ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ 150 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿಯೊಂದಿಗೆ ರಾಜ್ಯ ಬಿಜೆಪಿ ಸರ್ಕಾರ, ರಾಜ್ಯದ ನಾಲ್ಕೂ ದಿಕ್ಕುಗಳ ವಿಜಯ ಸಂಕಲ್ಪ ಯಾತ್ರೆ ತೆರಳಲಿದ್ದು, ಇದಕ್ಕೆ ಮಾ.1 ಅದಕ್ಕೆ ಚಾಲನೆ ಸಿಗಲಿದೆ. ಇಂದಿನಿಂದ ಆರಂಭ ಆಗಲಿರುವ ಈ ಯಾತ್ರೆಗಳಿಗೆ ಬಿಜೆಪಿಯ ರಾಷ್ಟಾರಧ್ಯಕ್ಷ ಜೆ.ಪಿ.ನಡ್ಡಾ(J P Nadda) ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ಚಾಲನೆ ನೀಡಲಿದ್ದಾರೆ. ರಾಜ್ಯದ ಪ್ರಮುಖ ಜಾತಿಗಳ ವೋಟ್ ಬ್ಯಾಂಕ್ ಗಮನದಲ್ಲಿ ಇಟ್ಟುಕೊಂಡು ಈ ಯಾತ್ರೆಗಳನ್ನು ಆಯೋಜಿಸಲಾಗಿದೆ. ಈ ಯಾತ್ರೆ ಬರೋಬ್ಬರಿ 8000 ಕಿ.ಮೀ ರಾಜ್ಯಾದ್ಯಂತ ಸಂಚರಿಸಲಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ(K S Eshwarappa) ನೇತೃತ್ವದಲ್ಲಿ ನಡೆಯಲಿರುವ ಈ ಯಾತ್ರೆಗೆ ಸಚಿವರಾದ ವಿ.ಸೋಮಣ್ಣ, ಕೆ.ಸಿ.ನಾರಾಯಣಗೌಡ, ವಿ.ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಆರಗ ಜ್ಞಾನೇಂದ್ರ, ಗೋಪಾಲಯ್ಯ, ಎಸ್.ಅಂಗಾರ, ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕ ಎನ್.ಮಹೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಸಾಥ್ ನೀಡಲಿದ್ದಾರೆ.
ಮೈಸೂರು(Mysore) ಭಾಗದಲ್ಲಿ ಸಂಚರಿಸಲಿರುವ ಈ ಯಾತ್ರೆಗೆ ಬುಧವಾರ(ಇಂದು) ಮಧ್ಯಾಹ್ನ 12ಕ್ಕೆ ಚಾಲನೆ ಸಿಗಲಿದೆ. ಈ ವೇಳೆ ಸ್ಥಳೀಯ ಬೇಡಗಂಪಣ ಸಮುದಾಯದವರ ಜತೆಗೆ ನಡ್ಡಾ ಅವರು ಸಂವಾದವನ್ನೂ ನಡೆಸಲಿದ್ದಾರೆ. ಬಳಿಕ ಸಾಲೂರು ಮಠದಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಹನೂರಿ(Hanuru)ನಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(Yadiyurappa) ಸೇರಿ ಪಕ್ಷದ ಹಲವು ಗಣ್ಯರು, ಸಚಿವರು ಉಪಸ್ಥಿತರಿರಲಿದ್ದಾರೆ.
ಮಾ.2ರಂದು ಬೆಳಗಾವಿ(Belagavi) ಯ ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕದಿಂದ ಆರಂಭಗೊಳ್ಳುವ 2ನೇ ಯಾತ್ರೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajanath Singh) ಚಾಲನೆ ನೀಡಲಿದ್ದಾರೆ. ಗೋವಿಂದ ಕಾರಜೋಳ ನೇತೃತ್ವದ ಈ ಯಾತ್ರೆಗೆ ಸಚಿವರಾದ ಸಿ.ಸಿ.ಪಾಟೀಲ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಭೈರತಿ ಬಸವರಾಜ, ಶಿವರಾಮ ಹೆಬ್ಬಾರ್, ಮಾಜಿ ಸಚಿವರಾದ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಶಾಸಕ ಅನಿಲ್ ಬೆನಕೆ, ಬಿಜೆಪಿ ಮುಖಂಡ ಮಹೇಶ್ ಟೆಂಗಿನಕಾಯಿ ಸಾಥ್ ನೀಡಲಿದ್ದಾರೆ.
ಮಾ.3ರಂದು ಬೀದರ್ನ ಬಸವಕಲ್ಯಾಣದ ಅನುಭವ ಮಂಟಪದಿಂದ 3ನೇ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್(Amith Sha) ಶಾ ಚಾಲನೆ ನೀಡುವರು. ಜಗದೀಶ್ ಶೆಟ್ಟರ್ ನೇತೃತ್ವದ ಈ ತಂಡದಲ್ಲಿ ಸಚಿವರಾದ ಬಿ.ಶ್ರೀರಾಮುಲು, ಭಗವಂತ ಖೂಬಾ, ಪ್ರಭು ಚವ್ಹಾಣ್, ಹಾಲಪ್ಪ ಆಚಾರ್, ಆನಂದ್ ಸಿಂಗ್, ಅರವಿಂದ ಲಿಂಬಾವಳಿ, ಮುಖಂಡರಾದ ಬಾಬುರಾವ್ ಚಿಂಚನಸೂರು, ಮಾಲೀಕಯ್ಯ ಗುತ್ತೇದಾರ್, ಸಿದ್ದರಾಜು, ಛಲವಾದಿ ನಾರಾಯಣಸ್ವಾಮಿ ಮತ್ತು ಮಾರುತಿರಾವ್ ಮೂಳೆ ಇರಲಿದ್ದಾರೆ. ಇನ್ನು ಅದೇ ದಿನ ಮಧ್ಯಾಹ್ನ ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಜನ್ಮಸ್ಥಳ ಆವತಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರೇ ನಾಲ್ಕನೇ ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ
ಈ ಯಾತ್ರೆಯಲ್ಲಿ ರಾಜ್ಯ ಮತ್ತು ಕೇಂದ್ರದ ಹಿರಿಯ ನಾಯಕರ ನೇತೃತ್ವದಲ್ಲಿ ತಲಾ ನಾಲ್ಕು ತಂಡಗಳು 150 ಕ್ಕೂ ಹೆಚ್ಚು ರೋಡ್ ಶೋ 8,000 ಕಿ.ಮೀ. ದೂರ ಕ್ರಮಿಸುವ ನಿರೀಕ್ಷೆಯಿದೆ. ಮಾರ್ಚ್ 20 ರಂದು ಯಾತ್ರೆ ಮುಕ್ತಾಯವಾಗಲಿದ್ದು, ಮಾರ್ಚ್ 25 ರಂದು ದಾವಣಗೆರೆಯಲ್ಲಿ ನಡೆಯಲಿರುವ ಮೆಗಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.