ಬೆಂಗಳೂರು : ಕಾವೇರಿ ನದಿನೀರು ಹಂಚಿಕೆ ಸಂಬಂಧ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಮಾಜಿ ಸಚಿವ ಆರ್.ಅಶೋಕ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ರಕ್ಷಣೆ ಮಾಡುವ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಒಂದು ವೇಳೆ ಗದ್ದಲ, ಗಲಾಟೆ ಉಂಟಾದರೆ ಇದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿದರು.
ಪ್ರಾರಂಭದ ದಿನದಿಂದಲೂ ಸರ್ಕಾರ ಈ ವಿಷಯದಲ್ಲಿ ಸೋತಿದೆ. ಕೇವಲ ಬೂಟಾಟಿಕೆಗೆ ಮಾತ್ರ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿತೆ ಹೊರತು ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ವಿಫಲವಾಗಿದೆ. ಈಗ ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡರು ಎಂಬಂತೆ ಕಣ್ಣೊರೆಸುವ ನಾಟಕ ಮಾಡುತ್ತಿದೆ ಎಂದು ಕಿಡಿಕಾರಿದರು.
ಇಂದಿನ ವಾಸ್ತವ ಸ್ಥಿತಿಯನ್ನು ನೋಡಿರೆ ಬೆಂಗಳೂರಿಗರಿಗೆ ಕುಡಿಯಲು ನೀರು ಸಿಗುವುದಿಲ್ಲ. ಸರ್ಕಾರಕ್ಕೆ ಇದರ ಪರಿಜ್ಞಾನ ಕೂಡ ಇಲ್ಲ. ಅಣೆಕಟ್ಟೆಗಳಲ್ಲಿ ಸಂಗ್ರಹವಾಗಿರುವ ನೀರನ್ನು ಹರಿಸಿದರೆ ರಾಜ್ಯದ ಪರಿಸ್ಥಿತಿ ಏನು ಎಂದು ಅಶೋಕ್ ಪ್ರಶ್ನಿಸಿದರು.
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಯಾವುದೇ ಸಚಿವರು ತುಟಿಕ್ಪುಟಿಕ್ ಎನ್ನುತ್ತಿಲ್ಲ. ಅವರ ಜೊತೆ ಹೊಂದಾಣಿಕೆ ಮಾಡಿಕೊಂಡು ಇಲ್ಲಿ ಗೊತ್ತಿಲ್ಲದವರಂತೆ ನಾಟಕ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಾಧಿಕಾರ ಆದೇಶ ನೀಡುವ ಮೊದಲೇ ವಾಸ್ತವ ಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಬೇಕಿತ್ತು. ಇವರು ಅವರ ಮುಂದೆಯೇ ಹೋಗಲಿಲ್ಲ. ಎಲ್ಲ ಮಂತ್ರಿಗಳು ಇಲ್ಲಿ ಗೂಟ ಹೊಡೆದುಕೊಂಡು ಕೂತಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡಬಹುದೆಂಬ ಕಾರಣಕ್ಕಾಗಿ ಎಲ್ಲ ಮುಗಿದ ಮೇಲೆ ಪ್ರಯತ್ನ ಮಾಡಿದ್ದಾರೆ. ಇದು ರೈತರಿಗೆ ಕಾಂಗ್ರೆಸ್ ಸರ್ಕಾರ ಮಾಡಿರುವ ಅನ್ಯಾಯ ಎಂದು ಹೇಳಿದರು.
ನ್ಯಾಯಾಲಯಕ್ಕೆ ಅಣೆಕಟ್ಟಿನ ಸ್ಥಿತಿಗತಿ ಕುರಿತಂತೆ ವರದಿ ಸಲ್ಲಿಸಬೇಕಿತ್ತು. ವಕೀಲರು, ವಿರೋಧ ಪಕ್ಷಗಳು, ನೀರಾವರಿ ತಜ್ಞರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಅವರಿಗೆ ತಮಿಳುನಾಡಿನ ಡಿಎಂಕೆ ಜೊತೆ ಮೈತ್ರಿ ಉಳಿಸಿಕೊಳ್ಳಬೇಕಾಗಿತ್ತು. ಅದಕ್ಕಾಗಿ ರಾಜ್ಯದ ಹಿತವನ್ನು ಬಲಿ ಕೊಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಫಲವನ್ನು ಉಣ್ಣುತ್ತಾರೆ ಎಂದು ಎಚ್ಚರಿಕೆ ಕೊಟ್ಟರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದೇ ದುರದೃಷ್ಟ. ಸ್ಟಾಲಿನ್ ವಿರುದ್ಧ ಮಾತನಾಡಲು ಇವರಿಗೆ ಧೈರ್ಯವಿಲ್ಲ. ಎಲ್ಲಿ ನಮ್ಮ ಅಣ್ಣಾ ಮುನಿಸಿಕೊಳ್ಳಬಹುದೋ ಎಂಬ ಕಾರಣಕ್ಕಾಗಿ ಇನ್ನೊಬ್ಬ ಅಣ್ಣ ಮಾತನಾಡುತ್ತಿಲ್ಲ ಎಂದು ಅವರು ಪರೋಕ್ಷವಾಗಿ ಡಿಸಿಎಂ ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದರು.