ಬೆಂಗಳೂರು : ಬಿಜೆಪಿ ಸರ್ಕಾರದ ಅವಯಲ್ಲಿ ನಡೆದಿದ್ದ ಪಠ್ಯ ಪರಿಷ್ಕರಣೆ ಅವಘಡಗಳ ಕುರಿತು ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ.
2020ರಲ್ಲಿ ಬಿಜೆಪಿ ಸರ್ಕಾರ ಬಲಪಂಥೀಯ ಮುಖಂಡರನ್ನು ಪಠ್ಯ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ನಿಯೋಜಿಸಿ ಹಲವು ಆಕ್ಷೇಪಾರ್ಯ ಪಠ್ಯಗಳನ್ನು ಅಥವಾ ಅಂಶಗಳನ್ನು ಸೇರ್ಪಡೆ ಮಾಡಿತ್ತು.ಇದನ್ನು ಶಿಕ್ಷಣ ತಜ್ಞರು, ಪ್ರಗತಿಪರರು ಪ್ರಬಲವಾಗಿ ವಿರೋಧಿಸಿದ್ದರು. ಪ್ರತಿಪಕ್ಷಗಳಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಪ್ರತಿಭಟನೆಗೆ ತಲೆ ಕೆಡಿಸಿಕೊಳ್ಳದ ಬಿಜೆಪಿ ಪರಿಷ್ಕೃತ ಪಠ್ಯ ಕ್ರಮಗಳನ್ನು ಜಾರಿಗೊಳಿಸಿತ್ತು. ಅದನ್ನು ವಿರೋಧಿಸಿ ಕಾಂಗ್ರೆಸ್ ಹಲವಾರು ಬಾರಿ ಪತ್ರಿಕಾಗೋಷ್ಠಿ ನಡೆಸಿತ್ತು, ಟೀಕೆಗಳನ್ನು ಮಾಡಿತ್ತು.
ಈಗ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಹಿಂದಿನ ಸರ್ಕಾರ ಮಾಡಿದಂತಹ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವ ಚರ್ಚೆಗಳು ನಡೆದಿವೆ. ಏಕಾಏಕಿ ಎಲ್ಲವನ್ನು ಬದಲಾವಣೆ ಮಾಡುವ ಬದಲಾಗಿ ತಜ್ಞರ ಸಮಿತಿ ರಚಿಸಿ ವರದಿ ಪಡೆದು ಹಂತ ಹಂತವಾಗಿ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ವಿಧಾನಸಭೆಗೂ ಮುನ್ನ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸುವುದಾಗಿ ತಿಳಿಸಿದೆ. ಇದು ಕೂಡ ವಿವಾದಾತ್ಮಕ ನಿರ್ಧಾರವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಉಂಟು ಮಾಡುವ ಸಾಧ್ಯತೆ ಇದೆ.
ಹೀಗಾಗಿ ಶಿಕ್ಷಣ ನೀತಿಯನ್ನು ಸಮಗ್ರವಾಗಿ ತಿರಸ್ಕರಿಸಬೇಕೆ ಅಥವಾ ಶಿಕ್ಷಣ ಸುಧಾರಣೆಗೆ ಪೂರಕವಾದ ಅಂಶಗಳನ್ನು ಉಳಿಸಿಕೊಂಡು ಆಕ್ಷೇಪಾರ್ಹ ವಿಚಾರಗಳನ್ನು ತಿರಸ್ಕರಿಸಬೇಕೆ ಎಂಬ ಬಗ್ಗೆ ಚರ್ಚಿಸಿ ಪೂರಕವಾದ ಶಿಕ್ಷಣ ನೀತಿಯನ್ನು ರೂಪಿಸಲು ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಶಿಕ್ಷಣ ನೀತಿ ಮತ್ತು ಪಠ್ಯ ಕ್ರಮ ಪರಿಷ್ಕರಣೆ ವ್ಯಾಪಕ ಚರ್ಚೆಯಾಗುವ ಸಾಧ್ಯತೆ ಇದೆ. ಬಿಜೆಪಿ ತನ್ನ ಸಿದ್ದಾಂತಕ್ಕೆ ಪೂರಕವಾಗಿ ಪಠ್ಯ ಕ್ರಮ ಪರಿಷ್ಕರಣೆ ಮಾಡಿದರೆ ಕಾಂಗ್ರೆಸ್ ತನ್ನ ನಂಬಿಕೆಗಳಿಗೆ ಅನುಸಾರವಾಗಿ ಬದಲಾವಣೆ ಮಾಡುವುದು ಸರಿಯಲ್ಲ ಎಂಬ ವ್ಯಾಖ್ಯಾನಗಳಿವೆ.
ಹೀಗಾಗಿ ಸಿದ್ದಾಂತ ಮತ್ತು ನಂಬಿಕೆಗಳ ತಾಕಲಾಟದಿಂದ ಹೊರಗಿಟ್ಟು ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ ನೀಡಲು ಅನುಗುಣವಾಗಿ ಪಠ್ಯ ಕ್ರಮ ಪರಿಷ್ಕರಣೆ ಮಾಡಬೇಕು, ಸೌಹಾರ್ದತೆ, ಶಾಂತಿ, ಸಹಬಾಳ್ವೆ ಮತ್ತು ವೀರಶೌರ್ಯ ಪರಾಕ್ರಮಗಳನ್ನು, ಮಾನವೀಯತೆಯನ್ನು ಮಕ್ಕಳಿಗೆ ಬೋಸುವುದು, ವೈಚಾರಿಕತೆ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಪಠ್ಯ ಪರಿಷ್ಕರಣೆಯನ್ನು ಪರಿಶೀಲಿಸಬೇಕೆಂದು ಪ್ರಾಥಮಿಕ ಹಂತದಲ್ಲಿ ಸಲಹೆಗಳು ಕೇಳಿಬಂದಿವೆ ಎನ್ನಲಾಗಿದೆ.