ರಾಜ್ಯ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪಡೆಯಲು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ: ಆರ್‌.ಅಶೋಕ್‌ ಹೇಳಿದ್ದೇನು?

ಬೆಂಗಳೂರು: ಮುಡಾ ಹಗರಣದಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿವೇಶನದಲ್ಲಿ ದಾಖಲೆ ನೀಡದೆ ಹೇಡಿಯಂತೆ ಪಲಾಯನ ಮಾಡಿದ್ದಾರೆ. ಅವರ ರಾಜೀನಾಮೆ ಪಡೆಯಲು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಗುರುವಾರ(ಜು.25)ಬಿಜೆಪಿ ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಬೃಹತ್ತಾದ ಹಗರಣಗಳಲ್ಲಿ ಭಾಗಿಯಾಗಿರುವುದು ಜಗಜ್ಜಾಹೀರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಲೂಟಿ ಮಾಡಿದ ಎರಡು ಹಗರಣಗಳು ಬೆಳಕಿಗೆ ಬಂದಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣ ಬಯಲಿಗೆ ಬಂದಿದೆ. ಸಿದ್ದರಾಮಯ್ಯನವರು ಪತ್ನಿಯ ಹೆಸರಲ್ಲಿ 14 ನಿವೇಶನ ಪಡೆದಿದ್ದರೆ, ಅವರ ಕುಟುಂಬದವರು ನೂರಾರು ಸೈಟುಗಳನ್ನು ಪಡೆದಿದ್ದಾರೆ. ಸಂವಿಧಾನ ರಕ್ಷಣೆ ಮಾಡುತ್ತೇನೆಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದವರೇ ಸಂವಿಧಾನವನ್ನು ಭಕ್ಷಣೆ ಮಾಡಿದ್ದಾರೆ ಎಂದು ದೂರಿದರು.

ಈ ಹಗರಣಗಳ ಕುರಿತು ಮಾತನಾಡಲು ಸದನದಲ್ಲಿ ಅವಕಾಶ ನೀಡಿಲ್ಲ. ಸ್ಪೀಕರ್‌ ಕೂಡ ಕಾಂಗ್ರೆಸ್‌ ಕಡೆ ವಾಲಿರುವುದು ಸ್ಪಷ್ಟವಾಗಿದೆ. ವಿರೋಧ ಪಕ್ಷಕ್ಕೆ ಪ್ರಶ್ನೆ ಮಾಡುವ ಅಧಿಕಾರ ಇದೆ. ಆದರೆ ಅದನ್ನು ಮೊಟಕುಗೊಳಿಸಿ, ದಾಖಲೆಗಳನ್ನು ಕೊಡುತ್ತೇವೆಂಬ ಭಯದಿಂದ ಆಡಳಿತ ಪಕ್ಷ ಪಲಾಯನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಡಾದಲ್ಲಿ ದಲಿತರ ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಬಳಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕೂಡ ದಲಿತರಿಗೆ ಸಂಬಂಧಿಸಿದೆ. ಇಷ್ಟೇ ಅಲ್ಲದೆ 25 ಸಾವಿರ ಕೋಟಿ ರೂಪಾಯಿಯನ್ನು ದಲಿತರಿಗೆ ನೀಡದೆ ಬೇರೆ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಇದಕ್ಕಾಗಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಈ ಬಗ್ಗೆ ರಾಜ್ಯಪಾಲರಿಗೆ ದೂರು ಹಾಗೂ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿ ಬದಲು ಅಧಿವೇಶನದಲ್ಲೇ ದಾಖಲೆಗಳನ್ನು ನೀಡಲಿ. ಆಗ ನಾವು ಅಲ್ಲೇ ಪ್ರಶ್ನೆ ಕೇಳಬಹುದಿತ್ತು. ಅದನ್ನು ಬಿಟ್ಟು ಹೇಡಿಯಂತೆ ಪಲಾಯನ ಮಾಡಿದ್ದಾರೆ ಎಂದು ದೂರಿದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮಾದಕ ವಸ್ತು ಪತ್ತೆ ; ನಾಲ್ವರು ಸಿಸಿಬಿ ವಶಕ್ಕೆ

ಮೈಸೂರು : ಮಾದಕ ವ್ಯಸನ ಮುಕ್ತ ಮೈಸೂರು ವಿಮುಕ್ತಿ ಅಭಿಯಾನದ ಮುಂದುವರಿದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ ಸುಮಾರು…

30 mins ago

ಏಳು ವಿದೇಶಿಯರ ಬಂಧಿಸಿದ ಎನ್‌ಐಎ

ಹೊಸದಿಲ್ಲಿ : ಭಾರತೀಯ ದಂಗೆಕೋರ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಜನಾಂಗೀಯ ಯುದ್ಧ ಗುಂಪುಗಳನ್ನು ಸಂಪರ್ಕಿಸಲು ಮತ್ತು ತರಬೇತಿ ನೀಡಲು ಅಕ್ರಮವಾಗಿ…

3 hours ago

ಮೈಸೂರು | ಆಕಸ್ಮಿಕ ಬೆಂಕಿಗೆ ವ್ಯಕ್ತಿ ಸಜೀವ ದಹನ

ಮೈಸೂರು : ಸ್ಥಗಿತಗೊಂಡಿದ್ದ ಚಿತ್ರಮಂದಿರದ ಆವರಣದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಲ್ಲಿನ ವಾಚ್‌ಮನ್ ಒಬ್ಬರು ಸಜೀವ ದಹನಗೊಂಡ ದಾರುಣ…

3 hours ago

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ

ಬೆಂಗಳೂರು : 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಪ್ರಾರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

3 hours ago

ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಸಂಭ್ರಮ : ಮಾದಪ್ಪನಿಗೆ ಎಣ್ಣೆಮಜ್ಜನ

ಹನೂರು : ರಾಜ್ಯದ ಪ್ರಸಿದ್ದ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆ ಮಂಗಳವಾರ…

3 hours ago

ಕುಡಿಯುವ ನೀರು ಸಮಸ್ಯೆಗೆ ಸರ್ಕಾರದ ಕ್ರಮವೇನು? : ಅಧಿವೇಶನದಲ್ಲಿ ಎಂಎಲ್‌ಎ ಮಂಜುನಾಥ್‌ ಪ್ರಶ್ನೆ

ಹನೂರು : ತಾಲೂಕು ವ್ಯಾಪ್ತಿಯ ಒಂಬತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಶಾಶ್ವತ ಪರಿಹಾರಕ್ಕೆ ಸರ್ಕಾರ…

3 hours ago