ಬೆಂಗಳೂರು: ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟು ಇನ್ನಷ್ಟು ಜಟಿಲವಾಗಿದ್ದು, ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ರಂಗ ಪ್ರವೇಶ ಮಾಡಿದ್ದಾರೆ.
ಈ ನಡುವೆ ಭಾನುವಾರ ಸಂಜೆ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಕರೆದಿದ್ದ ಹಾಸನ ಜಿಲ್ಲಾ ಮುಖಂಡರ ಸಭೆಯನ್ನು ಏಕಾಏಕಿ ಮುಂದೂಡಿರುವುದು ದೊಡ್ಡ ಗೌಡರ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ದೃಡೀಕರಿಸಿದೆ.
ಕುಮಾರಸ್ವಾಮಿ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಂಚರತ್ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಹಾಸನ ಅಭ್ಯರ್ಥಿ ಆಯ್ಕೆ ಮತ್ತಷ್ಟು
ವರಿಷ್ಟರಿಗೆ ತಲೆನೋವಾಗಿ ಪರಿಣಮಿಸಿದೆ.
ಹಾಸನ ಕ್ಷೇತ್ರದ ಟಿಕೆಟ್ ವಿಷಯವಾಗಿ ಹೆಚ್ ಡಿ ರೇವಣ್ಣ, ಭವಾನಿ ರೇವಣ್ಣ, ಹಾಗೂ ಅವರ ಪುತ್ರರು ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಟಿಕೆಟ್ ಘೋಷಣೆಗೂ ಮುನ್ನ ಜಿಲ್ಲೆಯ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿ, ಮುಕ್ತವಾಗಿ ಅಭಿಪ್ರಾಯ ಸಂಗ್ರಹಿಸಿ ನಂತರ ಹಾಸನಕ್ಕೆ ಅಭ್ಯರ್ಥಿ ಘೋಷಣೆ ಮಾಡಲು ತೀರ್ಮಾನಿಸಿದ್ದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಸೂಕ್ತವಾಗಿ ಅರಿತ ಗೌಡರು, ಹಾಸನ ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಭೆಯನ್ನು ರದ್ದು ಮಾಡಲು ಹುಕುಂ ಹೊರಡಿಸಿದರು.
ಕುಮಾರಸ್ವಾಮಿ ಅವರು ತಮ್ಮದೇ ಆದ ಸಮೀಕ್ಷೆ ವರದಿಯನ್ನು ಹೊಂದಿದ್ದು, ಈ ವರದಿಯ ಪ್ರಕಾರ, ಒಕ್ಕಲಿಗ ಸಮುದಾಯದ ಉಪ ಪಂಗಡವಾಗಿರುವ ದಾಸ ಗೌಡರಲ್ಲಿರುವ ಯುವಕರು, ದೇವೇಗೌಡರ ಕುಟುಂಬದವರು ಈ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ದಾಸಗೌಡ ಪಂಗಡದವರೇ ಆಗಿರುವ ಹೆಚ್.ಪಿ ಸ್ವರೂಪ್ ಅವರಿಗೆ ಯುವಕರ ಬೆಂಬಲ ಹೆಚ್ಚಿದ್ದು, ಜೆಡಿಎಸ್ ನಿಂದ ಸ್ವರೂಪ್ ಗೌಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಜೆಡಿಎಸ್ ಟಿಕೆಟ್ ಸಿಗದೇ ಇದ್ದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದರೂ ಸಹ ದಾಸಗೌಡ ಪಂಡಗಡದ ಯುವಕರು ಸ್ವರೂಪ್ ಅವರನ್ನೇ ಬೆಂಬಲಿಸಲು ಮುಂದಾಗಿದ್ದಾರೆ. ಆದರೆ ಕುಮಾರಸ್ವಾಮಿ ಡ್ಯಾಮೇಜ್ ಕಂಟ್ರೋಲ್ ಗೆ ತಂತ್ರ ರೂಪಿಸುತ್ತಿದ್ದಾರೆ. ಈ ಪ್ರಕಾರ ದಾಸಗೌಡ ಪಂಗಡದ ಹಿರಿಯರನ್ನು ದೇವೇಗೌಡರ ನಿವಾಸಕ್ಕೆ ಕರೆಸಿ, ಅಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಇತ್ತೀಚೆಗೆ ಹೆಚ್ ಡಿ ರೇವಣ್ಣ ಭವಾನಿ ರೇವಣ್ಣ ಜಂಟಿಯಾಗಿ ಹಾಸನ ಕ್ಷೇತ್ರದಲ್ಲಿ ಜಂಟಿಯಾಗಿ ಪ್ರಚಾರ ಕೈಗೊಳ್ಳುತ್ತಿದ್ದು, ಇದೂ ಸಹ ಒತ್ತಡಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಸಭೆಯಲ್ಲಿ ಅಥವಾ ಹಾಸನದಲ್ಲೇ ನಡೆಯಲಿರುವ ಸಮಾವೇಶದಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿದ್ದಾರೆ. ಮೂಲಗಳ ಪ್ರಕಾರ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಹಾಸನ ಕ್ಷೇತ್ರದಿಂದ ಗೆದ್ದರೆ ದಾಸಗೌಡ ಬಣವನ್ನು ಸಮಾಧಾನಪಡಿಸಲು ಸ್ವರೂಪ್ ಗೆ ಅಥವಾ ಅದೇ ಉಪ ಪಂಗಡದ ಮತ್ತೋರ್ವ ನಾಯಕನಿಗೆ ಎಂಎಲ್ ಸಿ ಟಿಕೆಟ್ ಭರವಸೆ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹೆಚ್ ಡಿ ರೇವಣ್ಣ ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿ ಟಿಕೆಟ್ ಘೋಷಣೆ ಮಾಡಿದಲ್ಲಿ ಪ್ರಚಾರಕ್ಕೇ ಬರುವುದಿಲ್ಲ ಎಂಬ ಎಚ್ಚರಿಕೆಯನ್ನು ಕುಮಾರಸ್ವಾಮಿ ನೀಡಿದ್ದಾರೆ.
ದೇವೇಗೌಡರ ಪ್ರವೇಶದಿಂದ ಸ್ವರೂಪ್ ಬೆಂಬಲಿಗರಲ್ಲಿ ಆತಂಕ ಶುರುವಾಗಿದ್ದರೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೆಂಡಾಮಂಡಲರಾಗುವಂತೆ ಮಾಡಿದೆ. ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರು ತೀವ್ರ ಗೊಂದಲಕ್ಕೆ ಒಳಗಾಗಿದ್ದಾರೆ.
ಟಿಕೆಟ್ ಪಡೆಯಲೇಬೇಕು ಎಂದು ಹಠಕ್ಕೆ ಬಿದ್ದಿರುವ ಹೆಚ್.ಡಿ.ರೇವಣ್ಣ ಕುಟುಂಬ ಹೆಚ್ಡಿಕೆ ಹಾಗೂ ಹೆಚ್ಡಿಡಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಭವಾನಿ ರೇವಣ್ಣಗೆ ಟಿಕೆಟ್ ಇಲ್ಲಾ ಎಂದು ಪದೇ ಪದೇ ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿಕೆ ಕೊಟ್ಟಿರುವ ನಡುವೆಯೂ ಭವಾನಿ ರೇವಣ್ಣ ಪತಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ಜೊತೆ ಕಳೆದ ಮೂರು ದಿನಗಳಿಂದ ಅಬ್ಬರದ ಪ್ರಚಾರ ನಡೆಸಿದ್ದರು. ಆದರೆ ಹೆಚ್ಡಿಕೆ ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾಗಿ ಭಾನುವಾರ ಬೆಂಗಳೂರಿನ ಜೆ.ಪಿ. ಭವನದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಆಯ್ದ ಮುಖಂಡರ ಸಭೆ ಮುಂದೂಡಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ಟಿಕೆಟ್ ಯಾರಿಗೆ ಎಂಬುದು ಕೂತುಹಲ ಮೂಡಿಸಿದೆ. ದೇವೇಗೌಡರು ಎಂಟ್ರಿ ಆಗಿರುವ ಕಾರಣ ರೇವಣ್ಣ ಅವರ ಒತ್ತಡಕ್ಕೆ ಮಣಿಯುತ್ತಾರಾ, ಇಲ್ಲವೇ ಕುಮಾರಸ್ವಾಮಿ ಪರ ನಿಂತು ಸ್ವರೂಪ್ ನಿಲ್ಲುತ್ತಾರಾ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಭವಾನಿ ರೇವಣ್ಣಗೆ ಟಿಕೆಟ್ ಕೊಟ್ಟರೆ ಸ್ವರೂಪ್ ಬೆಂಬಲಿಗರು ಪಕ್ಷಾಂತರ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಸ್ವರೂಪ್ಗೆ ಟಿಕೆಟ್ ಕೊಟ್ಟರೆ ಭವಾನಿ ಬೆಂಬಲಿಗರು ಸಿಟ್ಟಾಗಿ ತಟಸ್ಥವಾಗಲಿದ್ದಾರೆ. ಇದು ದಂಪತಿಗಳಲ್ಲಿ ತಳಮಳ ಸೃಷ್ಟಿಸಿದೆ.