ಬೆಂಗಳೂರು : ‘ದೇಶದ ಹಣೆ ಬರಹ ಬದಲಾವಣೆ ಮಾಡಬೇಕಾಗಿದೆಯೇ ಹೊರತು ಹೆಸರುಗಳನ್ನು ಅಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೆ ರಸ್ತೆ ಹೆಸರು ಬದಲಾಯಿಸುತ್ತಿದ್ದರು. ಈಗ ದೇಶದ ಹೆಸರು ಬದಲಾವಣೆ ಮಾಡಲು ಹೊರಟ್ಟಿದ್ದಾರೆ. ಮೊದಲು ದೇಶದ ಹಣೆ ಬರಹ ಬದಲಾಯಿಸಿ, ಹಸಿವಿನಿಂದ ಎಷ್ಟು ಜನ ಸಾಯುತ್ತಿದ್ದಾರೆ. ಜತೆಗೆ, ಕೇಂದ್ರ ಸರಕಾರ ಮೇಕ್ ಇನ್ ಇಂಡಿಯಾ, ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ’ ಎಂದು ಒತ್ತಾಯಿಸಿದರು.
ಕೆಲವರು ವಾಟ್ಸಪ್ ವಿಶ್ವವಿದ್ಯಾಲಯಗಳಿಂದ ತಿಳಿದುಕೊಂಡು ಬಂದಿದ್ದಾರೆ. ಅವರು ನಿಜವಾದ ಇತಿಹಾಸ ತಿಳಿದುಕೊಂಡಿಲ್ಲ. ಭಾರತ, ಇಂಡಿಯಾ ಹೆಸರು ಹೇಗೆ ಬಂದಿದೆ ಎಂದು ತಿಳಿದುಕೊಳ್ಳಲಿ ಎಂದ ಅವರು, ಸಂವಿಧಾನದಿಂದ ಸ್ವಾಭಿಮಾನದ ಬದುಕು ಸಿಗುತ್ತದೆ. ಸಂವಿಧಾನದಿಂದ ಏನೂ ಇಲ್ಲವೆಂದು ಬಿಜೆಪಿ ಪಕ್ಷದವರು ಹೇಳಲಿ ಎಂದು ಹೇಳಿದರು.