಪರಿಹಾರವನ್ನು ಹೆಚ್ಚಿಸಿ ಎಂದರು.
ಈ ಹಂತದಲ್ಲಿ ಇದಕ್ಕೆ ದನಿಗೂಡಿಸಿದ ಅಪ್ಪಚ್ಚು ರಂಜನ್ ಅವರು ಆನೆ ಹಾವಳಿಯಿಂದ ಆಗುತ್ತಿರುವ ಬೆಳೆ ನಷ್ಟಕ್ಕೆ ಹೆಚ್ಚಿನ ಪರಿಹಾರ ಕೊಡುವಂತೆ ಒತ್ತಾಯಿಸಿದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗೆಡೆ ಕಾಗೇರಿ ಅವರು ಇದು ಇಡೀ ರಾಜ್ಯದ ಸಮಸ್ಯೆಯಾಗಿದೆ. ಕಾಡಾನೆ, ಕಾಡು ಕೋಣ, ನವಿಲು, ಚಿರತೆ, ಜಿಂಕೆ ಹೀಗೆ ಕಾಡು ಪ್ರಾಣಿಗಳಿಂದ ಬೆಳೆ ನಷ್ಟವಾಗುತ್ತಿದೆ. ಪರಿಹಾರವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ನಮ್ಮ ಕಡೆ ಮಂಗಗಳ ಹಾವಳಿಯೂ ಇದೆ. ಬೇರೆಡೆ ಹಿಡಿದ ಮಂಗಗಳನ್ನು ತಂದು ಬಿಡುತ್ತಿದದಾರೆ. ಇದಕ್ಕೆಲ್ಲ ಶಾಶ್ವತ ಪರಿಹಾರ ಕಂಡು ಹಿಡಿಯಲು ತಜ್ಞರ ಸಮಿತಿಯನ್ನು ರಚಿಸಿ, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿಯೂ ಹೇಳಿದರು.
ಕಾಂಗ್ರೆಸ್ನ ನರೇಂದ್ರ ಅವರು ಬೇರೆ ಕಡೆ ಹಿಡಿದ ಆನೆಗಳನ್ನು ತಮ್ಮ ಕ್ಷೇತ್ರಕ್ಕೆ ಬಿಡುತ್ತಿದ್ದಾರೆ. ಇದರಿಂದ ತಮ್ಮ ಕ್ಷೇತ್ರದ ಜನರಿಗೆ ತೊಂದರೆಯಾಗುತ್ತಿದೆ ಎಂಬುದನ್ನು ಸದನದಲ್ಲಿ ಪ್ರಸ್ತಾಪಿಸಿದರು.
ಕಾಂಗ್ರೆಸ್ನ ಉಪನಾಯಕ ಯು.ಟಿ. ಖಾದರ್ ಮಾತನಾಡಿ, ನಾನು 4 ಬಾರಿ ಶಾಸಕನಾಗಿದ್ದೇನೆ. ಮೊದಲ ಬಾರಿ ಶಾಸಕನಾದಾಗಿನಿಂದಲೂ ಸದನದಲ್ಲಿ ಆನೆ ಹಾವಳಿಯನ್ನು ಕೇಳುತ್ತಿದ್ದೇನೆ. ಆನೆ ಹಾವಳಿ ನಿಯಂತ್ರಿಸುವುದಿರಲಿ, ನಾಯಿ ಹಾವಳಿಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಟೀಕೆ ಮಾಡಿ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.