ರಾಜ್ಯ

371 ವೃಕ್ಷಗಳ ಕಂಟೋನ್ಮೆಂಟ್ ಪ್ರದೇಶ, ಜೀವ ವೈವಿಧ್ಯತೆ ಪಾರಂಪರಿಕ ತಾಣ : ಈಶ್ವರ ಖಂಡ್ರೆ

ಬೆಂಗಳೂರು : ವಿವಿಧ 50 ಪ್ರಭೇದದ 371 ಮರಗಳಿಂದ ಕೂಡಿದ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯ 8.61 ಎಕರೆ ಪ್ರದೇಶವನ್ನು ಜೀವವೈವಿಧ್ಯತೆಯ ಪಾರಂಪರಿಕ ತಾಣ ಎಂದು ಘೋಷಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜೀವ ವೈವಿಧ್ಯ ಮಂಡಳಿಯ ಸಭೆಯಲ್ಲಿ ಇತಿಹಾಸ ಪ್ರಸಿದ್ಧ ಮತ್ತು ಸಸ್ಯ ಶ್ರೀಮಂತಿಕೆಯಿಂದ ಕೂಡಿದ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯ ಸರ್ವೆ ನಂ. 1028 ಮತ್ತು 1047 ರಲ್ಲಿರುವ 8.61 ಎಕರೆ ಪ್ರದೇಶವನ್ನು ಜೈವಿಕ ವೈವಿಧ್ಯ ಕಾಯ್ದೆ, 2002ರ ಸೆಕ್ಷನ್ 37ರ ಅಡಿಯಲ್ಲಿ ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸುವ ನಿರ್ಣಯ ಕೈಗೊಂಡಿದ್ದಾಗಿ ತಿಳಿಸಿದರು.

ರಾಜಧಾನಿಯ ಹೃದಯ ಭಾಗದಲ್ಲಿರುವ 34,843 ಚದರಡಿಯ ಪ್ರದೇಶ ಸಸ್ಯ ಸಂಕುಲ, ಪಕ್ಷಿ ಸಂಕುಲ ಮತ್ತು ಕೀಟ ಸಂಕುಲದ ತಾಣವಷ್ಟೇ ಅಲ್ಲದೆ ಬೆಂಗಳೂರು ನಗರಕ್ಕೆ ಅತ್ಯಗತ್ಯವಾದ ಶ್ವಾಸತಾಣವಾಗಿದೆ ಎಂದೂ ಅವರು ಹೇಳಿದರು.

50-60 ವರ್ಷಗಳಿಂದ ಬೆಳೆದ ಬೃಹತ್ ಮರಗಳಿರುವ ಈ ಸುಂದರ ಪ್ರದೇಶವನ್ನು ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರ ಖಾಸಗಿ ಸಂಸ್ಥೆಯೊಂದಕ್ಕೆ 60 ವರ್ಷಗಳ ದೀರ್ಘಾವಧಿಗೆ ಗುತ್ತಿಗೆ ನೀಡಿತ್ತು. ಗುತ್ತಿಗೆ ಪಡೆದ ಸಂಸ್ಥೆ ಇಲ್ಲಿರುವ 368 ಮರಗಳನ್ನು ಕಡಿಯಲು ಅನುಮತಿ ಕೋರಿತ್ತು. ಮರಗಳ ಹನನಕ್ಕೆ ಸ್ಥಳೀಯರು ಸೇರಿದಂತೆ ಪರಿಸರ ಪ್ರೇಮಿಗಳು, ವೃಕ್ಷ ಪ್ರೇಮಿಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿಸಿದರು.

ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಕಳೆದ ಜೂನ್ 20ರಂದು ಸ್ಥಳಕ್ಕೆ ಖುದ್ದು ಭೇಟಿ ನೀಡಿದ್ದ ತಮಗೆ, ಈ ಪ್ರದೇಶ ಐತಿಹಾಸಿಕವಾಗಿಯೂ ಮಹತ್ವ ಪಡೆದಿದೆ. 1920ರಲ್ಲಿ ಮಹಾತ್ಮಾ ಗಾಂಧೀ ಅವರು ಇಲ್ಲಿ ಸ್ವಾತಂತ್ರ್ಯ ಚಳವಳಿಗಾರರೊಂದಿಗೆ ಸಂವಾದ ನಡೆಸಿದ್ದರು ಎಂದು ತಿಳಿಸಲಾಯಿತು. ವೃಕ್ಷ ಸಮೃದ್ಧವಾದ ಈ ಪ್ರದೇಶ ಇಂಗಾಲದ ಡೈ ಆಕ್ಸೈಡ್ ನಿಯಂತ್ರಿಸಿ, ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಇದರ ಸಂರಕ್ಷಣೆಗೆ ಜೀವ ವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸುವ ಸಂಬಂಧ ಸಲಹೆ, ಸೂಚನೆ ಮತ್ತು ಆಕ್ಷೇಪಣೆ ಸಲ್ಲಿಸುವಂತೆ ಸಾರ್ವಜನಿಕರನ್ನು ಕೋರಲಾಗಿತ್ತು ಎಂದರು.

ಸುಮಾರು 15 ಸಾವಿರ ಜನರಿಂದ ವೃಕ್ಷ ರಕ್ಷಣೆಗೆ ಮನವಿ
ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿರುವ ಈ ಮರ ಕಡಿದು ವಾಣಿಜ್ಯ ಚಟುವಟಿಕೆ ನಡೆಸದಂತೆ ನಡೆದ ಆನ್ ಲೈನ್ ಸಹಿ ಸಂಗ್ರಹ ಅಭಿಯಾನದಲ್ಲಿ 3081 ಜನರು ಬೆಂಬಲ ನೀಡಿದ್ದರು, 368 ವೃಕ್ಷಗಳ ಹನನ ಮಾಡದಂತೆ ನಡೆದ ಮತ್ತೊಂದು ಡಿಜಿಟಲ್ ಅಭಿಯಾನದಲ್ಲಿ 10670 ಜನರು ಈ ಪ್ರದೇಶದ ಸಂರಕ್ಷಣೆ ಮಾಡುವಂತೆ ಮತ್ತು ಮರ ಕಡಿಯದಂತೆ ಸೂಚಿಸಿದ್ದರು.

ಇದರ ಜೊತೆಗೆ 972 ಪರಿಸರ ಪ್ರೇಮಿಗಳು, ಸಾರ್ವಜನಿಕರು ಇ-ಮೇಲ್ ಮೂಲಕ 368 ಮರಗಳ ಸಂರಕ್ಷಣೆಗೆ ಮತ್ತು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸುವ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು. ಇದಲ್ಲದೆ ನೂರಾರು ಜನರ ಸಹಿ ಇರುವ ಹಲವು ಮನವಿಗಳೂ ಬಂದಿದ್ದವು. ಒಟ್ಟಾರೆ 15 ಸಾವಿರಕ್ಕೂ ಹೆಚ್ಚು ಜನರು ಮರ ಕಡಿಯದಂತೆ ಮತ್ತು ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಸಂರಕ್ಷಿಸುವಂತೆ ಮತ್ತು 368 ಮರ ಕಡಿಯದಂತೆ ಮನವಿ ಮಾಡಿದ್ದರು. ಇಲ್ಲಿ ಸಮೀಕ್ಷೆ ನಡೆಸಿದಾಗ 371 ಮರಗಳಿರುವುದು ದೃಢಪಟ್ಟಿತು ಎಂದರು.

ಕಂಟೋನ್ಮೆಂಟ್ ಕಾಲೋನಿಯ ಈ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣವಾಗಿ ಘೋಷಿಸುವ ಸರ್ಕಾರದ ನಿರ್ಧಾರದ ವಿರುದ್ಧ ಕೇವಲ 2 ಮನವಿಗಳು ಮಾತ್ರ ಬಂದಿದ್ದವು ಎಂದೂ ಈಶ್ವರ ಖಂಡ್ರೆ ತಿಳಿಸಿದರು.

ಸಾರ್ವಜನಿಕರ ಕಳಕಳಿ, ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಈ ತಾಣದ ಸೌಂದರ್ಯ, ಐತಿಹಾಸಿಕ ಮಹತ್ವ, ವೃಕ್ಷ ಸಮೃದ್ಧತೆ ಮತ್ತು ಜೀವ ವೈವಿಧ್ಯ ಸಂರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ವಲಸೆ ಹಕ್ಕಿಗಳೂ ಸೇರಿದಂತೆ ನೂರಾರು ಪಕ್ಷಿಗಳ ಆವಾಸಸ್ಥಾನ ಮತ್ತು ಸಂತಾನೋತ್ಪತ್ತಿಯ ತಾಣವಾದ ಈ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಲು ಇಂದು ನಡೆದ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾಗಿ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರೂ ಆದ ಸಚಿವ ಈಶ್ವರ ಖಂಡ್ರೆ ವಿವರಿಸಿದರು.

ಬೆಂಗಳೂರು ನಗರದ ವಾಯು ಗುಣಮಟ್ಟದಲ್ಲಿ ಈಗಾಗಲೇ ಕುಸಿತ ಕಂಡು ಬಂದಿದೆ. ಹಸಿರು ಹೊದಿಕೆ ಕ್ಷೀಣಿಸಿದೆ. ಇಡೀ ವಿಶ್ವವೇ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಎದುರಿಸುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಇಲ್ಲಿರುವ 371 ಮರಗಳನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದೆ. ಹೀಗಾಗಿ ಈ ನಿರ್ಧಾರ ಐತಿಹಾಸಿಕವಾಗಿದೆ ಎಂದು ತಿಳಿಸಿದರು.

ಆಂದೋಲನ ಡೆಸ್ಕ್

Recent Posts

ಮಲ್ಲಯ್ಯನಪುರ ಗುಡ್ಡದಲ್ಲಿ ಥೋರಿಯಂ ಖನಿಜ ನಿಕ್ಷೇಪ ಪತ್ತೆ

ಗುಂಡ್ಲುಪೇಟೆ: ಪಟ್ಟಣ ಮತ್ತು ಮಲ್ಲಯ್ಯನಪುರ ನಡುವಿನ ಅನ್ಗಲ್ ಗುಡ್ಡದ ತಪ್ಪಲಿನ ಪ್ರದೇಶದಲ್ಲಿ ಅಪರೂಪದ ಥೋರಿಯಂ ನಿಕ್ಷೇಪ ಪತ್ತೆಯಾಗಿದೆ. ಹಿಂದಿನ ವರ್ಷ…

52 mins ago

ಓದುಗರ ಪತ್ರ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಸ್ಥಳಾಂತರಿಸಿ

ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದ ಮೈಸೂರು -ಮಾನಂದವಾಡಿ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಖಾಸಗಿ ಕಟ್ಟಡದ ಎರಡನೇ…

56 mins ago

ಓದುಗರ ಪತ್ರ: ಕಾಣಿಕೆ ದುರುಪಯೋಗ ತಡೆಗೆ ಸರ್ಕಾರ ಮುಂದಾಗಲಿ

ಅಯೋಧ್ಯೆಯ ರಾಮ ಮಂದಿರವೂ ಸೇರಿದಂತೆ ದೇಶದ ವಿವಿಧ ದೇವಾಲಯಗಳಲ್ಲಿ ಕಾಣಿಕೆ ಹಣ, ದೇವರಿಗೆ ಭಕ್ತರು ಕಾಣಿಕೆ ರೂಪದಲ್ಲಿ ಸಲ್ಲಿಸುವ ಚಿನ್ನಾಭರಣಗಳು…

58 mins ago

ಓದುಗರ ಪತ್ರ: ಮರದ ಕೆಳಗಿರುವ ವಿದ್ಯುತ್ ಕೇಬಲ್ ತೆರವುಗೊಳಿಸಿ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದವರು ಮೈಸೂರು ನಗರದ ವಿವಿಧೆಡೆ ಭೂಗತ ಕೇಬಲ್‌ಗಳನ್ನು ಅಳವಡಿಸುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸೆಸ್ಕ್ ಯುಜಿ ಕೇಬಲ್…

59 mins ago

ಝೆನ್‌ ಕತೆಗಳು: ಸೀಜೋಳ ನಿಜವಾದ ಆತ್ಮ ಯಾವುದು?

ಸಂಗ್ರಹ ಮತ್ತು ಅನುವಾದ ಚೇತನಾ ತೀರ್ಥಹಳ್ಳಿ  ಚೋಕನ್ ಎಂಬವನಿಗೆ ಸೀಜೋ ಎಂಬ ಸುಂದರ ಮಗಳಿದ್ದಳು. ಚೋಕನ್ ತನ್ನ ದೂರದ ಸಂಬಂಧಿಯಾದ…

1 hour ago

ಎಸ್‌ಐಆರ್: ಶೇ.64.09ರಷ್ಟು ನಮೂನೆಗಳ ವಿತರಣೆ

ನವೀನ್ ಡಿಸೋಜ ಕೊಡಗಿನಲ್ಲಿ ಒಟ್ಟು ೪,೬೮,೬೫೭ ಮತದಾರರ ಪೈಕಿ ೩,೦೦,೩೬೯ ಮಂದಿಗೆ ನಮೂನೆ ವಿತರಣೆ; ೯,೧೨೫ ನಮೂನೆಗಳ ಡಿಜಿಟಲೀಕರಣ ಮಡಿಕೇರಿ:…

1 hour ago