ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಪ್ರಸ್ತುತ ಇರುವ ಯಾವುದೇ ಅಧಿಕಾರವನ್ನು ಕಡಿತಗೊಳಿಸುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ತಿಳಿಸಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಮಂಗಳವಾರ ಭೇಟಿಯಾಗಿ ಚರ್ಚೆ ನಡೆಸಿದ ನಂತರ ಮಾತನಾಡಿದ ಗೃಹ ಸಚಿವರು,
ಪಂಚಾಯಿತಿ ಜನಪ್ರತಿನಿಧಿಗಳ ಆತಂಕವನ್ನು ಸಿಎಂ ಗಮನಕ್ಕೆ ತಂದಾಗ ತಕ್ಷಣ ಸ್ಪಂದಿಸಿದ ಅವರು, ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮಗಳಿಗೆ ಯಾವುದೇ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು
ತಿರಸ್ಕರಿಸಿರುವುದಾಗಿ ತಿಳಿಸಿದರು ಎಂದರು.
ಗ್ರಾಮ ಪಂಚಾಯಿತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಭದ್ರ ಬುನಾದಿಯಾಗಿವೆ. ಗ್ರಾಮೀಣ ಭಾಗದಲ್ಲಿ, ಭವಿಷ್ಯದ ನಾಯಕತ್ವ ರೂಪಿಸುವಲ್ಲಿ ಗಣನೀಯ ಕೊಡುಗೆ ಸಲ್ಲಿಸುತ್ತಿವೆ.
ಆದ್ದರಿಂದ ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಅಧಿಕಾರ ವಿಕೇಂದ್ರಿಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬದ್ಧತೆಯಿಂದ ಕೂಡಿದೆ ಎಂದು ಸಚಿವರು ತಿಳಿಸಿದರು.
ಗ್ರಾಮ ಪಂಚಾಯಿತಿಯ ನೌಕರರ ಸೇವಾ ನಿಯಮಾವಳಿಗಳಿಗೆ, ತಿದ್ದುಪಡಿ ತಂದು, ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರ ಅಧಿಕಾರವನ್ನು ಮೊಟಕುಗೊಳಿ ಸುವ ವರದಿಗಳಿಗೆ ಅದನ್ನು ತಿರಸ್ಕರಿಸುವ ಮೂಲಕ ಮುಖ್ಯಮಂತ್ರಿಗಳು ತೆರೆ ಎಳೆದಿದ್ದಾರೆ ಎಂದು ಸಚಿವರು ಹೇಳಿದರು.