-ಕೆ.ಬಿ.ರಮೇಶ ನಾಯಕ
ಮೈಸೂರು: ದಕ್ಷಿಣ ಕರ್ನಾಟಕದ ಹೆಸರಾಂತ ರೆಪರ್ಟರಿ ಹಾಗೂ ಸದಾ ಒಂದಿಲ್ಲೊಂದು ವಿವಾದಗಳಿಂದ ಕೂಡಿರುವ ಕರ್ನಾಟಕ ರಂಗಾಯಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು ದುರಸ್ತಿಯಲ್ಲಿದ್ದು, ಕಳ್ಳತನ ಮೊದಲಾದ ಕೃತ್ಯಗಳು ನಡೆದರೂ ಪೊಲೀಸರಿಗೆ ಸುಳಿವು ಸಿಗದ ಸನ್ನಿವೇಶ ನಿರ್ಮಾಣವಾಗಿದೆ.
ಸರ್ಕಾರಿ ಕಚೇರಿ ಮತ್ತು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸರ್ಕಾರ ಸಿಸಿಟಿವಿ ಕಡ್ಡಾಯ ಮಾಡಿದ್ದರೂ ರಂಗಾಯಣಕ್ಕೆ ಅನ್ವಯವಾಗದಂತಾಗಿದೆ. ಇದರಿಂದಾಗಿ ಬೈಕ್, ಪ್ರಮುಖ ದಾಖಲೆಗಳನ್ನು ಕಳೆದುಕೊಂಡ ನಾಗರಿಕರು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಕಲಾಮಂದಿರದ ಪ್ರವೇಶ ದ್ವಾರ, ಮುಖ್ಯದ್ವಾರದಲ್ಲಿ ಸಿಸಿಟಿವಿ ಅಳವಡಿಸಿದ್ದರೂ ವಾಹನಗಳನ್ನು ನಿಲುಗಡೆ ಮಾಡುವ ಪಾರ್ಕಿಂಗ್ ಜಾಗದಲ್ಲಿ ಅಳವಡಿಸದ ಕಾರಣ ಅಭದ್ರತೆ ಕಾಡುತ್ತಿದೆ.
ಹೋರಾಟಗಾರರ ಮೇಲೆ ಕಣ್ಣಿಡಲು ಸಿಸಿಟಿವಿ ಅಳವಡಿಸಲಾಗಿತ್ತು: ರಂಗಾಯಣವು ಹಲವಾರು ವಿಚಾರಗಳಿಂದ ಸದಾ ಸದ್ದು ಮಾಡುತ್ತಲೇ ಇರುತ್ತದೆ. ಬಹು ರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಿಂತಕ ಚಕ್ರವರ್ತಿ ಸೂಲಿಬೆಲೆ, ನಟಿ ಮಾಳವಿಕಾ ಅವಿನಾಶ್ ಕರೆಯಬೇಕೆಂಬ ವಿಚಾರ ಹೊರಬರುತ್ತಿದ್ದಂತೆ ಪ್ರಗತಿಪರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ ರಂಗಾಯಣ ನಿರ್ದೇಶಕರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಹಲವು ದಿನಗಳವರೆಗೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರನ್ನು ನಿಯೋಜಿಸಿ ಪ್ರತಿಯೊಬ್ಬರ ಮೇಲೂ ಕಣ್ಣಿಡಲಾಗಿತ್ತು. ಮತ್ತೊಂದೆಡೆ ಕಲಾಮಂದಿರದಲ್ಲಿ ಮಹನೀಯರ ಜಯಂತಿ, ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದರಿಂದ ಪ್ರತಿನಿತ್ಯ ಜನರು ಬರುತ್ತಲೇ ಇರುತ್ತಾರೆ. ಇಂತಹ ಪ್ರಮುಖ ಕೇಂದ್ರವಾಗಿರುವ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ನಿಂತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮೂಲ ದಾಖಲೆಗಳನ್ನು ಕಳೆದುಕೊಂಡ ಕಲಾವಿದ: ರಂಗಾಯಣದಲ್ಲಿ ನಾಟಕ ತರಬೇತಿ ಪಡೆಯುತ್ತಿದ್ದ ಕಲಾವಿದರೊಬ್ಬರು ಆವರಣದಲ್ಲಿ ಬೈಕ್ ನಿಲ್ಲಿಸಿದಾಗ ಮೂಲ ದಾಖಲೆಗಳು ಇದ್ದ ಬ್ಯಾಗ್ ಕಳ್ಳತನವಾಗಿದೆ. ನಿರ್ದೇಶಕರನ್ನು ನೋಡಿ ಬರುವ ಏಳೆಂಟು ನಿಮಿಷಗಳಲ್ಲಿ ಬ್ಯಾಗ್ ಕಳ್ಳತನವಾಗಿದ್ದು, ಅದರಲ್ಲಿ ಪಿಯುಸಿ, ಪದವಿ ಸೇರಿದಂತೆ ಮೂಲ ಅಂಕಪಟ್ಟಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿ ವಿಚಾರಣೆ ನಡೆಸಲು ಪೊಲೀಸರನ್ನು ಕರೆತಂದ ಮೇಲೆ ಸಿಸಿಟಿವಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಸತ್ಯ ಬಯಲಾಗಿದೆ. ಇವುಗಳನ್ನು ದುರಸ್ತಿಪಡಿಸಲು ರಂಗಾಯಣ ನಿರ್ದೇಶಕರು ತಾತ್ಸಾರ ಮನೋಭಾವ ತೋರಿದ್ದಾರೆ. ಇದು ನಮ್ಮ ಕಾಲದಲ್ಲಿ ಅಳವಡಿಸಿದ್ದಲ್ಲ. ಹಿಂದಿನ ಅವಧಿಯ ನಿರ್ದೇಶಕರ ಕಾಲದಲ್ಲಿ ಖರೀದಿಸಿದ್ದ ಕ್ಯಾಮೆರಾಗಳು ಆಗಿವೆ ಎನ್ನುವ ಹಾರಿಕೆ ಉತ್ತರ ನೀಡಿ ಕಳುಹಿಸಿದ್ದಾರೆ.
ಪಾರ್ಕಿಂಗ್ ಜಾಗದಲ್ಲಿ ಇಲ್ಲ ಸುರಕ್ಷತೆ: ದಾಖಲೆಗಳನ್ನು ಕಳೆದುಕೊಂಡ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ತೆರಳಿ ವಿಚಾರಿಸಿದಾಗ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆಯೇ ಹೊರತು ವಾಹನಗಳನ್ನು ನಿಲುಗಡೆ ಮಾಡುವ ಜಾಗದಲ್ಲಿ ಅಳವಡಿದ ಬಗ್ಗೆ ಆಗಾಗ ದೂರುಗಳು ಕೇಳಿಬರುತ್ತಿವೆ.
ಕಲಾಮಂದಿರದ ಆವರಣದಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ವಾಹನಗಳು ನಿಲುಗಡೆ ಮಾಡಲು ಅವಕಾಶವಿದ್ದು, ಪ್ರಮುಖ ಕಾರ್ಯಕ್ರಮಗಳು ನಡೆದಾಗ ಆವರಣದ ಹೊರಗೆ ನಿಲ್ಲಿಸಿ ಬರುತ್ತಾರೆ. ಹೀಗಿದ್ದರೂ, ಸಿಸಿಟಿವಿ ಅಳವಡಿಸದೆ ನಿರ್ಲಕ್ಷ್ಯವಹಿಸಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಬೈಕ್ ಕಳ್ಳತನವಾಗಿದ್ದರಿಂದ ಸವಾರರೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದಾಗಲೂ ಇದೇ ಸಮಸ್ಯೆಯಾಗಿತ್ತು. ಈಗ ಮೂಲ ದಾಖಲೆಗಳನ್ನು ಕಳೆದುಕೊಂಡ ಪದವೀಧರ ದೂರು ನೀಡಿದಾಗಲೂ ಅದೇ ಸಮಸ್ಯೆ ಉಂಟಾಗಿದೆಯೇ ಹೊರತು ಪರಿಹಾರದ ಮಾರ್ಗ ದೊರೆಯದೆ ಇರುವುದು ಕಂಡುಬಂದಿದೆ.
ಸಂಜೆ ಹೊರತು ಅಪರಿಚಿತರ ಹರಟೆ: ಸಂಜೆ ಹೊತ್ತು ಕಲಾಮಂದಿರದ ಆವರಣ, ರಂಗಾಯಣದ ಪ್ರವೇಶ ದ್ವಾರದ ಬಳಿ ಅಪರಿಚಿತರು ಕುಳಿತುಕೊಳ್ಳುವುದು, ಧೂಮಪಾನ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸದಿರುವುದು ಕಾರಣವಾಗಿದೆ ಎಂದು ಹೆಸರೇಳಲು ಬಯಸದ ಕಲಾವಿದರೊಬ್ಬರು ದೂರಿದರು. ಪಾರ್ಕಿಂಗ್, ಗೇಟ್ಗಳಲ್ಲಿ ಹೊರಗೆ ಮತ್ತು ಒಳಗೆ ಬರುವ ವ್ಯಕ್ತಿಗಳು, ವಾಹನಗಳನ್ನು ಸೆರೆಹಿಡಿಯುವಂತೆ ಮಾಡಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅದನ್ನು ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕಿದೆ ಎಂಬುದು ಕಲಾವಿದರ ಒತ್ತಾಯವಾಗಿದೆ.
ರಂಗಾಯಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ಹೋಗಿದ್ದು, ಅದನ್ನು ದುರಸ್ತಿಪಡಿಸಲು ಕ್ರಮಕೈಗೊಳ್ಳಲಾಗುವುದು. ಹಿಂದಿನ ನಿರ್ದೇಶಕರ ಅವಧಿಯಲ್ಲಿ ಖರೀದಿಸಿ ಅಳವಡಿಸಿದ್ದ ಕ್ಯಾಮೆರಾಗನ್ನು ನಿರ್ವಹಣೆ ಮಾಡದ ಕಾರಣ ಈ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ದುರಸ್ತಿ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. -ಅಡ್ಡಂಡ ಸಿ.ಕಾರ್ಯಪ್ಪ, ನಿರ್ದೇಶಕರು, ರಂಗಾಯಣ.
ಕಲಾಮಂದಿರದ ಪ್ರವೇಶ ದ್ವಾರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಎಲ್ಲವೂ ಚಾಲ್ತಿಯಲ್ಲಿವೆ. ಪಾರ್ಕಿಂಗ್ ಜಾಗದಲ್ಲಿ ಅಳವಡಿಸಿಲ್ಲ. ಕಳ್ಳತನದ ಬಗ್ಗೆ ನಮಗೇನೂ ದೂರು ಬಂದಿಲ್ಲ. ನಮ್ಮನ್ನು ನೇರವಾಗಿ ಭೇಟಿ ಮಾಡಿದರೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ.
-ಡಾ.ಎಂ.ಡಿ.ಸುದರ್ಶನ್, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.