ರಾಜ್ಯ

ಚನ್ನಪಟ್ಟಣ ಉಪ ಚುನಾವಣೆ; ಸರ್ಕಾರದಿಂದ ವಿರೋಧಿ ಅಭ್ಯರ್ಥಿಗಳ ಮೇಲೆ ದಬ್ಬಾಳಿಕೆ; ʼಎಚ್‌ಡಿಕೆʼ ಆರೋಪ

ಜನರು ಬಂದರೂ ಅಂತ ಕೇಸ್ ಹಾಕಿದ್ದಾರೆ: ಕುಮಾರಸ್ವಾಮಿ 

ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯಕರ್ತರು, ಸಾರ್ವಜನಿಕರು ಸೇರಿದ್ದರು. ಎನ್ ಡಿಎ ಮೈತ್ರಿಕೂಟದ ನಾಯಕರು ದೊಡ್ಡ ಪ್ರಮಾಣದಲ್ಲಿ ಸೇರಿದ್ದರು. ಇದು ಐತಿಹಾಸಿಕ ಸಭೆ ಆಗಿತ್ತು. ಇದು ಕಾಂಗ್ರೆಸ್ ನಾಯಕರ ಕಣ್ಣು ಕುಕ್ಕಿದೆ ಎಂದು ಅವರು ದೂರಿದರು.

ಈ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಜನ ಕಾರ್ಯಕ್ರಮಕ್ಕೆ ಬರಬಾರದಾ? ಶುಕ್ರವಾರ ನಾಮಪತ್ರ ಸಲ್ಲಿಕೆಯ ನಂತರ ಒಂದು ನೊಟೀಸ್ ಕೊಟ್ಟಿದ್ದಾರೆ. ಬರುವವರ ಮೇಲೆಲ್ಲಾ ಕೇಸ್ ಹಾಕಿಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ ಇವರು. ಶುಕ್ರವಾರ ನಮ್ಮ ಪಕ್ಷದ ಅಧ್ಯಕ್ಷರಿಗೆ ನೊಟೀಸ್ ಕೊಟ್ಟಿದ್ದಾರೆ. ಇದಕ್ಕೆಲ್ಲಾ ನಾವು ಹೆದರುವ ಪ್ರಶ್ನೆ ಇಲ್ಲ. ಜನರ ಬಳಿ ನಾವು ಮತ ಕೇಳುತ್ತೇವೆ. ಅವರೇ ತೀರ್ಪು ಕೊಡುತ್ತಾರೆ ಎಂದು ಕೇಂದ್ರ ಸಚಿವರು ಗುಡುಗಿದರು.

ಸರ್ಕಾರ ಈ ಕಾರ್ಯಕ್ರಮಕ್ಕೆ ಬಂದ ವಾಹನಗಳಿಗೆ ನೊಟೀಸ್ ನೀಡಿದೆ. ಸಿಎಂ, ಡಿಸಿಎಂ ಆದಿಯಾಗಿ ಅವರ ಕಡೆಯಿಂದ ಎಲ್ಲಾರೂ ಚನ್ನಪಟ್ಟಣಕ್ಕೆ ಹೀಗಿದ್ದರಲ್ಲವೇ? ಹಾಗಿದ್ದರೆ, ಅವರ ಸಭೆಗಳಿಗೆ ಬಂದ ಜನರಿಗೆ ವಾಹನದ ವ್ಯವಸ್ಥೆ ಮಾಡೇ ಇರಲಿಲ್ಲವೇ? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.

ಶನಿವಾರ ನಮ್ಮ ಕಾರ್ಯಕ್ರಮಕ್ಕೆ ಬಂದವರ ವಿಡಿಯೋ ಮಾಡಿಕೊಂಡು, ಅಧಿಕಾರಿಗಳಿಗೆ ಹೇಳಿ ಕೇಸ್ ಹಾಕಿಸಿ ಯಾವ ಚುನಾವಣೆ ನಡೆಸಲು ಹೋಗ್ತಿದ್ದಾರೆ ಇವರು? ನಮ್ಮ ಪಕ್ಷದ ಅಧ್ಯಕ್ಷರಿಗೆ ಇದರ ಬಗ್ಗೆ ಒಂದು ನೊಟೀಸ್ ಕೊಟ್ಟಿದ್ದಾರೆ. ದಬ್ಬಾಳಿಕೆ ಮೂಲಕ ಇವರು ಚುನಾವಣೆ ನಡೆಸಲು ಹೋಗ್ತಿದ್ದಾರೆ. ಅಧಿಕಾರ ದುರುಪಯೋಗ ಮಾಡುತ್ತಿದೆ ಸರ್ಕಾರ. ಇದೆಲ್ಲವನ್ನೂ ನಾವು ಮೊದಲೇ ನಿರೀಕ್ಷೆ ಮಾಡಿದ್ದೆವು ಎಂದು ಅವರು ಕಿಡಿಕಾರಿದರು.

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಸೇರಿದಂತೆ ಮೂರೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾವು ಮೂರೂ ಕ್ಷೇತ್ರ ಗೆದ್ದಾಗಿದೆ ಎಂದು ಸಿಎಂ ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರ ಭಾವನಾತ್ಮಕ ಮಾತು ಮತ್ತು ಕಣ್ಣೀರು ಜನರಿಗೆ ಬೇಸರವಾಗಿ ಹೋಗಿದೆ ಅಂದಿದ್ದಾರೆ. ಪಾಪ.. ಇವರು ಎಂದೂ ಜನರ ಮುಂದೆ ಕಣ್ಣೀರೇ ಹಾಕಿಲ್ಲವೇ? ಹೌದು, ನಾನು ಜನರ ಕಷ್ಟ ನೋಡಿ ಕಣ್ಣೀರು ಹಾಕ್ತಿದ್ದೇನೆ. ಇವರು ಅಧಿಕಾರ, ಹಣದ ದುರ್ಬಳಕೆಯಿಂದ ಗೆದ್ದಾಗಿದೆ ಎಂದು ಬೀಗುತ್ತಿದ್ದಾರೆ. ಇವರಿಗೆ ಚನ್ನಪಟ್ಟಣದಲ್ಲಿ ನಿಲ್ಲಿಸೋಕೆ ಕಾಂಗ್ರೆಸ್ ಪಕ್ಷದಿಂದ ಒಬ್ಬ ಅಭ್ಯರ್ಥಿ ಸಿಗಲಿಲ್ಲ. ಬಿಜೆಪಿಯಿಂದ ಅಭ್ಯರ್ಥಿ ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ, ಇಷ್ಟಾದರೂ ಕುತಂತ್ರ ಬೇರೆ ಮಾಡಿದ್ದಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ನಾನು ಯಾರ‌ ಬಗ್ಗೆಯೂ ಟೀಕೆ ಮಾಡಲ್ಲ. ನನ್ನ ಕೆಲಸದ ಆಧಾರದಲ್ಲಿ ಮತ ಕೇಳುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ನಾನು ಇಡೀ ದೇಶಕ್ಕೆ ಕೆಲಸ ಮಾಡುತ್ತಿದ್ದೇನೆ

ಕುಮಾರಸ್ವಾಮಿ ಮಂಡ್ಯಕ್ಕೆ ಮಾತ್ರ ಸೀಮಿತಾರಾಗಿದ್ದಾರೆ ಎಂಬ ಸಿಎಂ ಹೇಳಿಕೆಗೆ ಎಚ್‌ಡಿಕೆ ತಿರುಗೇಟು ಕೊಟ್ಟರಲ್ಲದೆ, ಕಳೆದ ನಾಲ್ಕು ತಿಂಗಳ ನನ್ನ ಟಿಪಿ‌ ನೋಡಿದ್ದಾರಾ ಅವರು? ನನ್ನ ಇಲಾಖೆಗೆ ಸಂಬಂಧಿಸಿ ಹಲವು ರಾಜ್ಯಗಳಿಗೆ ಹೋಗಿದ್ದೇನೆ. ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸಗಢ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಹೋಗಿ ಬಂದಿದ್ದೇನೆ. ನಾನು ಎಷ್ಟು ರಾಜ್ಯಗಳಿಗೆ ಹೋಗಿದ್ದೀನಿ ಗೊತ್ತಿದೆಯಾ ಅವರಿಗೆ? ದೆಹಲಿಯಲ್ಲಿ ಸಮಯ ವ್ಯರ್ಥ ಮಾಡದೇ ಕೆಲಸ ಮಾಡುತ್ತಿದ್ದೇನೆ. ಇವರಿಂದ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳುವ ಅಗತ್ಯ ಇಲ್ಲ. ಹಾಗಾದರೆ, ಕರ್ನಾಟಕಕ್ಕೆ ಬರಲೇಬಾರದಾ ನಾನು? ನನ್ನನ್ನು ಗೆಲ್ಲಿಸಿದ ಜನರ ಕಷ್ಟ ಕೇಳಲು ಬರಲೇಬಾರದಾ? ನಾನು ಕರ್ನಾಟಕಕ್ಕೆ ಬಂದರೆ ಇವರು ನಿದ್ದೆಗೆಡುತ್ತಾರೆ ಎಂದು ಅವರು ಕಿಡಿಕಾರಿದರು.

ವಿಧಾನ ಪರಿಷತ್ ಸದಸ್ಯ ಭೋಜೆಗೌಡ ಅವರು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

11 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

11 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

12 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

13 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

13 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

13 hours ago