ಬೆಂಗಳೂರು : ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನವದೆಹಲಿಯಲ್ಲಿ ಹಮ್ಮಿಕೊಂಡಿರುವ ಅಜಾದಿ ಅಮೃತೋತ್ಸವ ಅಭಿಯಾನ
ದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಬೆಳಗ್ಗೆ ನವದೆಹಲಿಗೆ ತೆರಳಲಿದ್ದಾರೆ.
ಎರಡು ದಿನಗಳ ಕಾಲ ದೆಹಲಿಯಲ್ಲಿ ವಾಸ್ತವ್ಯ ಹೂಡಲಿರುವ ಬೊಮ್ಮಯಿ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಪಕ್ಷೆ ಕೆಲವು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಸಂಪುಟ ರಚನೆ/ ಪುರ್ನಚನೆ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಆದರೆ , ಅವರ ಅಧಿಕೃತ ಕಾರ್ಯಕ್ರಮಗಳ ಪಟ್ಟಿಯಲ್ಲಿ ಬಿಜೆಪಿಯ ಯಾವುದೇ ನಾಯಕರನ್ನು ಭೇಟಿಯಾಗುವ ಬಗ್ಗೆ ಮಾಹಿತಿ ಇಲ್ಲ.ಹೀಗಾಗಿ ಇದು ಕೂಡ ಹತ್ತರಲ್ಲಿ ಹನ್ನೊಂದನೇ ಪಯಣ ಎಂಬ ಮಾತುಗಳು ಕೇಳಿ ಬಂದಿದೆ.
ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಅಜಾದಿ ಅಮೃತೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಬಿಜೆಪಿ ಹೈಕಮಾಂಡ್ ಸೂಚನೆ ಕೊಟ್ಟಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ಕೂಡ ದೆಹಲಿಗೆ ತೆರಳುತ್ತಿದ್ದಾರೆ.
ರಾತ್ರಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಡಿದ್ದು ಬೆಳಗ್ಗೆಯಿಂದ ಸಂಜೆಯವರೆಗೂ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ ನಡೆಯಲಿದೆ. ಎಲ್ಲಾ ರಾಜ್ಯಗಳ ಸಿಎಂಗಳು ಭಾಗಿಯಾಗಲಿದ್ದು, ಬೊಮ್ಮಾಯಿ ಅವರು ಕೂಡ ಪಾಲ್ಗೊಳ್ಳಲಿದ್ದಾರೆ. ಭಾನುವಾರ ಸಂಜೆ ಬೊಮ್ಮಾಯಿ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
ಮೂಲಗಳ ಪ್ರಕಾರ ಈ ಬಾರಿಯ ನವದೆಹಲಿ ಭೇಟಿಯ ಸಂದರ್ಭದಲ್ಲಿ ಬೊಮ್ಮಯಿ ಅವರು, ಪಕ್ಷದ ಪ್ರಮುಖರನ್ನು ಭೇಟಿಯಾಗುವ ಸಂಭವವಿದೆ.
ಅಧಿಕಾರ ಸ್ವೀಕರಿಸಿ ವರ್ಷ ಕಳೆದರೂ ಸಂಪುಟ ವಿಸ್ತರಣೆ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ. ಹೈಕಮಾಂಡ್ ನಾಯಕರ ಭೇಟಿಗಾಗಿ ಅಲೆದಾಡಿ ಅಲೆದಾಡಿ ಸಾಕಾಗಿರುವ ಸಿಎಂ ಒಂದಿಲ್ಲೊಂದು ಕಾರಣಗಳಿಂದ ಬರಿಗೈಯಲ್ಲೇ ವಾಪಸ್ ಆಗುತ್ತಿರುವುದು ಶಾಸಕರಲ್ಲಿ ಅಸಮಾಧಾನ ಮೂಡಿಸಿದೆ.
ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಗಿದ ನಂತರ ವರಿಷ್ಠರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ.
ಇದಕ್ಕಾಗಿ ಜೆ.ಪಿ.ನಡ್ಡಾ, ಅಮಿತ್ ಶಾ ಅವರ ಸಮಯಾವಕಾಶ ಕೋರಿದ್ದಾರೆ. ಅವಕಾಶ ಸಿಕ್ಕಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ವಿಚಾರ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಸಂಪುಟ ವಿಸ್ತರಣೆ ಬಗ್ಗೆ ಅನುಮತಿ ಕೇಳುವುದಕ್ಕಾಗಿ ಯಾರೂ ದಿಲ್ಲಿಗೆ ಬರುವುದು ಬೇಡ. ವಿಸ್ತರಣೆ ಮಾಡುವಾಗ ನಾವೇ ಹೇಳುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ಅವರ ಪ್ರತಿನಿಧಿಯಾಗಿ ಕಂದಾಯ ಸಚಿವ ಆರ್.ಅಶೋಕ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವ ಅವರು, ಸಂಪುಟ ವಿಸ್ತರಣೆಗಾಗಿ ಮತ್ತೆ ದಿಲ್ಲಿಗೆ ಬರುವುದು ಬೇಡ. ಒಂದೊಮ್ಮೆಅಗತ್ಯ ಸೃಷ್ಟಿಯಾದರೆ ನಾವೇ ಆಹ್ವಾನಿಸುತ್ತೇವೆ ಎಂದು ಹೇಳಿದ್ದಾಗಿ ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಆಗಸ್ಟ್ 15 ರ ಬಳಿಕ ಪಕ್ಷ ಹಾಗೂ ಸರಕಾರದ ಮಟ್ಟದಲ್ಲಿ ಭಾರಿ ಬದಲಾವಣೆ ನಿರೀಕ್ಷೆಯಿದೆ. ಚುನಾವಣಾ ದೃಷ್ಟಿಯಿಂದ ಸಂಪುಟ ಪುನಾರ್ರಚನೆ ಮಾಡಿ ಸೋಷಿಯಲ್ ಎಂಜಿನಿಯರಿಂಗ್ ಕೆಲಸಕ್ಕೆ ಬಿಜೆಪಿ ಕೈ ಹಾಕಲಿದೆ.
ಇದೆಲ್ಲದರ ಮಧ್ಯೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹಠಾತ್ ದೆಹಲಿ ಪ್ರವಾಸ ಕೈಗೊಂಡು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅಮೃತ ಮಹೋತ್ಸವದ ಬೆನ್ನಲ್ಲೇ ಈ ಭೇಟಿ ನಡೆದಿರುವುದು ಕುತೂಹಲ ಸೃಷ್ಟಿಸಿದೆ.