ಬೆಂಗಳೂರು: ಬಿಜೆಪಿ ಸರ್ಕಾರದ ಭ್ರಷ್ಟಚಾರ ಕುರಿತು ಆರೋಪ ಕೇಳಿ ಬಂದಾಗಲೆಲ್ಲಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾಖಲೆ ಕೇಳುತ್ತಿದ್ದರು, ನಿನ್ನೆ ಲೋಕಾಯುಕ್ತ ಕಾರ್ಯಾಚರಣೆ ದಾಖಲೆ ಒದಗಿಸಿದೆ ಎಂದು ಕಾಂಗ್ರೆಸ್ನ ಮಾಧ್ಯಮ ಘಟಕದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಂದಾಯಿತ ಗುತ್ತಿಗೆದಾರರ ಸಂಘ ಶೇ.40ರಷ್ಟು ಕಮಿಷನ್ ನಡೆಯುತ್ತಿದೆ ಎಂದು ಪ್ರಧಾನಿಗೆ ಪತ್ರ ಬರೆದಿದೆ. ಖಾಸಗಿ ಶಾಲೆಗಳ ಸಂಘಟನೆ ರೂಸ್ಪಾ 13 ಸಾವಿರ ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿದೆ. ಇದಕ್ಕೆಲ್ಲಾ ದಾಖಲೆ ಕೇಳುತ್ತಿದ್ದರು. ಈ ಸರ್ಕಾರದ ಭ್ರಷ್ಟಾಚಾರಕ್ಕೆ ಇನ್ನೆಷ್ಟು ಗುತ್ತಿಗೆದಾರರು ಬಲಿಯಾಗಬೇಕು. ಈ ಸರ್ಕಾರದ ವಿರುದ್ಧ ಕಾಂಗ್ರೆಸ್ ದಾಖಲೆ ಸಮೇತ ಆರೋಪ ಮಾಡಿದರೆ, ಉಡಾಫೆ ಮಾತು ಎನ್ನುತ್ತಾರೆ. ನಾವು ಇದುವರೆಗೂ ಮಾಡಿರುವ ಎಲ್ಲ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿವೆ. ಗಂಗಾಕಲ್ಯಾಣ ಯೋಜನೆ ಹಗರಣ, ಸಿಐಡಿ ತನಿಖೆ, ಪಿಎಸ್ಐ, ಪಿಡಬ್ಲ್ಯೂಡಿ ನೇಮಕಾತಿ, ಬೋವಿ ಅಭಿವೃದ್ಧಿ ನಿಗಮ ಹಗರಣ, ಬಿಟ್ ಕಾಯಿನ್ ಹಗರಣದಲ್ಲಿ ನಮ್ಮ ಒತ್ತಡದ ನಂತಪರ ಎಫ್ಐಆರ್ ದಾಖಲಾಯಿತು. ನಂತರ ತನಿಖೆ ನಿಲ್ಲಿಸಿದ್ದಾರೆ. ಕಾಕಂಬಿ ವಿಚಾರವಾಗಿ, ಕಾರ್ಮಿಕ ಇಲಾಖೆ ಹಗರಣದ ಬಗ್ಗೆ ತನಿಖೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಕಟೀಲ್ ಅವರು ಈಗ ಎಲ್ಲಿ ಅವಿತು ಕುಳಿತಿದ್ದಾರೆ, ಪರೇಶ್ ಮೆಸ್ತಾ ಸತ್ತಾಗ ರಾಜರೋಷವಾಗಿ ಬಂದ್ದೀದಿರಿ. ಅಮಾಯಕರ ಬಲಿ ತೆಗೆದುಕೊಂಡು ಚುನಾವಣೆಗೆ ಹೋಗುತ್ತೀರಿ ಎಂದು ಪ್ರಶ್ನಿಸಿದರು.
ನಿನ್ನೆ ಲೋಕಾಯುಕ್ತ ಕಾರ್ಯಾಚರಣೆ ನಡೆಸಿ ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳು ಅವರನ್ನು ಬಂಧಿಸಿದೆ. ಎಂಟು ಕೋಟಿ ರೂಪಾಯಿಗೂ ಅಕ ಮೊತ್ತವನ್ನು ವಶಪಡಿಸಿಕೊಂಡಿದೆ. ನಾವು ಮಾತನಾಡಿದಾಗ ವಿರೋಧ ವ್ಯಕ್ತಪಡಿಸುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಈಗ ಇವರೆಲ್ಲಾ ಎಲ್ಲಿ ಅಡಗಿ ಕುಳಿತಿದ್ದಾರೆ. ಏಕೆ ಮಾತನಾಡುತ್ತಿಲ್ಲ ಎಂದು ಲೇವಡಿ ಮಾಡಿದರು.
ನೋಟ್ ಬ್ಯಾನ್ ಮಾಡುವಾಗ ಭ್ರಷ್ಟಚಾರ ನಿಲ್ಲಿಸುತ್ತೇವೆ ಎಂದಿದ್ದರು. ಈಗ ಬಿಜೆಪಿ ಶಾಸಕರ ಮನೆಯಲ್ಲಿ ಎಂಟು ಕೋಟಿ ರೂಪಾಯಿಗೂ ಮೀರಿದ ಹಣ ಸಿಕ್ಕಿದೆ. ಅಷ್ಟು ಹಣ ಎಲ್ಲಿಂದ ಬಂತು, ಭ್ರಷ್ಟಾಚಾರ ನಿಂತಿದೆಯಾ. ಬಿಜೆಪಿ ನಡೆಸುತ್ತಿರುವುದು ವಿಜಯ ಯಾತ್ರೆಯಲ್ಲ, ಲಂಚ ಸಂಕಲ್ಪ ಯಾತ್ರೆ, ಭ್ರಷ್ಟೋತ್ಸವ. ಇದರಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರು ಭಾಗವಹಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಬಿಜೆಪಿ ಸರ್ಕಾರದಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿದೆ ಎಂದು ನಾವು ಹೇಳುತ್ತಲೇ ಇದ್ದೆವು. ಈ ಬಗ್ಗೆ ಸಾಕ್ಷಿ ಏನಿದೆ ಎಂದು ಸರ್ಕಾರ ನಮ್ಮ ಆರೋಪ ತಿರಸ್ಕರಿಸುತ್ತಾ ಬಂದಿತ್ತು. ಇದು ಶೇ.40ರಷ್ಟು ಸರ್ಕಾರ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಹೇಳಲಾಗುತ್ತಿದ್ದು, ಇದು ನಿನ್ನೆ ಸಾಬೀತಾಗಿದೆ.
ಅಮಿತ್ ಶಾ ಅವರು ಸಂಡೂರಿನಲ್ಲಿ ಮಾತನಾಡುತ್ತಾ ಮೋದಿ ಮುಖ ನೋಡಿ ಮತ ನೀಡಿ ನಾವು ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಾಡುವ ಆಡಳಿತ ನೀಡುತ್ತೇವೆ ಎಂದರು. ಆಡಿತ ಪಕ್ಷಕ್ಕೆ ಸಂಬಂಸಿದ ಕೇಂದ್ರ ಸಚಿವರೇ ಈ ರೀತಿ ಯಾಕೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆ ಮೂಡಿತ್ತು. ಕಾರಣ ಈಗ ತಿಳಿದಿದೆ. ರಾಜ್ಯದಲ್ಲಿರುವ ಬಿಜೆಪಿ ಶಾಸಕರು ಹಾಗೂ ಸರ್ಕಾರದ ಮಂತ್ರಿಗಳು ಭ್ರಷ್ಟಾಚಾರದ ಬಕಾಸುರರು ಇವರು ಎಷ್ಟು ತಿಂದರೂ ಸಾಲುತ್ತಿಲ್ಲ ಎಂದು ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರಿಗೆ ಅರಿವಾಗಿದೆ. ಹೀಗಾಗಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವರದಿ ಬಂದಿದೆ. ಸರಬರಾಜುದಾರರಿಗೆ 131 ಕೋಟಿ ಅಕ್ರಮ ಲಾಭವಾಗಿದೆ. ಇದರಲ್ಲಿ 800 ಕೋಟಿಗೂ ಹೆಚ್ಚು ಸಾಮಾಗ್ರಿಗಳನ್ನು ಮಾರುಕಟ್ಟೆ ದರಕ್ಕಿಂದ ಮೂರ್ನಾಲ್ಕು ಪಟ್ಟು ಹೆಚ್ಚಾಗಿ ಖರೀದಿ ಮಾಡುವ ಮೂಲಕ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ದೂರು ದಾಖಲಾಗಿದೆ. ಸ್ಯಾಂಡ್ರನೋಲ್ ಕಚ್ಚಾ ಪದಾರ್ಥ 1 ಕೆ.ಜಿಗೆ ಮಾರುಕಟ್ಟೆಯಲ್ಲಿ 1550 ರೂ. ಇದ್ದು, ಇವರು 92,300 ಕೆ.ಜಿಗೆ 14 ಕೋಟಿ ಅಂದಾಜು ವೆಚ್ಚ ತಗುಲಲಿದೆ. ಆದರೆ ಇವರು ಪ್ರತಿ ಕೆ.ಜಿಗೆ 2625 ರೂನಂತೆ, 92,300 ಕೆ.ಜಿಗೆ 24.2 ಕೋಟಿ ವೆಚ್ಚ ಮಾಡಿದ್ದಾರೆ. ಹೀಗೆ ಪ್ರತಿಯೊಂದು ಕಚ್ಚಾಪದಾರ್ಥಗಳನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಿದ್ದಾರೆ ಎಂದು ವಿವರಿಸಿದರು.
ಎಲೆಕ್ಷನ್ ಗೆ ಕಲೆಕ್ಷನ್ ಮಾಡಲು ಈ ಖರೀದಿ ಮಾಡಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುತ್ತಿದ್ದಾರೆ. ಮಾತೆತ್ತಿದರೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಕಳೆದ ಚುನಾವಮೆಯಲ್ಲಿ ನಾ ಖಾವೂಂಗಾ, ನಾ ಖಾನೇದೂಂಗ ಎಂಬ ಘೋಷಣೆ ಮೂಲಕ ಚುನಾವಣೆ ಪ್ರಚಾರ ಮಾಡಿದ್ದರು. ಈಗ ಅವರು ಈ ಘೋಷಣೆ ಇಟ್ಟುಕೊಂಡು ಭಾಷಣ ಮಾಡುತ್ತಾರಾ? ಮಾಡಲಿ ನೋಡೋಣ. ಅಮಿತ್ ಶಾ ಅವರು ಐಟಿ, ಇಡಿ, ಸಿಬಿಐ ಅವರನ್ನು ನಿಮ್ಮ ಜತೆಯಲ್ಲೇ ಕರೆದುಕೊಂಡು ಬನ್ನಿ. ನಮ್ಮ ಜನರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಿ. ನಮ್ಮ ರಾಜ್ಯದ ಚುನಾವಣೆ ಮುಗಿಯುವ ಹೊತ್ತಿನಲ್ಲಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ಮೋದಿ, ಅಮಿತ್ ಶಾ ಹಾಗೂ ನಡ್ಡಾ ಅವರನ್ನು ಕೂರಿಸಿ ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿ ಮಾಡಲಿ ಎಂದು ಸವಾಲು ಹಾಕಿದರು.
ರಮೇಶ್ ಬಾಬು ಮಾತನಾಡಿ, ನಿನ್ನೆ ವಿರೂಪಾಕ್ಷಪ್ಪ ಅವರ ಮಗನ ಬಳಿ ಸಿಕ್ಕಿದ್ದು 40 ಲಕ್ಷ, ನಂತರ ಅದು 7.50 ಕೋಟಿಗೆ ಹೋಗಿದೆ. ಈ ಸರ್ಕಾರಕ್ಕೂ ಶೇ.40 ಕಮಿಷನ್ಗೂ ಅವಿನಾಭಾವ ಸಂಬಂಧವಿದೆ. ಬಿಜೆಪಿ ಸಚಿವರು ಶಾಸಕರು, ಸಿಎಂಗೆ ಬಹಳ ಉತ್ತಮ ಸಂಬಂಧವಿದೆ. ನಿನ್ನೆ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ ಅಡಿಯಲ್ಲಿ ಶಾಸಕರ ಮಗನನ್ನು ಬಂಸಿದ್ದಾರೆ. ಅವರ ಕಚೇರಿ ಹಾಗೂ ಮನೆಯಲ್ಲಿ ದಾಳಿ ಮಾಡಿ ಹಣ ಜಪ್ತಿ ಮಾಡಿದ್ದು, ಶಾಸಕರ ರಕ್ಷಣೆಗೆ ಸಿಎಂ, ಗೃಹ ಸಚಿವರು, ಸಚಿವ ನಿರಾಣಿ ಅವರು ರಕ್ಷಣೆಗೆ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಶಾಸಕರು ಎ1 ಆಗಿದ್ದು, ಅವರ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಹೀಗಾಗಿ ಲೋಕಾಯುಕ್ತ ಅಕಾರಿಗಳು ಶಾಸಕರನ್ನು ಎ1 ಆಗಿ ಮಾಡಬೇಕು ಎಂದು ಮನವಿ ಮಾಡಿದರು.