ಕೊಳ್ಳೇಗಾಲ: ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಅಬಕಾರಿ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ ಪಟ್ಟಣದ ಅಬಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಜಾಗೇರಿ ಶಾಖೆ ವತಿಯಿಂದ ಪೊರಕೆ ಚಳವಳಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳಲ್ಲಿ ಅಬಕಾರಿ ಇಲಾಖೆ ನಿರಂತರವಾಗಿ ಚಿಲ್ಲರೆ ಅಂಗಡಿ ಹಾಗೂ ಕೆಲವು ಮನೆಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಮಧ್ಯವನ್ನು ನಿರಂತರವಾಗಿ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ತಡೆಗಟ್ಟುವಲ್ಲಿ ನಿರ್ಲಕ್ಷ್ಯತನ ತೋರಿದ್ದಾರೆ. ಇದರಿಂದ ಅನೇಕ ಬಡಕುಟುಂಬಗಳಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿವೆ. ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕುಡಿತ ಚಟಕ್ಕೆ ಬಲಿಯಾಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ಸಂಬಂಧ ಪಟ್ಟ ಇಲಾಖೆಗೆ ಮನವರಿಕೆ ಮಾಡಲು ಇಂದು ಸಾಂಕೇತಿಕವಾಗಿ ಪೊರಕೆ ಚಳವಳಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಸಹಕಾರದಲ್ಲಿ ಅಬಕಾರಿ ಕಚೇರಿಗೆ ಬೀಗ ಜಡಿಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಮಧುವನಹಳ್ಳಿ ಬಸವರಾಜು, ಗುರುಮಲ್ಲಯ್ಯ, ಭೀಮನಗರ ಮುಖಂಡ ಕೆ.ಕೆ.ಮೂರ್ತಿ, ವಕೀಲ ಬಸವರಾಜು, ಬಿಎಸ್ಪಿ ರಾಜಶೇಖರ್ ಮೂರ್ತಿ,ಭಾಸ್ಕರ್, ರೈತ ಮಹಿಳೆಯರು ಕ್ಯಾತ್ರಿನಾ, ಮಾದಮ್ಮ, ಸವರಿಯಮ್ಮ, ಪೊನ್ನಿ, ಜಯರಾಕಿಣಿ, ಸಗಯರಾಜ್, ಸವರಿಯಮ್ಮ, ರೀಟಾ ಮೇರಿ, ಅಂತೊಣಿಯಮ್ಮ, ಪೆರಿಯಾನಾಯಗಂ, ನಾಗೇಶ್ ನಾಯ್ಕ, ಸಿದ್ದರಾಜು ನಾಯಕ, ಜೇಮ್ಸ್, ಕೃಷ್ಣ ನಾಯಕ ಮುಂತಾದವರು ಹಾಜರಿದ್ದರು.