ಮುಂಬಯಿ: ಮಹಾಜನ್ ವರದಿಯ ಜಾರಿಗೆ ಒತ್ತಾಯಿಸಿ ಕರ್ನಾಟಕ ವಿಧಾನಸಭೆಯು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದ ಬೆನ್ನಿಗೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಕರ್ನಾಟಕದ “ಮರಾಠಿ ವಿರೋಧಿ” ನಿಲುವನ್ನು ಖಂಡಿಸಿದ್ದು ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿದ್ದಾರೆ. ಸದನ ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯಪ್ರವೇಶದ ಹೊರತಾಗಿಯೂ ಬಿಜೆಪಿ ಆಡಳಿತವಿರುವ ಎರಡೂ ರಾಜ್ಯಗಳ ನಡುವಿನ ಗಡಿ ತಕರಾರು ಉಲ್ಬಣಗೊಳ್ಳುತ್ತಲೇ ಸಾಗಿದೆ.
ಕರ್ನಾಟಕದಲ್ಲಿ ಮರಾಠಿ ಮಾತನಾಡುವ 865 ಗ್ರಾಮಗಳಿವೆ. ಈ ಗ್ರಾಮಗಳ ಇಂಚಿಂಚನ್ನೂ ಬಿಡದೆ ಅವುಗಳನ್ನು ಮಹಾರಾಷ್ಟ್ರಕ್ಕೆ ತರಬೇಕು. ಸುಪ್ರೀಂಕೋರ್ಟ್ ಏನು ಕೇಳುತ್ತದೆಯೋ ಅದನ್ನು ಮಹಾರಾಷ್ಟ್ರ ಸರ್ಕಾರ ಮಾಡುತ್ತದೆ ಎಂದು ನಿರ್ಣಯದಲ್ಲಿ ಹೇಳಿದೆ.
ಬೆಳಗಾವಿ, ಕಾರವಾರ, ಬೀದರ್, ನಿಪ್ಪಾಣಿ,ಭಾಲ್ಕಿಯ ಪ್ರತಿಯೊಂದು ಇಂಚನ್ನೂ ಮಹಾರಾಷ್ಟ್ರದ ಭಾಗವನ್ನಾಗಿ ಮಾಡಲಾಗುವುದು ಎಂದು ನಿರ್ಣಯದಲ್ಲಿ ಒತ್ತಿ ಹೇಳಲಾಗಿದೆ. ಕರ್ನಾಟಕದ ಭೂಮಿ, ನೀರು, ಭಾಷೆ ಮತ್ತು ಕನ್ನಡಿಗರ ಹಿತಾಸಕ್ತಿಗೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.ಕರ್ನಾಟಕದ ಜನತೆ ಮತ್ತು ಸದಸ್ಯರ (ವಿಧಾನಸಭಾ) ಭಾವನೆಗಳು ಕೂಡಾ ಇದೇ ಆಗಿದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ನಾವೆಲ್ಲರೂ ಒಗ್ಗಟ್ಟಿನಿಂದ ಸಾಂವಿಧಾನಿಕ ಮತ್ತು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧರಾಗಿದ್ದೇವೆ ಎಂದು ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ ಕರ್ನಾಟಕ ಹೇಳಿದೆ. ಮಹಾರಾಷ್ಟ್ರದವರು ಅನಗತ್ಯವಾಗಿ ಸೃಷ್ಟಿಸಿರುವ ಗಡಿ ವಿವಾದಗಳನ್ನು ಖಂಡಿಸಿ ಈ ಸದನವು ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ ಎಂಬ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸುತ್ತದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಬೊಮ್ಮಾಯಿ ಅವರು ಕಳೆದ ವಾರ ಮಂಡಿಸಿದ ನಿರ್ಣಯದಲ್ಲಿ ಹೇಳಲಾಗಿದೆ.