ಬೆಂಗಳೂರು: ಸಾಲ ಮರುಪಾವತಿಸುವ ಕುರಿತಂತೆ ಮಾಡಿಕೊಂಡ ಒಪ್ಪಂದದ ಅವಧಿ ಮುಕ್ತಾಯವಾಗ ಬಳಿಕ ಭದ್ರತೆಯಾಗಿ ನೀಡಿದ್ದ ಚೆಕ್ ಬೌನ್ಸ್ ಆದಲ್ಲಿ ನೆಗೋಷಿಯಬಲ್ ಇನ್ನುಮೆಂಟ್ ಕಾಯ್ದೆ-1881ರ ಸೆಕ್ಷನ್ 138ರ ಅಡಿ ಶಿಕ್ಷಿಸಲು ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಚೆಕ್ ನೀಡಿದ್ದ ವ್ಯಕ್ತಿಯನ್ನು ಖುಲಾಸೆಗೊಳಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಕೆ.ಎನ್ ರಾಜು ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೋಮಶೇಖರ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತೀರ್ಪು: ರಾಜು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ಎನ್ಐ ಕಾಯ್ದೆಯ ಪ್ರಕಾರ ಚೆಕ್ ಬೌನ್ಸ್ ಆದ 30 ದಿನಗಳ ಒಳಗೆ ಹಣ ವಾಪಸ್ ನೀಡುವಂತೆ ಸೂಚಿಸಿ ಲೀಗಲ್ ನೋಟಿಸ್ ಕಳುಹಿಸಬಹುದು. ಅದರಂತೆ ರಾಜು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ಸಾಲ ವಾಪಸ್ಸು ಮಾಡುವ ಒಪ್ಪಂದದ ಅವಧಿ ಮುಕ್ತಾಯವಾದ 10 ತಿಂಗಳ ನಂತರ ಚೆಕ್ ಬೌನ್ಸ್ ಮಾಡಲಾಗಿದೆ. ಇದನ್ನು ಪಾಟಿ ಸವಾಲಿನ ವೇಳೆ ರಾಜು ಒಪ್ಪಿದ್ದಾರೆ. ಇನ್ನು ಚೆಕ್ ನಲ್ಲಿ ದಿನಾಂಕವಿಲ್ಲದೇ ಇದ್ದಾಗ ಅದನ್ನು ಕೊಟ್ಟ ದಿನದಿಂದ 6 ತಿಂಗಳಲ್ಲಿ ಬ್ಯಾಂಕ್ ಗೆ ಸಲ್ಲಿಸಬೇಕು. ಇಲ್ಲಿ ಕಾಲಾವಧಿ ಮೀರಿದೆ. ಇಂತಹ ಸಂದರ್ಭದಲ್ಲಿ ಆರೋಪಿ ಖುಲಾಸೆಗೊಳಿಸಿದ ಮ್ಯಾಜಿಸ್ಟ್ರೇಟ್ ಆದೇಶ ಸೂಕ್ತವಾಗಿದ್ದು, ಇದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿ ರಾಜು ಅವರ ಮೇಲ್ಮನವಿ ತಿರಸ್ಕರಿಸಿದೆ.