ರಾಜ್ಯ

ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಸಂದರ್ಭಗಳನ್ನು ಎದುರಿಸಿ ತಮ್ಮ ಕಾರ್ಯ ನಿರ್ವಹಿಸಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬದುಕಿನಲ್ಲಿ ಏಳು ಬೀಳು ಸಹಜ ಮತ್ತು ನಿರಂತರ. ಪರಿಸ್ಥಿತಿಗಳು ಸದಾ ನಮ್ಮ ಪರವಾಗಿ ಇರುವುದಿಲ್ಲ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯದಿಂದ ಸಮಸ್ಯೆಗಳನ್ನು, ಸಂದರ್ಭಗಳನ್ನು ನಿರ್ವಹಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿ ಮಾತನಾಡಿದ ಅವರು, ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ, ಪ್ರಾದೇಶಿಕ ಅಸಮತೋಲನ, ಅಸಮಾನತೆ ತೊಡೆಯಲು ಅಧಿಕಾರಿಗಳ ಸಹಕಾರ ಹೆಚ್ಚು ಬೇಕು. ಆಡಳಿತಾಂಗದಲ್ಲಿ ಐಎಎಸ್, ಐಪಿಎಸ್, ಐಆರ್‌ಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳ ಜವಾಬ್ದಾರಿ ಹೆಚ್ಚು. ನಾವು ಕಾನೂನುಗಳನ್ನು ರಚಿಸಿ, ಜಾರಿ ಆಗುವ ದಿಕ್ಕಿನಲ್ಲಿ ನಿರಂತರ ನಿಗಾ ವಹಿಸುತ್ತೇವೆ. ಅಧಿಕಾರಿ ವರ್ಗ ಸಮಾಜಕ್ಕೆ ಪೂರಕವಾಗಿ ಕ್ರಿಯಾಶೀಲತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.

ಸಮಾನ ಅವಕಾಶಗಳು ಸಿಕ್ಕಾಗ ಸಮಾನತೆಯ ದಿಕ್ಕಿಗೆ ನಾವು ಸಾಗಬಹುದು ಎನ್ನುವ ಕಾರಣದಿಂದಲೇ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಜನರ ಕೈಯಲ್ಲಿ ಹಣ ಇರಬೇಕು, ಜನರ ಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಇದಕ್ಕೆ ತಕ್ಕಂತೆ ರಾಜ್ಯದ ಜನರ ಜೇಬಿಗೆ ಹಣ ನೀಡುವ ಗ್ಯಾರಂಟಿಗಳನ್ನು ನಾವು ಜಾರಿ ಮಾಡಿದೆವು. ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರವಾಗಿ ಜನರಿಗೆ ಹಣ ತಲುಪಿಸುತ್ತಿದ್ದೇವೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದಿದ್ದಾರೆ.

ಇಲ್ಲಿಯವರೆಗೂ 35 ಸಾವಿರ ಕೋಟಿ ರೂಪಾಯಿಗಳನ್ನು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಖರ್ಚು ಮಾಡಿದ್ದೇವೆ. ಈಗಲಾದರೂ ನಂಜುಂಡಪ್ಪ ಅವರ ವರದಿಯಲ್ಲಿನ ಪ್ರಾದೇಶಿಕ ಅಸಮಾನತೆ ಕಡಿಮೆಯಾಗಿದೆಯಾ ಎನ್ನುವುದನ್ನು ಅಧ್ಯಯನ ನಡೆಸಿ ವರದಿ ನೀಡಲು ಗೋವಿಂದರಾವ್ ಅವರ ಸಮಿತಿ ರಚಿಸಲಾಗಿದೆ. ಅಲ್ಲದೇ ಏಕೆ ಉತ್ತರ ಕರ್ನಾಟಕದ ಅಸಮಾನತೆ ಕಡಿಮೆ ಆಗಿಲ್ಲ ಎನ್ನುವ ಬಗ್ಗೆಯೂ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿದ್ದೇವೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಹೀಗಾಗಿ ನೀವೂ ಅಷ್ಟೆ ಗಂಭೀರವಾಗಿ ಪರಿಗಣಿಸಿ ಪ್ರಾದೇಶಿಕ ಅಸಮತೋಲನ ತೊಡೆದು ಹಾಕಲು ಶ್ರಮಿಸಬೇಕು ಎಂದು ಸೂಚಿಸಿದ್ದಾರೆ.

ರಾಜ್ಯದ ಯುವ ಜನತೆ ನಮ್ಮ ದೇಶದ ಆಸ್ತಿ ಅವರ ಭವಿಷ್ಯಕ್ಕಾಗಿ ಎಚ್ಚರ ವಹಿಸಿ

ಯುವ ಜನತೆ ನಮ್ಮ ಸಮಾಜದ ಆಸ್ತಿ. ಇವರ ಭವಿಷ್ಯ ಹಾಳಾಗದಂತೆ ಎಚ್ಚರ ವಹಿಸುವ ಸವಾಲನ್ನು ಐಪಿಎಸ್ ಅಧಿಕಾರಿಗಳು ಸ್ವೀಕರಿಸಬೇಕು. ಡ್ರಗ್ಸ್ ಹಾವಳಿ, ಅಪರಾಧಿಕ ಜಗತ್ತಿನ‌ ಕಡೆಗೆ ಯುವ ಜನತೆ ಆಕರ್ಷಿತರಾಗದಂತೆ ಎಚ್ಚರ ವಹಿಸಿ. ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರಗತಿ ಆಗುತ್ತಿದೆ. ಈ ಪ್ರಗತಿ ಅಪರಾಧಗಳಿಗೆ ಬಳಕೆ ಆಗದೆ ಯುವ ಜನರ ಭವಿಷ್ಯ ರೂಪಿಸಲು ಸಹಕಾರಿ ಆಗುವಂತೆ ಕರ್ತವ್ಯ ನಿರ್ವಹಿಸಿ. ಅಧಿಕಾರಿ ವರ್ಗ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ರಾಜ್ಯದಲ್ಲಿ ಅದ್ಭುತ ಬದಲಾವಣೆ, ಸುಧಾರಣೆಗಳನ್ನು ತರಲು ಸಾಧ್ಯವಿದೆ. ಇದಕ್ಕಾಗಿ ನಿಮ್ಮ ಕಾರ್ಯಕ್ಷಮತೆ ಬಳಕೆಯಾಗಲಿ ಎಂದಿದ್ದಾರೆ.

ಅಧಿಕಾರಿ ವರ್ಗಕ್ಕೆ ನಮ್ಮ ಸಲಹೆಯ ಅಗತ್ಯ ಇಲ್ಲ. ನೀವು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡರೆ ಸಾಕು. ಭ್ರಷ್ಟಾಚಾರ ವ್ಯವಸ್ಥೆ ಕಡಿಮೆ ಆಗುವ ಬದಲಿಗೆ ಹೆಚ್ಚಾಗುತ್ತಿರುವುದು ದುರಂತ. ಆದ್ದರಿಂದ ನಾವೆಲ್ಲರೂ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಪ್ರಾಮಾಣಿಕವಾಗಿ ನಡೆದುಕೊಳ್ಳೋಣ. ಸಮಾಜದ ಪ್ರಗತಿ ಮತ್ತು ಆರೋಗ್ಯಕರ ಬದಲಾವಣೆಗಾಗಿ ನಮ್ಮ-ನಿಮ್ಮ ಉದ್ದೇಶ ಒಂದೇ ಆಗಿದ್ದು, ಇದಕ್ಕಾಗಿ ನಮ್ಮ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳೋಣ ಎಂದು ಹೇಳಿದ್ದಾರೆ.

ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಸುಳ್ಳನ್ನು ಪದೇ ಪದೇ ಹರಡಿಸುತ್ತಿದ್ದಾರೆ. ಇದು ಸುಳ್ಳು ಎನ್ನುವುದು ನಿಮಗೇ ಗೊತ್ತಿದೆ. ಹಿಂದಿನ ಸರ್ಕಾರ ಬಜೆಟ್ ಒಪ್ಪಿಗೆ ಪಡೆಯದೆ ಯದ್ವಾ ತದ್ವಾ ಟೆಂಡರ್ ಕರೆದು ಹಾನಿ ಮಾಡಿತ್ತು. ಸುಮಾರು 39 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿ ಹೋಗಿದ್ದರು. ಜೊತೆಗೆ ಕೇಂದ್ರ ಸರ್ಕಾರದಿಂದ ನಮಗೆ ಅನ್ಯಾಯ ಮುಂದುವರೆದಿದೆ. ಇದೆಲ್ಲವನ್ನೂ ಸರಿದೂಗಿಸಿಕೊಂಡು ಅಭಿವೃದ್ಧಿಗೂ ಹಣ ಒದಗಿಸುತ್ತಿದ್ದೇವೆ. ಆದ್ದರಿಂದ ಇಲಾಖೆಗಳಲ್ಲಿರುವ ಹಣ ಹೆಚ್ಚು ಸೋರಿಕೆ ಆಗದಂತೆ ತಡೆಯುವ ಜವಾಬ್ದಾರಿ ಮತ್ತು ಕರ್ತವ್ಯ ಅಧಿಕಾರಿಗಳ ಮೇಲಿದೆ. ಹಣ ಸಂಗ್ರಹಿಸುವ ಇಲಾಖೆಗಳು ಮತ್ತು ಹಣ ಖರ್ಚು ಮಾಡುವ ಇಲಾಖೆಗಳೆರಡೂ ಸಮತೂಕದಿಂದ ಕರ್ತವ್ಯ ನಿರ್ವಹಿಸಬೇಕು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮನಮೋಹನ್‌ ಸಿಂಗ್‌ ಅವರ ನಿಧನದ ಹಿನ್ನೆಯಲ್ಲಿ ಮೌನಚರಣೆ ಮಾಡಿ ಪ್ರತಿಕ್ರಿಯೆ ನೀಡಿದ ಅವರು, ಭಾರತದ ಆರ್ಥಿಕತೆ ಕುಸಿತ ಕಂಡಿದ್ದಾಗ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮನಮೋಹನ್ ಸಿಂಗ್ ಅವರು ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಿದರು. ದೇಶದ ಆರ್ಥಿಕ‌ ಬೆಳವಣಿಗೆ ಆಗಿ ಇದರ ಲಾಭ ದೇಶದ ಜನರಿಗೆ ಲಭಿಸುವಂತೆ ಮಾಡಿದರು. ಸಂವಿಧಾನದ ನಿರ್ದೇಶಕ ತತ್ವಗಳಾದ ಸಮಾನತೆ, ಜಾತ್ಯತೀತತೆ, ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ದೇಶದ ಜನರ ಮೂಲಭೂತ ಹಕ್ಕುಗಳನ್ನಾಗಿ ಮಾಡಿದರು. ಮಾಹಿತಿ ಹಕ್ಕು, ಆಹಾರದ ಹಕ್ಕು, ಶಿಕ್ಷಣದ ಹಕ್ಕುಗಳನ್ನು ಕಡ್ಡಾಯ ಮಾಡಿದರು. ಆ ಮೂಲಕ ಸಮಾನತೆಯೆಡೆಗೆ ದೇಶವನ್ನು ಮುನ್ನಡೆಸಿದರು ಎಂದು ತಿಳಿಸಿದ್ದಾರೆ.

 

ಅರ್ಚನ ಎಸ್‌ ಎಸ್

Recent Posts

ಇಂದಿನಿಂದ ಕೊಡವ ಕೌಟುಂಬಿಕ ಕ್ರಿಕೆಟ್‌ ಉತ್ಸವ

24ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಬೇತ್ರಿ ಮುಕ್ಕಾಟೀರ ಕುಟುಂಬಸ್ಥರಿಂದ ಸಿದ್ದತೆ; 24 ದಿನಗಳ ಕಾಲ ಕ್ರಿಕೆಟ್ ಹಬ್ಬ ಪುನೀತ್ ಮಡಿಕೇರಿ…

20 mins ago

ಓದುಗರ ಪತ್ರ | ಕಠಿಣ ಕ್ರಮ ಕೈಗೊಳ್ಳಿ

ಮುರ್ಖರ ದಿನ ವಾದ ಏಪ್ರಿಲ್ ಒಂದರಂದು ( ಬುಧವಾರ), ಕೆಲವು ಜಾಲತಾಣಗಳಲ್ಲಿ ದೇಶದ ರಾಷ್ಟ್ರೀಯ ಲಾಂಛನದ ಅಡಿಯಲ್ಲಿ,(ಸಿಂಹ ಮತ್ತು ಅಶೋಕ…

24 mins ago

ಓದುಗರ ಪತ್ರ | ನಿ. . . ದರ್ಶನ !

ನಿ. . . ದರ್ಶನ ! ಟೇಪು ಕತ್ತರಿಸಿ, ಗುದ್ದಲಿ ಪೂಜೆ ನೆರವೇರಿಸಿ ಸರಸರನೆ ಪರದೆಯನು ಸರಿಸಿ ನೀಡುವರು ಫೋಟೋಗೆ…

27 mins ago

ಓದುಗರ ಪತ್ರ | ಮಕ್ಕಳ ಸುರಕ್ಷತೆಯ ಬಗ್ಗೆ ಗಮನ ಹರಿಸಿ

ಶಾಲೆಗಳಿಗೆ ಬೇಸಿಗೆ ರಜೆ ಆರಂಭವಾಗಿರುವ ಈ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಹೆಚ್ಚಿನ ನಿಗಾವಹಿಸುವುದು ಅಗತ್ಯವಾಗಿದೆ. ಮಕ್ಕಳು ಬಿಸಿಲಿನಬೇಗೆಯಿಂದ…

32 mins ago

ದ್ವೇಷ ರಾಜಕಾರಣದ ಚಹರೆಗಳು

ರೇಣುಕಾ ನಿಡುಗುಂದಿ ನಿನ್ನೆ (ಏಪ್ರಿಲ್ 2) ಹನುಮ ಜಯಂತಿ. ಒಮ್ಮೆ ಇದೇ ಹನುಮ ಜಯಂತಿಯಂದು ಯಾವುದೋ ಕಾರ್ಯಕ್ರಮಕ್ಕೆಂದು ಹೊರಟವಳು ಸರಿಯಾದ…

37 mins ago

ಬಾ.ನಾ.ಸುಬ್ರಹ್ಮಣ್ಯ ಅವರ ಅಂಕಣ ; ರಾಮಾಯಣದ ರಾವಣ, ಶ್ರೀ ಹನುಮಾನ್‌ ಹನುಮ

ಕನ್ನಡ ನಟರಿಬ್ಬರ ಸೀಮೋಲಂಘನ ನಿನ್ನೆ (ಶುಕ್ರವಾರ) ಹಿಂದಿಯಲ್ಲಿ ತಯಾರಾಗುತ್ತಿರುವ ‘ರಾಮಾಯಣ’ ಚಿತ್ರದ ಮೊದಲ ನೋಟ ಲೋಕಾರ್ಪಣೆ ಆಗಿದೆ. ಇತ್ತೀಚೆಗಷ್ಟೇ ‘ಶ್ರೀ…

42 mins ago