ಡಿಸೆಂಬರ್ 13 ರಿಂದ ಸುವರ್ಣಸೌಧದಲ್ಲೇ ಅಧಿವೇಶನ : ಸಿಎಂ

ಬೆಳಗಾವಿ: ಈ ಬಾರಿ ಸುವರ್ಣಸೌಧದಲ್ಲಿ ಅಧಿವೇಶನ‌ ನಡೆಯಲಿದೆ. ಡಿಸೆಂಬರ್ 13 ರಿಂದ ಸುವರ್ಣಸೌಧದಲ್ಲೇ ಅಧಿವೇಶನ ನಡೆಯಲಿದೆ. ಈಗಾಗಲೇ ಸ್ಪೀಕರ್ ಅಧಿವೇಶನದ ತಯಾರಿ ವೀಕ್ಷಿಸಿದ್ದಾರೆ. ಜಿಲ್ಲಾಡಳಿತದಿಂದ ಅಗತ್ಯವಿರುವ ಸಿದ್ಧತೆ ಮಾಡಿಕೊಂಡಿದ್ದೇವೆ. ಕೊವಿಡ್ ಮಾರ್ಗಸೂಚಿ ಪಾಲಿಸಿ ಅಧಿವೇಶನ ನಡೆಸುತ್ತೇವೆ ಎಂದು ಮಂಗಳವಾರ ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ನಿನ್ನೆಯವರೆಗೆ 420 ಕೋಟಿ ರೂ. ನೆರೆ ಪರಿಹಾರ ಕೊಟ್ಟಿದ್ದೇವೆ. ಬೆಳಗಾವಿ ಭಾಗದಲ್ಲಿ ದ್ರಾಕ್ಷಿ, ತರಕಾರಿ ಬೆಳೆ ಹಾನಿಯಾಗಿದೆ. ಅವುಗಳಿಗೂ ಪರಿಹಾರ ಒದಗಿಸಲು ತೀರ್ಮಾನ ಮಾಡಿದ್ದೇವೆ. ವಸತಿ ರಹಿತರಿಗೆ ವಿಶೇಷ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಗ್ರಾಮ ಪಂಚಾಯತ್​ಗಳ ಬಗ್ಗೆ ಕಳಕಳಿ ತೋರಿಸುತ್ತಿದ್ದಾರೆ. ಚುನಾವಣೆ ಹತ್ತಿರವಿದ್ದಾಗ ಮನೆ ಘೋಷಿಸಿ ಹಣ ನೀಡಲಿಲ್ಲ. ಇದನ್ನು ನಾನು ಹೇಳಿಲ್ಲ ದಾಖಲೆಗಳು ಹೇಳುತ್ತವೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೂಡ ಹೇಳಿದ್ದಾರೆ. ಕೃಷಿ ಯೋಜನೆಗಳು, ಜಲಜೀವನ್ ಮಿಷನ್, ಮಾನವ ದಿನಗಳನ್ನು ಹೆಚ್ಚಿಸಿದ್ದು ಮೋದಿ ಸರ್ಕಾರ. ನಮ್ಮ ಸರ್ಕಾರ ಬಂದ ಮೇಲೆ ವಿದ್ಯಾನಿಧಿ ಯೋಜನೆ ಮನೆ ಬಾಗಿಲಿಗೆ ಸರ್ಕಾರ ತರುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂಬ ಹೆಚ್‌.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ಧಾರೆ. ಅದು ಅವರ ಪಕ್ಷದ ವಿಚಾರ ನಾವೇನೂ ಮಾಡಲ್ಲ. ನಮ್ಮ ಹಿರಿಯ ನಾಯಕ ಬಿಎಸ್‌ವೈ ತಮ್ಮ ವಿಚಾರ ವ್ಯಕ್ತಪಡಿಸಿದ್ರು. ಎಲ್ಲಿ ಸ್ಪರ್ಧಿಸಲ್ಲ ಅಲ್ಲಿ ಬೆಂಬಲ ಕೊಟ್ರೆ ಒಳ್ಳೆಯದು ಅಂತಾ ಕೇಳಿದ್ರು. ನಾವೇನೂ ಅವರ ಬೆಂಬಲವನ್ನು ಕೇಳಿರಲಿಲ್ಲ. ಅವರು ಏನ್ ತೀರ್ಮಾನ ತಗೆದುಕೊಳ್ತಾರೆ ತಗೆದುಕೊಳ್ಳಲಿ ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಹೇಳಿಕೆ ನೀಡಿದ್ದಾರೆ.

ಈ ಚುನಾವಣೆಯಲ್ಲಿ ಆತಂಕ ಇರೋದು ಕಾಂಗ್ರೆಸ್ ಪಕ್ಷಕ್ಕೆ‌‌
ಬೆಳಗಾವಿ ಜಿಲ್ಲೆ ಬಿಜೆಪಿಗೆ ದೊಡ್ಡ ಬಲವನ್ನು ಕೊಟ್ಟಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ವಿಜಯದ ಪರಂಪರೆ ಬೆಳಗಾವಿಯಲ್ಲಿ ಬಿಜೆಪಿಗೆ ಸದಾಕಾಲ ಇದೆ. ಮಹಾಂತೇಶ್ ಕವಟಗಿಮಠರನ್ನ ಆಯ್ಕೆ ಮಾಡಿ ತರುವಂತೆ ಪದಾಧಿಕಾರಿಗಳಿಗೆ ಸಿಎಂ ಮನವಿ ಮಾಡಿದ್ದಾರೆ. ಎಲ್ಲ ಶಾಸಕರು ಒಕ್ಕಟ್ಟಾಗಿ ಮಹಾಂತೇಶ್ ಕವಟಗಿಮಠಗೆ ಪ್ರಥಮ ಪ್ರಾಶಸ್ತ್ಯದ ಮತ ಕೊಡಿಸಬೇಕು. ರಾಜಕಾರಣ ಮುಂದಿನ ಒಂದು ವರ್ಷ ತೀವ್ರವಾಗಿ ನಡೆಯುತ್ತೆ. ಕಾಂಗ್ರೆಸ್ ಪಕ್ಷದ ನಾಯಕರು ಹತಾಶರಾಗಿದ್ದಾರೆ. ಅವರ ಮಾತಿನಿಂದ ಗೊತ್ತಾಗುತ್ತೆ, ಮನುಷ್ಯ ಹತಾಶೆಯಾದಾಗ ಇಂತಹ ಮಾತುಗಳು ಬರುವುದು ಸಹಜ. ನಾವು ಅವರಂತೆ ಮಾತನಾಡುವುದು ಬೇಡ ಎಂದು ಬೊಮ್ಮಾಯಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರಿಂದ ನಮಗೆ ಯಾವುದೇ ಸರ್ಟಿಫಿಕೇಟ್ ಬೇಕಿಲ್ಲ. ಕಾಂಗ್ರೆಸ್ ನವರು ಅಭಿವೃದ್ಧಿ ವಿಚಾರ ಬಂದಾಗ ದೂರ ಉಳಿದು, ತಾವು ಸರ್ಕಾರದಲ್ಲಿದ್ದಾಗ ಎನೂ ಮಾಡಲಿಲ್ಲ ಎಂಬುದನ್ನ ಮರೆಮಾಚಿ, ಈ ಚುನಾವಣೆಯಲ್ಲಿ ದಿಕ್ಕು ತಪ್ಪಿಸುವುದನ್ನ ಅವರು ಮಾಡುತ್ತಿದ್ದಾರೆ. ಮಹಾಂತೇಶ್ ಕವಟಗಿಮಠ ಗೆಲ್ಲುವುದು ಸೂರ್ಯಚಂದ್ರ ಇರುವಷ್ಟು ಸತ್ಯ. ಜಿ.ಪಂ ಮತ್ತು ತಾ.ಪಂ ಚುನಾವಣೆ ನಮಗೆ ಬಹಳ ಮುಖ್ಯ. ಜಿಪಂ, ತಾಪಂ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಅತೀ ಹೆಚ್ಚು ಸ್ಥಾನ ಗೆದ್ರೇ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗ್ತಾರೆ. ಈ ಚುನಾವಣೆಯಲ್ಲಿ ಆತಂಕ ಇರೋದು ಕಾಂಗ್ರೆಸ್ ಪಕ್ಷಕ್ಕೆ‌‌ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

× Chat with us