ರಾಜ್ಯ

ಕೇಂದ್ರ ಸಚಿವ ಅಮಿತ್‌ ಶಾಗೆ ಬಹಿರಂಗ ಪತ್ರದ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಬಗ್ಗೆ ಕೇಂದ್ರ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಯನ್ನು ಖಂಡಿಸಿ ಸಿಎಂ ಸಿದ್ದರಾಮಯ್ಯ ಅವರು ಅಮಿತ್‌ ಶಾಗೆ ಬಹಿರಂಗ ಪತ್ರ ಬರೆದು ತಿರುಗೇಟು ನೀಡಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣವಾದ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಅಮಿತ್ ಶಾ ಅವರೇ ಮೊದಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಭಾರತೀಯ ಜನತಾ ಪಕ್ಷದ ಅಂತರಂಗದ ಅಭಿಪ್ರಾಯವನ್ನು ಬಹಿರಂಗವಾಗಿ ಮತ್ತು ಧೈರ್ಯದಿಂದ ದೇಶದ ಮುಂದೆ ತೆರೆದಿಟ್ಟದ್ದಕ್ಕಾಗಿ ಮತ್ತು ಕೊನೆಗೂ ನಿಮ್ಮ ಜೀವಮಾನದಲ್ಲಿ ಒಂದು ಸತ್ಯವನ್ನಾದರೂ ಹೇಳಿದ್ದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ನಿಮ್ಮ ಮಾತಿನಿಂದ ನಮಗೆ ಆಶ್ಚರ್ಯವಾಗಿಲ್ಲ, ನಮಗೆ ಇದು ಗೊತ್ತಿತ್ತು. ಸಂಸತ್‌ನಲ್ಲಿ ಇಂದು(ಡಿಸೆಂಬರ್‌.18) ಆಡಿದ ನಿಮ್ಮ ಮಾತಿನಿಂದ ಇಡೀ ದೇಶಕ್ಕೆ ನಿಮ್ಮ ಅಂತರಂಗದ ಅರಿವಾಗಿದೆ. ಬಾಬಾಸಾಹೇಬ್ ಅವರು ಕೊಟ್ಟ ಸಂವಿಧಾನದಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಂಸತ್‌ನಲ್ಲಿ ನಿಂತು ಅವರ ಸ್ಮರಣೆಯನ್ನು ವ್ಯಸನ ಎಂದು ತುಚ್ಛೀಕರಿಸುವ ನಿಮ್ಮ ಧಾಷ್ಟ್ರಕ್ಕೆ ಶಹಭಾಸ್ ಅನ್ನಲೇಬೇಕು. ಬಾಬಾ ಸಾಹೇಬರ ಬಗ್ಗೆ ತಮಗೆ ಅಪಾರ ಅಭಿಮಾನ ಇದೆ, ಗೌರವ ಇದೆ, ನನ್ನ ಮಾತುಗಳನ್ನು ತಿರುಚಲಾಗಿದೆ ಎಂದೆಲ್ಲ ಸ್ಪಷ್ಟೀಕರಣ ಕೊಟ್ಟು ಆತ್ಮವಂಚನೆ ಮಾಡಿಕೊಳ್ಳಬೇಡಿ. ಅದನ್ನು ಸಮರ್ಥಿಸಿಕೊಂಡು ದೇಶವನ್ನು ಎದುರಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ. ನಮ್ಮ ಉಸಿರು ಇರುವವರೆಗೆ, ಈ ಭೂಮಿಯಲ್ಲಿ ಸೂರ್ಯ-ಚಂದ್ರ ಇರುವವರೆಗೆ ಅಂಬೇಡ್ಕರ್ ಸ್ಮರಣೆ ಇರಲಿದೆ. ನೀವು ತುಚ್ಛೀಕರಿಸಿದಷ್ಟೂ ಪುಟಿದು ಪುಟಿದು ಮೇಲೆದ್ದು ಬಂದು ಅವರು ನಮ್ಮ ಮುನ್ನಡೆಯ ಹಾದಿಗೆ ಬೆಳಕಾಗುತ್ತಾರೆ. ನಿಮ್ಮ ದುರಹಂಕಾರದ ಮಾತಿಗೆ ನಿಮ್ಮ ಬೆನ್ನಹಿಂದಿರುವ ಚೇಲಾಗಳು ಮೇಜುಕುಟ್ಟಿ ಸಂಭ್ರಮಿಸಿರಬಹುದು. ಆದರೆ ಅಂಬೇಡ್ಕರ್ ಅವರಿಂದಾಗಿ ಸಮಾನತೆ ಮತ್ತು ಘನತೆಯ ಬದುಕನ್ನು ಪಡೆದಿರುವ ದೇಶದ ಕೋಟ್ಯಂತರ ಜನ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎನ್ನುವುದು ತಿಳಿದಿರಲಿ ಎಂದು ಕಿಡಿಕಾರಿದ್ದಾರೆ.

ಅಂಬೇಡ್ಕರ್ ಎಂಬ ಮನುಷ್ಯ ಈ ಭೂಮಿಯಲ್ಲಿ ಹುಟ್ಟದೆ ಇರುತ್ತಿದ್ದರೆ, ನನಗೆ ಮುಖ್ಯಮಂತ್ರಿಯಾಗುವ ಅವಕಾಶವೇ ಬರುತ್ತಿರಲಿಲ್ಲ. ನಾನು ಊರಲ್ಲಿ ದನ-ಕುರಿ ಮೇಯಿಸಿಕೊಂಡು ಇರಬೇಕಾಗುತ್ತಿತ್ತು. ನಮ್ಮ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳನ್ನು ಪಡೆದು ಎಐಸಿಸಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರಲಿಲ್ಲ. ಕಲಬುರ್ಗಿಯ ಯಾವುದಾದರೂ ಕಾರ್ಖಾನೆಯಲ್ಲಿ ಕಾರ್ಮಿಕರಾಗಿರುತ್ತಿದ್ದರು. ಈ ವಾಸ್ತವ ಸದಾ ನಮ್ಮ ನೆನಪಲ್ಲಿರುತ್ತದೆ. ನೀವು ಹೇಳುವ ವ್ಯಸನ ನಮ್ಮ ಪಾಲಿನ ಅಂಬೇಡ್ಕರ್ ಸ್ಮರಣೆ, ನಮ್ಮನ್ನೆಲ್ಲ ಇಲ್ಲಿಗೆ ತಂದು ನಿಲ್ಲಿಸಿ ನಮಗೆ ಸ್ಥಾನಮಾನ, ಗೌರವ ಮತ್ತು ಜನರ ಸೇವೆ ಮಾಡುವ ಅವಕಾಶವನ್ನು ಕೊಟ್ಟಿದೆ ಎನ್ನುವುದನ್ನು ನಾವು ಮರೆತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾನು ಮಾತ್ರ ಅಲ್ಲ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ಕೊಟ್ಟಿರುವ ಸಂವಿಧಾನ ಇಲ್ಲದೆ ಇರುತ್ತಿದ್ದರೆ ನೀವು ಕೂಡಾ ಗೃಹಸಚಿವರಾಗಿ ಬದುಕು ಕೊಟ್ಟ ಮಹಾತ್ಮನನ್ನೇ ತುಚ್ಛೀಕರಿಸುವ ಅವಕಾಶ ನಿಮಗೆ ಸಿಗುತ್ತಿರಲಿಲ್ಲ. ನೀವು ನಿಮ್ಮೂರಿನಲ್ಲಿ ಎಲ್ಲಾದರೂ ಗುಜರಿ ವ್ಯಾಪಾರ ಮಾಡಿಕೊಂಡು ಇರಬೇಕಾಗುತ್ತಿತ್ತು. ದೇಶದ ಪ್ರಧಾನಿ ಮತ್ತು ನಿಮ್ಮ ಸಹದ್ಯೋಗಿ ನರೇಂದ್ರ ಮೋದಿ ಅವರು ಕೂಡಾ ರೈಲ್ವೇ ಸ್ಟೇಷನ್ ನಲ್ಲಿ ಚಹಾ ಮಾರಿಕೊಂಡೇ ಇರಬೇಕಾಗಿತ್ತೋ ಏನೋ? ಅವರಿಗೂ ಪ್ರಧಾನಿಯಾಗುವ ಅವಕಾಶವೇ ಸಿಗುತ್ತಿರಲಿಲ್ಲ. ಇದನ್ನು ಪ್ರಧಾನಿಯವರೂ ಒಪ್ಪಿಕೊಳ‍್ಳಬಹುದು ಎಂದು ನಂಬಿದ್ದೇನೆ, ನೀವೂ ಒಪ್ಪಿಕೊಂಡು ಬಿಡಿ ಎಂದು ಸವಾಲು ಹಾಕಿದ್ದಾರೆ.

ಅಮಿತ ಶಾ ಅವರೇ, ಇತಿಹಾಸವನ್ನು ಓದಿರುವ ನಮ್ಮಂತಹವರಿಗೆ ನಿಮ್ಮೊಳಗಿನ ಅಂಬೇಡ್ಕರ್ ದ್ವೇಷ ಹೊಸದಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ಬರೆದಿರುವ ದೇಶದ ಸಂವಿಧಾನವನ್ನು ಅವರು ಬದುಕಿರುವಾಗಲೇ ನಿಮ್ಮ ಮಾತೃಸಂಸ್ಥೆಯಾದ ಆರ್.ಎಸ್.ಎಸ್ ಯಾಕೆ ತಿರಸ್ಕರಿಸಿತ್ತು? ಆರ್.ಎಸ್.ಎಸ್ ನಾಯಕರಾಗಿದ್ದ ಹೆಡಗೆವಾರ್, ಗೋಲ್ವಾಲ್ಕರ್ ಮತ್ತು ಸಾವರ್ಕರ್ ಸಂವಿಧಾನವನ್ನು ವಿರೋಧಿಸಿ ನೀಡಿರುವ ಹೇಳಿಕೆಗಳೇನು ಎನ್ನುವ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಇವೆ. ನಿಮ್ಮ ಸುಳ್ಳುಗಳು ಮತ್ತು ಆತ್ಮವಂಚನೆಯ ನಡವಳಿಕೆಗಳಿಂದ ಅದನ್ನು ಮರೆಮಾಚಬಹುದು. ಆದರೆ ಅಳಿಸಿಹಾಕಲಾಗುವುದಿಲ್ಲ ಎನ್ನುವುದು ನೆನಪಿರಲಿ. ಆ ಅಭಿಪ್ರಾಯವನ್ನೇ ನೀವು ಸಂಸತ್‌ನಲ್ಲಿ ಹೇಳಿದ್ದೀರಿ ಎಂದು ಹೇಳಿದ್ದಾರೆ.

ನಿಮ್ಮ ಮಾತಿನ ಧಾಟಿಯಲ್ಲಿಯೇ ಪ್ರತಿಕ್ರಿಯಿಸುತ್ತೇನೆ. ನಿಮ್ಮ ಪಕ್ಷ ಮತ್ತು ಅದರ ಹಿಂದಿರುವ ಪರಿವಾರಕ್ಕೆ ಇತ್ತೀಚೆಗೆ ಮೋದಿ…ಮೋದಿ.. ಮೋದಿ ಎಂದು ಹೇಳುವುದು ಒಂದು ವ್ಯಸನ ಆಗಿದೆ. ಮೋದಿಯವರ ಬದಲಿಗೆ ಅಷ್ಟು ಬಾರಿ ದೇವರ ನಾಮ ಸ್ಮರಣೆ ಮಾಡಿದ್ದರೆ ಏಳು ಜನ್ಮದಲ್ಲಿ ಮಾತ್ರ ಅಲ್ಲ, ನೂರು ಜನ್ಮದಲ್ಲಿಯೂ ನಿಮಗೆ ಸ್ವರ್ಗವೇ ಸಿಗುತ್ತಿತ್ತು. ಕೇವಲ ಅಧಿಕಾರದಲ್ಲಿ ಉಳಿಯಲಿಕ್ಕಾಗಿ ಮಾಡಿರುವ ಪಾಪಕೃತ್ಯಗಳಿಗೆ ಕ್ಷಮೆಯೂ ಸಿಗುತ್ತಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಅರ್ಚನ ಎಸ್‌ ಎಸ್

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

32 mins ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

44 mins ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

55 mins ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

1 hour ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

2 hours ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

2 hours ago