ಬೆಂಗಳೂರು : ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ” ಸಮಸ್ತ ಕರ್ನಾಟಕವು ಹೆಮ್ಮೆಪಡುವಂತಹ ಕ್ಷಣಗಳಿಗೆ ರಾಜ್ಯಸಭೆ ಇಂದು ಸಾಕ್ಷಿಯಾಗಿದೆ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿರುವುದು ದೇಶದ ರಾಜಕೀಯದಲ್ಲಿ ಒಂದು ಶುಭ ಸಂಕೇತವಾಗಿದೆ. ಧಾರ್ಮಿಕ ಹಾಗೂ ಸಮಾಜ ಸೇವೆಯಲ್ಲಿ ಅಪ್ರತಿಮ ಸಾಧನೆಗೆ ಹೆಸರಾಗಿರುವ ಅವರ ಸಲಹೆ, ಅಭಿಪ್ರಾಯಗಳು ಇಡೀ ರಾಷ್ಟ್ರಕ್ಕೆ ಅಮೂಲ್ಯವೆನಿಸಬಲ್ಲವು. ಶ್ರೀಯುತರಿಗೆ ಹಾರ್ದಿಕ ಅಭಿನಂದನೆಗಳು.”
ಎಂದು ಟ್ವೀಟ್ ಮಾಡಿದ್ದಾರೆ.
ವೀರೇಂದ್ರ ಹಗ್ಗಡೆ ಅವರು “ಭಾರತ ಸಂವಿಧಾನದಲ್ಲಿ ನಿಜವಾದ ನಂಬಿಕೆಯನ್ನು ಹೊಂದಿ, ನನ್ನ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುವೆ” ಎಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುವ ಮೂಲಕ ಪ್ರಮಾಣ ವಚನ ಸ್ವೀಕರಿಸಿದರು. ಸಂಸತ್ ಭವನಕ್ಕೆ ಆಗಮಿಸಿದ ವೀರೇಂದ್ರ ಹೆಗ್ಗಡೆ ಅವರನ್ನು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಮತ್ತು ಪಿಯೂಷ್ ಗೋಯೆಲ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮುಂತಾದವರು ಬಹಳ ಆತ್ಮೀಯವಾಗಿ ಸ್ವಾಗತಿಸಿದ್ದರು.