ರಾಜ್ಯ

ಸಿದ್ದರಾಮಯ್ಯಗೆ ಕ್ಷಮೆಯಾಚಿಸಿದ ಬಿಜೆಪಿ ಶಾಸಕ: ಕ್ಷಮಾಪಣ ಪತ್ರಕ್ಕೆ ಸಿಎಂ ಶ್ಲಾಘನೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕ ನಿಂದನೆ ಶಬ್ದ ಬಳಸಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಅವರು ಸಿದ್ದರಾಮಯ್ಯ ಬಳಿ ಕ್ಷಮೆಯಾಚಿಸಿದ್ದಾರೆ.

ಕೆಳದಿನಗಳ ಹಿಂದೆ ಜಿಂದಾಲ್‌ಗೆ ಭೂಮಿ ಕೊಟ್ಟಿರೋ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅರವಿಂದ್‌ ಬೆಲ್ಲದ್‌, ಸಿದ್ದರಾಮಯ್ಯನವರದ್ದು ಏನು ಅಪ್ಪನ ಮನೆಯ ಆಸ್ತಿನಾ ಎಂಬ ಪದ ಪ್ರಯೋಗ ಮಾಡಿದ್ದರು. ಇದೀಗ ಈ ಬಗ್ಗೆ ಬೆಲ್ಲದ್‌, ಸಿಎಂಗೆ ಕ್ಷಮಾಪಣೆ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ.

ಕ್ಷಮಾಪಣೆ ಪತ್ರ ಹೀಗಿದೆ….
ಆಗಸ್ಟ್‌ 24 ರ ಶನಿವಾರದಂದು ಬೆಂಗಳೂರಿನ ಪ್ಯಾಲೆಸ್ ಮೈದಾನದಲ್ಲಿ ಜಿಂದಾಲ್ ಕಂಪನಿಯ ಕುರಿತು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಜಿಂದಾಲ್ ಅವರಿಗೆ ಕಡಿಮೆ ದರದಲ್ಲಿ ಭೂಮಿ ಕೊಡುವುದಕ್ಕೆ ಸಿದ್ಧರಾಮಯ್ಯನವರದ್ದು ಏನು ಅಪ್ಪನ ಮನೆ ಆಸ್ತಿನಾ ಎಂದು ವೇಗವಾಗಿ ಹೇಳಿರುತ್ತೇನೆ. ಆ ಸಂದರ್ಭದಲ್ಲಿ ಮಾತ್ರ ಬಳಸಿದ ಈ ಪದದ ಬಳಕೆಯು ನನಗೆ ಶೋಭೆ ತಂದಿರುವುದಿಲ್ಲ, ತಮಗೆ ನಾನು ಈ ಪತ್ರದ ಮುಖಾಂತರ ಕ್ಷಮೆಯಾಚಿಸುತ್ತಿದ್ದೇನೆ. ಎಂದು ಅರವಿಂದ್‌ ಬೆಲ್ಲದ್ ಕ್ಷಮಾಪತ್ರದಲ್ಲಿ ಬರೆದು‌ ಸಿಎಂಗೆ ಕ್ಷಮೆಯಾಚಿಸಿದ್ದಾರೆ.

ಕ್ಷಮಾಪಣೆಗೆ ಸಿಎಂ ಶ್ಲಾಘನೆ
ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದು, ರಾಜಕೀಯದಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಕೆಲವೊಮ್ಮೆ ಉದ್ವೇಗದಲ್ಲಿ ಮತ್ತೊಬ್ಬರ ಘನತೆಗೆ ಚ್ಯುತಿ ತರುವಂತಹ ಹೇಳಿಕೆ ಅರಿವಿಗೆ ಬಾರದೆಯೇ ಬಂದು ಬಿಡುತ್ತದೆ.

ಜಿಂದಾಲ್‌ ಕಂಪನಿಗೆ ಭೂಮಿ ನೀಡಿರುವ ನಮ್ಮ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಮಾತನಾಡುವಾಗ ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ್‌ ಅವರು ವೈಯಕ್ತಿಕವಾಗಿ ನನ್ನನ್ನು ನಿಂದನೆ ಮಾಡಿದ್ದರು. ತಮ್ಮ ತಪ್ಪಿನ ಅರಿವಾಗಿ ಪತ್ರದ ಮೂಲಕ ಕ್ಷಮೆ ಕೋರಿದ್ದಾರೆ. ಅವರ ಈ ನಡೆಯನ್ನು ನಾನು ಅತ್ಯಂತ ಮುಕ್ತವಾಗಿ ಸ್ವಾಗತಿಸುತ್ತೇನೆ, ಜೊತೆಗೆ ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ದ್ವೇಷವಾಗಲೀ, ಬೇಸರವಾಗಲೀ ಯಾವುದು ಇಲ್ಲವೆಂಬುದನ್ನು ಈ ಮೂಲಕ ತಿಳಿಸಬಯಸುತ್ತೇನೆ.

ನಾನು ಒಂದೆರಡು ಬಾರಿ ಬಾಯ್ತಪ್ಪಿನಿಂದ ಏಕವಚನ ಬಳಕೆ ಮಾಡಿ ನಂತರ ವಿಷಾದ ವ್ಯಕ್ತಪಡಿಸಿದ್ದೇನೆ, ಆ ತಪ್ಪು ಮರುಕಳಿಸದಂತೆ ತಿದ್ದಿಕೊಳ್ಳುವ ಪ್ರಯತ್ನವನ್ನು ಮಾಡಿದ್ದೇನೆ.

ನನ್ನ ಸುದೀರ್ಘ 40 ವರ್ಷಗಳ ರಾಜಕೀಯ ಜೀವನದಲ್ಲಿ ವಿಪಕ್ಷಗಳ ಹಲವು ಕಿರಿಯ, ಹಿರಿಯ ನಾಯಕರಿಂದ ವೈಯಕ್ತಿಕ ನಿಂದನೆ, ಚಾರಿತ್ರ್ಯಹರನ ಮಾಡುವಂತಹ ಪದಬಳಕೆ ಎಲ್ಲವನ್ನೂ ಕೇಳಿದ್ದೇನೆ, ಎದುರಿಸಿದ್ದೇನೆ. ಮೊದಲ ಬಾರಿಗೆ ಅರವಿಂದ ಬೆಲ್ಲದ್‌ ಅವರು ತಾವು ಬಳಸಿದ ಪದದ ಬಗ್ಗೆ ಸ್ವತಃ ಅವರೇ ಬೇಸರ ವ್ಯಕ್ತಪಡಿಸಿ, ಪತ್ರದ ಮೂಲಕ ಕ್ಷಮೆ ಕೇಳಿ ಹೊಸ ತಲೆಮಾರಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಅರವಿಂದ್ ಅವರ ತಂದೆ ಚಂದ್ರಕಾಂತ ಬೆಲ್ಲದ್ ಅವರು ನನ್ನ ದೀರ್ಘಕಾಲದ ಸ್ನೇಹಿತರು. ಅವರೊಬ್ಬ ಸಜ್ಜನ ರಾಜಕಾರಣಿ. ಅವರ ಸಜ್ಜನಿಕೆಯ ಪರಂಪರೆಯನ್ನು ಅರವಿಂದ್ ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸುತ್ತೇನೆ.

ರಾಜಕೀಯವು ಬರೀ ಟೀಕೆ, ಆರೋಪ-ಪ್ರತ್ಯಾರೋಪಗಳಿಂದಲೇ ತುಂಬಿಹೋಗುತ್ತಿರುವ ಈ ಕಾಲದಲ್ಲಿ ಅರವಿಂದ ಬೆಲ್ಲದ್‌ ಅವರ ನಡೆ ಮೌಲ್ಯಯುತ ರಾಜಕಾರಣದ ಜೀವಂತಿಕೆಯ ಸಂಕೇತವಾಗಿ ಕಾಣುತ್ತಿದೆ. “ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ” ಎಂಬ ಮಾತು ಈ ಸಂದರ್ಭಕ್ಕೆ ಹೆಚ್ಚು ಅರ್ಥಪೂರ್ಣವೆನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

3 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

4 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

5 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

5 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

11 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

11 hours ago