ಮೈಸೂರು: ಇಸ್ರೋದ ಮಹತ್ವಕಾಂಕ್ಷೆಯ ಚಂದ್ರಯಾನ-3ರ ಕಡೆ ಎಲ್ಲರ ಗಮನ ನೆಟ್ಟಿದೆ. ಚಂದ್ರಯಾನ-2ರ ಭಾಗಶಃ ಯಶಸ್ಸಿನ ನಂತರದ, ಈ ಯೋಜನೆ ಜೂನ್- ಜುಲೈ ತಿಂಗಳಿನಲ್ಲಿ ಸಾಕಾರಗೊಳ್ಳುವ ನಿರೀಕ್ಷೆ ಇದೆ.
2023ರ ಜೂನ್ – ಜುಲೈ ತಿಂಗಳಲ್ಲಿ ನಡೆಯಲಿರುವ ಚಂದ್ರಯಾನ-3 ಉಡಾವಣೆ ಚಂದ್ರನ ಕತ್ತಲಿನ ಮೇಲ್ಮೈಯನ್ನು ಅಧ್ಯಯನ ನಡೆಸಲಿದೆ. ಈ ಯೋಜನೆಯು ಈ ಹಿಂದೆ 2019ರಲ್ಲಿ ನಡೆದ ಚಂದ್ರಯಾನ-2 ಯೋಜನೆಯ ಮುಂದುವರಿದ ಭಾಗವಾಗಿದೆ. ಆ ಪ್ರಯತ್ನದಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡ್ ಆಗಲು ವಿಫಲವಾಗಿತ್ತು. ದುರದೃಷ್ಟವಶಾತ್, ಯೋಜನೆಯ ಅಂತಿಮ ಹಂತದಲ್ಲಿ ಲ್ಯಾಂಡರ್ ಮತ್ತು ರೋವರ್ಗಳ ಅಸಮರ್ಪಕ ಕ್ರಿಯೆಯ ಕಾರಣದಿಂದ, ಅವುಗಳು ನೆಲಕ್ಕಪ್ಪಳಿಸಿ, ಧ್ವಂಸವಾಗಿದ್ದವು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಮೂರನೆಯ ಬಾರಿಗೆ ಚಂದ್ರನ ದಕ್ಷಿಣ ಧ್ರುವದ ಅನ್ವೇಷಣಾ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದ್ದು, ಯೋಜನೆಗೆ ಚಂದ್ರಯಾನ-3 ಎಂದು ಹೆಸರಿಡಲಾಗಿದೆ. ಚಂದ್ರಯಾನ-3 ಲಾಂಚ್ ವೆಹಿಕಲ್ ಮಾರ್ಕ್ 3 (ಎಲ್ಎಂವಿ ಎಂಕೆ III) ಮೂಲಕ ಜೂನ್ – ಜುಲೈ ತಿಂಗಳಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ. ಚಂದ್ರನ ದಕ್ಷಿಣ ಧ್ರುವದ ನೆರಳಿನಿಂದ ಆವೃತ್ತವಾಗಿರುವ ಪ್ರದೇಶದಲ್ಲಿ ನೀರು ಇರುವ ಸಾಧ್ಯತೆಯ ಕಾರಣದಿಂದ ಇಸ್ರೋ ಅಲ್ಲಿ ಸಂಶೋಧನೆ ನಡೆಸಲು ಹೆಚ್ಚು ಆಸಕ್ತವಾಗಿದೆ. ಈ ಪ್ರದೇಶಗಳು ‘ಕೋಲ್ಡ್ ಟ್ರ್ಯಾಪ್’ ಆಗಿಯೂ ಕಾರ್ಯಾಚರಿಸುವ ಕಾರಣ, ಸೌರವ್ಯೂಹದ ಆರಂಭದ ಸಾಕ್ಷಿಗಳೂ ಅಲ್ಲಿ ಲಭ್ಯವಾಗುವ ಸಾಧ್ಯತೆಗಳೂ ಇವೆ.
ಚಂದ್ರಯಾನ-3 ಯೋಜನೆ ಹಿಂದೆ ಜುಲೈ 22, 2019ರಲ್ಲಿ ಕೈಗೊಂಡ ಚಂದ್ರಯಾನ-2ರ ಪುನರಾವರ್ತನೆಯಾಗಿರಲಿದೆ. ಚಂದ್ರನ ಮೇಲ್ಮೈಯಲ್ಲಿ ಹಗುರವಾಗಿ ಲ್ಯಾಂಡರ್ ಮತ್ತು ರೋವರ್ ಇಳಿಸಲು ಇಸ್ರೋ ಸಿದ್ಧತೆ ನಡೆಸಿದೆ. ಚಂದ್ರಯಾನ್ – 2 ಯೋಜನೆಯ ವಿಕ್ರಮ್ ಲ್ಯಾಂಡರ್ ಹಗುರವಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ವಿಫಲವಾದ ಕಾರಣ, ಇಸ್ರೋ ಚಂದ್ರನ ಧ್ರುವಗಳ ಅಧ್ಯಯನ ನಡೆಸುವ ಸಲುವಾಗಿ ಹಗುರ ಚಂದ್ರ ಸ್ಪರ್ಶ ನಡೆಸುವ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಪರೀಕ್ಷಿಸಲಿದೆ.
ಇಸ್ರೋ ಅಧ್ಯಕ್ಷರಾದ ಎಸ್ ಸೋಮನಾಥ್ ಅವರ ಪ್ರಕಾರ, ಚಂದ್ರಯಾನ – 3 ಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದ್ದು, ನಿರ್ಮಾಣ ಕಾರ್ಯದಲ್ಲೂ ವಿಭಿನ್ನತೆ ಸಾಧಿಸಿ, ಮೊದಲಿನ ಲ್ಯಾಂಡರ್ಗಿಂತಲೂ ಗಟ್ಟಿಮುಟ್ಟಾಗಿರುವಂತೆ ನಿರ್ಮಿಸಲಾಗಿದೆ. ಚಂದ್ರಯಾನ 3ರ ಲ್ಯಾಂಡರ್ ಇನ್ನಷ್ಟು ಬಲಶಾಲಿಯಾದ ಕಾಲುಗಳನ್ನು ಹೊಂದಿರಲಿದ್ದು, ಏನಾದರೂ ಸಂಭಾವ್ಯ ಸಮಸ್ಯೆ ಎದುರಾದರೆ, ಅದನ್ನು ಎದುರಿಸುವ ಸಾಮರ್ಥ್ಯ ಗಳಿಸಿದೆ. ಅದರೊಡನೆ, ಕಾರ್ಯಾಚರಣೆಯ ಸಂದರ್ಭದಲ್ಲಿ ಏನಾದರೂ ವೈಫಲ್ಯ ಎದುರಾದರೆ, ಈ ಆವೃತ್ತಿಯು ಬದಲಿ ವ್ಯವಸ್ಥೆಯನ್ನೂ ಹೊಂದಿದೆ.
ಜೂನ್ – ಜುಲೈ 2023ರಲ್ಲಿ ಉಡಾವಣೆ
ಇಸ್ರೋದ ಚಂದ್ರಯಾನ-3 ಮೂರು ಭಾಗಗಳನ್ನು ಹೊಂದಿದ್ದು, ಪ್ರೊಪಲ್ಷನ್ ಮಾಡ್ಯುಲ್, ಲ್ಯಾಂಡರ್ ಮಾಡ್ಯುಲ್ ಹಾಗೂ ರೋವರ್ ಮಾಡ್ಯುಲ್ಗಳಾಗಿವೆ. ಮೂರೂ ಭಾಗಗಳನ್ನೂ ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ. ಚಂದ್ರಯಾನ-3 ಅಂತರಗ್ರಹ ಯೋಜನೆಗಳಿಗೆ ಅಗತ್ಯವಿರುವ ನೂತನ ತಾಂತ್ರಿಕತೆಗಳನ್ನು ಪ್ರದರ್ಶಿಸಲಿದೆ. ಲ್ಯಾಂಡರ್ ಮಾಡ್ಯುಲ್ ಚಂದ್ರನ ಮೇಲ್ಮೈಯಲ್ಲಿ ನಿಗದಿಪಡಿಸಿದ ಪ್ರದೇಶದಲ್ಲಿ ಹಗುರವಾಗಿ ಕೆಳಗಿಳಿಯುವಂತೆ ನಿರ್ಮಿಸಲಾಗಿದೆ. ರೋವರ್ ಮಾಡ್ಯುಲ್ ತನ್ನ ಚಲನೆಯ ವೇಳೆ ಚಂದ್ರನ ಮೇಲ್ಮೈಯಲ್ಲಿ ಚಲಿಸುತ್ತಾ, ರಾಸಾಯನಿಕ ವಿಶ್ಲೇಷಣೆ ನಡೆಸುತ್ತದೆ.
ಉಪಕರಣಗಳನ್ನು ಒಯ್ಯಲಿವೆ.
ಚಂದ್ರಯಾನ-3ರ ಪ್ರೊಪಲ್ಷನ್ ಮಾಡ್ಯುಲ್ನ ಪ್ರಾಥಮಿಕ ಕಾರ್ಯವೆಂದರೆ ಲ್ಯಾಂಡರ್ ಅನ್ನು ಉಡಾವಣಾ ವಾಹನದಿಂದ, ಚಂದ್ರನಿಂದ ನೂರು ಕಿಲೋಮೀಟರ್ ದೂರದ ಧ್ರುವೀಯ ಕಕ್ಷೆಗೆ ಸೇರಿಸುವುದು. ಈ ಪ್ರೊಪಲ್ಷನ್ ಮಾಡ್ಯುಲ್ ಸಂವಹನ ರಿಲೇ ಉಪಗ್ರಹದ ರೀತಿಯಲ್ಲಿ ಕಾರ್ಯಾಚರಿಸಲಿದೆ. ಲ್ಯಾಂಡರ್ ಮತ್ತು ರೋವರ್ಗಳನ್ನು 100 ಕಿಲೋಮೀಟರ್ ದೂರದ ಚಂದ್ರನ ಕಕ್ಷೆಗೆ ತಲುಪಿಸುವ ಕಾರ್ಯದ ಜೊತೆಗೆ, ಪ್ರೊಪಲ್ಷನ್ ಮಾಡ್ಯುಲ್ ವೈಜ್ಞಾನಿಕ ಪೇಲೋಡ್ ಸಹ ಒಯ್ಯಲಿದೆ. ಲ್ಯಾಂಡರ್ ಮಾಡ್ಯುಲ್ ಬೀಳ್ಕೊಂಡ ನಂತರ ಅವುಗಳು ಬಳಕೆಗೆ ಬರುತ್ತವೆ.ಜಿಎಸ್ಎಲ್ವಿ ಎಂಕೆ3ಯನ್ನು (ಮರುನಾಮಕರಣ ಮಾಡಲಾದ ಎಲ್ಎಂವಿ ಎಂಕೆ3) 4 ಟನ್ಗಳ ತನಕ ಭಾರ ಹೊಂದಿರುವ ಉಪಗ್ರಹಗಳನ್ನು ಜಿಯೋಸಿಂಕ್ರೊನಸ್ ಟ್ರಾನ್ಸ್ಫರ್ ಆರ್ಬಿಟ್ಗೆ (ಜಿಟಿಓ) ಕೊಂಡೊಯ್ಯಲು ಮತ್ತು 10 ಟನ್ಗಳ ತೂಕ ಹೊಂದಿರುವ ಉಪಗ್ರಹಗಳನ್ನು 600 ಕಿಲೋಮೀಟರ್ ಎತ್ತರದಲ್ಲಿರುವ ಲೋ ಅರ್ತ್ ಆರ್ಬಿಟ್ (ಎಲ್ಇಓ) ಗೆ ಒಯ್ಯಲು ವಿನ್ಯಾಸಗೊಳಿಸಲಾಗಿದೆ. ಇದು ಮಾಡ್ಯುಲನ್ನು 170 × 36,500 ಕಿಲೋಮೀಟರ್ಗಳ ಎಲಿಪ್ಟಿಕ್ ಪಾರ್ಕಿಂಗ್ ಆರ್ಬಿಟ್ (ಇಪಿಒ) ನಲ್ಲಿ ಜೋಡಿಸುತ್ತದೆ.
ಇಸ್ರೋದ ಹಿರಿಯ ವಿಜ್ಞಾನಿಗಳ ಪ್ರಕಾರ, ಚಂದ್ರಯಾನ – 3 ಯೋಜನೆಯು ಚಂದ್ರನನ್ನು ಸ್ಪರ್ಶಿಸಲು ಮೂರು ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದೆ. ಈ ಮೂರೂ ಪ್ರದೇಶಗಳು ಚಂದ್ರನ ದಕ್ಷಿಣ ಧ್ರುವದಲ್ಲಿದ್ದು, ಭೂಮಿಯೆಡೆಗೆ ಮುಖ ಮಾಡಿವೆ. ಈ ಆಯ್ಕೆ ಪ್ರಕ್ರಿಯೆಯು ವಿವಿಧ ವಿಚಾರಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಇಳಿಜಾರುಗಳು, ಸೂರ್ಯನ ಬೆಳಕು, ಹಾಗೂ ರೇಡಿಯೋ ಮೂಲಕ ಭೂಮಿಗೆ ಸಂವಹನ ನಡೆಸುವ ಸಾಮರ್ಥ್ಯ, ಕುಳಿಗಳು ಮತ್ತು ಬಂಡೆಗಳ ಆಳ ಎತ್ತರಗಳು ಸೇರಿವೆ.
ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಉದ್ದೇಶಿಸಿರುವ ಸ್ಥಳ ಮ್ಯಾನ್ಸಿಯಸ್ ಯು ಮತ್ತು ಬೊಗುಸ್ಲಾವ್ಸ್ಕಿ ಎಂ ಕುಳಿಗಳ ಮಧ್ಯದಲ್ಲಿದೆ. ಅದರೊಡನೆ, ಲ್ಯಾಂಡರ್ ತೇಲಾಡುವ 100 ಮೀಟರ್ ಎತ್ತರದಿಂದ, ಈ ಮೇಲ್ಮೈಗೆ ಇಳಿಯಲು 4 ಕಿಲೋಮೀಟರ್ × 2.4 ಕಿಲೋಮೀಟರ್ ಪ್ರದೇಶದಲ್ಲಿ ಸೂಕ್ತ ಅವಕಾಶಗಳಿವೆ.
ಚಂದ್ರಯಾನ-1 ಮತ್ತು ಚಂದ್ರಯಾನ-2 ಇಸ್ರೋಗೆ ಏನು ನೀಡಿವೆ?
ಇಸ್ರೋದ ಚಂದ್ರಯಾನ – 1 ಗಮನಾರ್ಹ ಸಾಧನೆಯಾಗಿದೆ. ಅದು ಲೂನಾರ್ ರಿಮೋಟ್ ಸೆನ್ಸಿಂಗ್ ಆರ್ಬಿಟರ್ ಮೂಲಕ ಚಂದ್ರನಲ್ಲಿ ಆವಿಯ ರೂಪದಲ್ಲಿ ಸಣ್ಣ ಪ್ರಮಾಣದಲ್ಲಿ ನೀರಿನ ಲಭ್ಯತೆ ಇರುವುದನ್ನು ಮೊದಲ ಬಾರಿಗೆ ಕಂಡುಹಿಡಿದಿತ್ತು.