ರಾಜ್ಯ

ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಸಿಎಂ ಸಿದ್ದರಾಮಯ್ಯ ಬಂಪರ್‌ ಗಿಫ್ಟ್‌

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಸಿಎಂ ಸಿದ್ದರಾಮಯ್ಯ ಬಂಪರ್‌ ಗಿಫ್ಟ್‌ ನೀಡಿದ್ದು, ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಕಲಬುರ್ಗಿ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಸಮಸ್ತ ನಾಗರಿಕರಿಗೂ ಕಲ್ಯಾಣ ಕರ್ನಾಟಕ ಉತ್ಸವ ದಿನದ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ ಅವರು, 1947ರ ಆಗಸ್ಟ್ 15ರಂದು ದೇಶ ಸ್ವಾತಂತ್ರ‍್ಯ ಪಡೆದ ಸಂಭ್ರಮದಲ್ಲಿದ್ದರೆ ಈ ಭಾಗಕ್ಕೆ ಸ್ವಾತಂತ್ರ‍್ಯ ದೊರೆತಿರಲಿಲ್ಲ. ರಜಾಕಾರರ ದೌರ್ಜನ್ಯ ಮಿತಿ ಮೀರಿತ್ತು. ತ್ಯಾಗ ಬಲಿದಾನಗಳಿಗೆ ಹೆಸರುವಾಸಿಯಾದ ಈ ನೆಲದ ಅಪ್ರತಿಮ ಹೋರಾಟಗಾರರ ಛಲ ಮತ್ತು ಜವಾಹರ್ ಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ದೃಢ ನಿಶ್ಚಯದಿಂದಾಗಿ ಒಕ್ಕೂಟ ವ್ಯವಸ್ಥೆಗೆ ಸೇರುವಂತಾಯಿತು.

ಕಲ್ಯಾಣ ಕರ್ನಾಟಕವು ಸಾಹಿತ್ಯ, ಕಲೆ, ಸಂಸ್ಕೃತಿ, ಧಾರ್ಮಿಕ ಸುಧಾರಣೆ ಮೊದಲಾದ ಕ್ಷೇತ್ರಗಳಲ್ಲಿ ಇಡೀ ದೇಶಕ್ಕೆ ಬೆಳಕು ಚೆಲ್ಲಿದಂತಹ ಶ್ರೇಷ್ಠ ವ್ಯಕ್ತಿಗಳನ್ನು ಜಗತ್ತಿಗೆ ನೀಡಿದೆ. ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ ಕವಿರಾಜಮಾರ್ಗದಲ್ಲಿ ನಿಜವಾದ ಒಡವೆ ಎಂದರೆ ಪರಧರ್ಮ ಮತ್ತು ಪರರ ವಿಚಾರಗಳನ್ನು ಸಹನೆಯಿಂದ ನೋಡುವುದು ಎಂಬ ಶಾಶ್ವತ ಸೌಹಾರ್ದ ತತ್ವವನ್ನು ಜಗತ್ತಿಗೆ ನೀಡಲಾಗಿದೆ.

ವಿಶ್ವಗುರು-ಸಾಂಸ್ಕೃತಿಕ ನಾಯಕ ಬಸವಣ್ಣನವರ ನೇತೃತ್ವದ ಶರಣರ ಚಳುವಳಿಯು ಇದೇ ಪುಣ್ಯಭೂಮಿಯಲ್ಲಿ ನಡೆದಿತ್ತು ಎಂಬುದು ಇಡೀ ಜಗತ್ತು ಹೆಮ್ಮೆ ಪಡುವ ಸಂಗತಿಯಾಗಿದೆ. ಉದಾತ್ತ ಪರಂಪರೆಗೆ ನಾಂದಿ ಹಾಡಿದ್ದ ಅಸಂಖ್ಯಾತ ಅನುಭಾವಿಗಳು, ಅವಧೂತರು, ಆರೂಢರು, ಸೂಫಿಸಂತರ ಕರ್ಮಭೂಮಿ ಇದು.

ಸ್ವತಂತ್ರ ಭಾರತವು ಅಭಿವೃದ್ಧಿ ಮಾರ್ಗದ ಕಡೆಗೆ ಮುನ್ನಡೆಯುತ್ತಿದ್ದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಅಭಿವೃದ್ಧಿ ಕಾಣದೆ ಅಂಧಕಾರದಲ್ಲೆ ಉಳಿದು ಬಿಟ್ಟಿದ್ದವು. ಸಂವಿಧಾನಬದ್ಧವಾಗಿ ನಾವೂ ಅಭಿವೃದ್ಧಿ ಹೊಂದಬೇಕೆಂಬ ಸಂಕಲ್ಪ ಮೂಡಿದ ಕಾರಣದಿಂದಲೇ ಹೋರಾಟಗಳು ಹುಟ್ಟಿಕೊಂಡವು. ಹಿಂದುಳಿದಿದ್ದ ಈ ಭಾಗವನ್ನು ಅಭಿವೃದ್ಧಿ ಮಾಡಬೇಕೆಂಬ ಉದ್ದೇಶದಿಂದ ಸನ್ಮಾನ್ಯ ದಿವಂಗತ ಡಾ. ಧರ್ಮಸಿಂಗ್‌ರವರ ನೇತೃತ್ವದ ಸಮಿತಿಯ ವರದಿ ಆಧರಿಸಿ, 1990ರಲ್ಲಿ ಹೈದ್ರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಯಿತು.

ಇದನ್ನು ಓದಿ : ಲಾರಿ-ಆಟೋ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಅಭಿವೃದ್ಧಿ ಸಾಧ್ಯವಾಗಬೇಕಾದರೆ ವಿಶೇಷ ಸ್ಥಾನಮಾನದ ಅಗತ್ಯವಿದೆಯೆಂದು ಈ ಭಾಗದ ಹೋರಾಟಗಾರರು ನಿರಂತರವಾಗಿ ಹೋರಾಟ ನಡೆಸಿದ್ದರು. ಕೇಂದ್ರದ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದ ಸರ್ಕಾರವು ಕಲ್ಯಾಣ ಕರ್ನಾಟಕಕ್ಕೆ ನೀಡಬೇಕಾದ ವಿಶೇಷ ಸ್ಥಾನಮಾನವನ್ನು ಕೊಡಲಾಗುವುದಿಲ್ಲವೆಂದು ಬಹುಕಾಲದ ಜನರ ಬೇಡಿಕೆಯನ್ನು ತಿರಸ್ಕರಿಸಿತ್ತು. ಆದರೆ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸದೆ ದೇಶದ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನರಿತ ಡಾ. ಮನಮೋಹನ್ ಸಿಂಗ್‌ರವರ ನೇತೃತ್ವದ ಯು.ಪಿ.ಎ. ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಟಿಕಲ್ 371ಜೆ ಅನ್ನು ದಿನಾಂಕ 1-1-2013 ರಿಂದ ಜಾರಿಗೆ ಬರುವಂತೆ ಅಧಿಸೂಚನೆಗಳನ್ನು ಹೊರಡಿಸಿತು.

ವಿಶೇಷ ಸ್ಥಾನಮಾನಕ್ಕಾಗಿ ನಡೆದ ಹೋರಾಟಗಳ ಮುಖಂಡತ್ವ ವಹಿಸಿದ್ದ ಮಾನ್ಯ ಮಲ್ಲಿಕಾರ್ಜುನ ಖರ್ಗೆ ಯವರು, ಮಾನ್ಯ ದಿವಂಗತ ಧರ್ಮಸಿಂಗ್ ರವರು ಮುಂತಾದ ಅನೇಕ ಮಹನೀಯರ ಹೋರಾಟವನ್ನು ನಾವು ಮರೆಯಬಾರದು.

ಹೋರಾಟದಿಂದ ತಕ್ಷಣಕ್ಕೆ ಸಿಕ್ಕ ಫಲ ನಮ್ಮ ಕಣ್ಣ ಮುಂದಿದೆ. 2013ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಿದ ನಂತರ ಇದುವರೆಗೆ ವಿವಿಧ ಇಲಾಖೆಗಳಲ್ಲಿ 1,19,923 ಹುದ್ದೆಗಳನ್ನು ನೇರ ನೇಮಕಾತಿಗೆ ಗುರುತಿಸಿದ್ದು, 84,620 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇದೀಗ ಒಳ ಮೀಸಲಾತಿ ವಿಚಾರವನ್ನು ಬಗೆಹರಿಸಿರುವುದರಿಂದ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಉದ್ದೇಶಿಸಿದ್ದೇವೆ.

ಕೆಕೆಆರ್‌ಡಿಬಿಗೆ 2013-14ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಸರ್ಕಾರದಿಂದ 24,780 ಕೋಟಿ ರೂ.ಗಳಷ್ಟು ಅನುದಾನ ಹಂಚಿಕೆಯಾಗಿದೆ. ಇದುವರೆಗೆ 14,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನ ವೆಚ್ಚ ಮಾಡಲಾಗಿದೆ. 41,103 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು, 32,985 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, 8,118 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ. ನಮ್ಮ ಸರ್ಕಾರವು ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುತ್ತಿದೆ. 2013-14ರಿಂದ ಬಿಡುಗಡೆಯಾದ ಅನುದಾನಗಳಲ್ಲಿ ರಸ್ತೆ ಮತ್ತು ಸಂಪರ್ಕ ವ್ಯವಸ್ಥೆಗೆ ಶೇ.50 ರಷ್ಟು, ಇನ್ನಿತರೆ ಮೂಲಸೌಕರ್ಯಗಳಿಗೆ ಶೇ.11ರಷ್ಟು ಹಾಗೂ ಶಿಕ್ಷಣ ಮತ್ತು ಆರೋಗ್ಯ ವಲಯಕ್ಕೆ ಶೇ.39ರಷ್ಟು ಹಣವನ್ನು ವಿನಿಯೋಗಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ವರ್ಷ ಹೆಚ್ಚಿನ ಮಳೆಯಾಗಿದ್ದರಿಂದ ಒಂದೆಡೆ ಅಣೆಕಟ್ಟುಗಳು ಭರ್ತಿಯಾದರೆ ಇನ್ನೊಂದೆಡೆ ಅತಿವೃಷ್ಟಿಯಿಂದ ಬೆಳೆಗಳಿಗೆ ಹಾನಿಯಾಗಿದೆ. ಜಂಟಿ ಸಮೀಕ್ಷೆ ಕಾರ್ಯವನ್ನು ಸಮರ್ಪಕವಾಗಿ ಮಾಡಿ ಬೆಳೆ ಪರಿಹಾರವನ್ನು ಶೀಘ್ರವಾಗಿ ನೀಡಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ.

ಇದನ್ನು ಓದಿ : ಧರ್ಮಸ್ಥಳ ಕೇಸ್‌: ಬಂಗ್ಲಗುಡ್ಡದಲ್ಲಿ ಮಹಜರಿಗೆ ಎಸ್‌ಐಟಿಗೆ ಅರಣ್ಯ ಇಲಾಖೆ ಗ್ರೀನ್‌ ಸಿಗ್ನಲ್‌

ಈ ಭಾಗದ ಎಸ್.ಎಸ್.ಎ.ಲ್.ಸಿ. ಮತ್ತು ಪಿ.ಯು.ಸಿ.ಗಳಲ್ಲಿ ಉತ್ತೀರ್ಣರಾಗುವವರ ಪ್ರಮಾಣ ತೀರಾ ಕಡಿಮೆ ಇದೆ. ಶಿಕ್ಷಣದ ಗುಣಮಟ್ಟ ಕಾಪಾಡಲು, ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಹೆಚ್ಚಳ ಹಾಗೂ ವಸತಿ ನಿಲಯ ಕಟ್ಟಡ ನಿರ್ಮಾಣ ಹೀಗೆ ಅನೇಕ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಕಳೆದ ಎರಡು ವರ್ಷದಿಂದ ‘ಅಕ್ಷರ ಆವಿಷ್ಕಾರ’ ಕಾರ್ಯಕ್ರಮ ರೂಪಿಸಿ ಇದೂವರೆಗೆ 6,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನಗಳನ್ನು ಖರ್ಚು ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಒಟ್ಟು 5,267 ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಇವುಗಳನ್ನು ಭರ್ತಿ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಈ ವರ್ಷದಿಂದ 10ನೇ ತರಗತಿಯ ಮಕ್ಕಳಿಗೆ ವಿಶೇಷ ತರಗತಿಗಳನ್ನು ಪ್ರಾರಂಭಿಸುತ್ತಿದ್ದೇವೆ.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಒಟ್ಟು 350 ಕೆ.ಪಿ.ಎಸ್. ಶಾಲೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ನಿರ್ಮಿಸುವ ಗುರಿ ಹೊಂದಿದ್ದೇವೆ. ಇದಲ್ಲದೆ ಉನ್ನತ ಶಿಕ್ಷಣಕ್ಕೂ ಕಳೆದ ಎರಡು ವರ್ಷಗಳಲ್ಲಿ 250 ಕೋಟಿ ರೂ.ಗಳನ್ನು ಒದಗಿಸಿದ್ದೇವೆ.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಬ್ಯಾಂಕ್ ಖಾತೆಗಳಲ್ಲಿ ಲಭ್ಯವಿರುವ ಬಡ್ಡಿ ಮೊತ್ತದಲ್ಲಿ ಪ್ರದೇಶದ 15 ಮಹಿಳಾ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯನ್ನು 48 ಕೋಟಿ ರೂ. ಗಳ ವೆಚ್ಚದಲ್ಲಿ ಪ್ರಾರಂಭಿಸಲಾಗುತ್ತಿದೆ.

ರಾಯಚೂರಿನಲ್ಲಿ ಏಮ್ಸ್ ಸಂಸ್ಥೆಯನ್ನು ಸ್ಥಾಪಿಸಲು ನಮ್ಮ ಸರ್ಕಾರವು ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಲು ಸಿದ್ಧವಿದೆ. ಕೇಂದ್ರಕ್ಕೆ ಹಲವಾರು ಪತ್ರಗಳನ್ನು ಬರೆದಿದ್ದೇವೆ. ಸ್ವತಃ ಕೇಂದ್ರದ ಸಚಿವರುಗಳನ್ನು ಭೇಟಿ ಮಾಡಿ ಒತ್ತಾಯಿಸಿದ್ದೇವೆ. ಆದರೂ ಸಹ ಕೇಂದ್ರ ಸರ್ಕಾರ ಕಿಂಚಿತ್ತು ಸಹಕಾರವನ್ನು ತೋರಿಸುತ್ತಿಲ್ಲ. ಹಾಗಾಗಿ ಕೇಂದ್ರ ಸರ್ಕಾರವು ಕೂಡಲೆ ಏಮ್ಸ್ ಸಂಸ್ಥೆ ಪ್ರಾರಂಭಿಸಲು ಕ್ರಮವಹಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಹನೂರು| ರಾಜ್ಯ ಸರ್ಕಾರದ ವಿರುದ್ಧ ಅಂಡೆ ಕುರುಬನದೊಡ್ಡಿ ಗ್ರಾಮಸ್ಥರಿಂದ ಪ್ರತಿಭಟನೆ

ಮಹಾದೇಶ್‌ ಎಂ ಗೌಡ  ಹನೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಡೆ ಕುರುಬನ ದೊಡ್ಡಿ ಗ್ರಾಮದ ಡಾಂಬರು ರಸ್ತೆ ಅಭಿವೃದ್ಧಿಗೆ…

23 mins ago

ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್‌ ಅಮಾನತಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಮೈಸೂರು: ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರನ್ನು ತಡೆದ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್‌ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.…

29 mins ago

ಮೈಸೂರು ಪಾಲಿಕೆಯಲ್ಲಿ ಅಕ್ರಮಗಳ ಸಂಖ್ಯೆ ಏರಿಕೆ: ಸಂಸದ ಯದುವೀರ್‌ ಆರೋಪ

ಮೈಸೂರು: ಮೈಸೂರು ನಗರ ಪಾಲಿಕೆ ಈಗ ಅವ್ಯವಸ್ಥೆಗಳ ಆಗರವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ…

47 mins ago

ನಮ್ಮ ಪಕ್ಷವನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್‌ ರೈತರಿಂದ ಬೆಳೆದ ಪಕ್ಷ, ನಾಶ ಮಾಡಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಹಾಸನ…

1 hour ago

ಗಣರಾಜ್ಯೋತ್ಸವ ಭಾಷಣ ಓದಲೂ ರಾಜ್ಯಪಾಲರ ತಗಾದೆ

ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನದ ವೇಳೆ ರಾಜ್ಯ ಸರ್ಕಾರದ ಭಾಷಣವನ್ನು ಸಂಪೂರ್ಣವಾಗಿ ಓದದೆ ಕೇವಲ ಎರಡು ಸಾಲಿನ ಭಾಷಣ ಓದಿ…

2 hours ago

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಪ್ರಸಕ್ತ 2025-26ನೇ ಸಾಲಿನ ರಾಜ್ಯಮಟ್ಟದ ಎಸ್‍ಎಸ್‍ಎಲ್‍ಸಿ ಪೂರ್ವ ಸಿದ್ಧತಾ ಪರೀಕ್ಷೆ-2ರ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಜ.27…

2 hours ago