ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ ಅನುಮತಿ ಮತ್ತು ವಿದ್ಯುತ್ ಟವರ್ ಎರೆಕ್ಷನ್ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ನವೆಂಬರ್ ಅಂತ್ಯದ ವೇಳೆಗೆ 17.5 ಟಿಎಂಸಿ ನೀರನ್ನು ತುಂಗಾದಿಂದ ಭದ್ರಾಗೆ ಲಿಫ್ಟ್ ಮಾಡಿ ನಿಗದಿತ ಎಲ್ಲ ಕೆರೆಗಳಿಗೂ ನೀರು ಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಹಿರಿಯೂರು ತಾಲೂಕಿನ ಐಮಂಗಲ ಸಮೀಪ ಚಿತ್ರದುರ್ಗ ಶಾಖಾ ಕಾಲುವೆಯಡಿ ಪ್ರಾಯೋಗಿಕವಾಗಿ ನೀರು ಹರಿದ ಕೆರೆಗಳನ್ನು ವೀಕ್ಷಿಸಿ, ಆದ್ರಾಳು ಬಳಿಯ 82ನೇ ಕಿ.ಮೀ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಭದ್ರಾ ನದಿ ನೀರಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಪ್ರಸ್ತುತ ಗುರುತ್ವಾಕರ್ಷಣೆಯಿಂದ ನೀರು ಸರಾಗವಾಗಿ ಹರಿಯುವ ಮೊದಲ ಹಂತದ ಕೆರೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಉಳಿದ ಕೆರೆಗಳಿಗೂ ಕಾಲುವೆ ಮೂಲಕ ನೀರು ತಲುಪಿಸಲು ಇನ್ನೂ ಎರಡು ತಿಂಗಳ ಕಾಲಾವಕಾಶ ಬೇಕು ಎಂದು ಸ್ಪಷ್ಟಪಡಿಸಿದರು.
ರೈತರಿಗೆ ಕೈಮುಗಿದ ಸಚಿವರು
ಕಾಲುವೆ ಒಡೆಯುವುದು ಅಥವಾ ಆತುರದಲ್ಲಿ ಸಂಘರ್ಷಕ್ಕೆ ಇಳಿಯಬೇಡಿ, ತಾಳ್ಮೆಯಿಂದ ಸಹಕರಿಸಿ ಎಂದು ರೈತರಿಗೆ ಕೈಮುಗಿದು ಮನವಿ ಮಾಡಿದ ಸಚಿವರು, ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ದಾವಣಗೆರೆವರೆಗೂ ಬರುತ್ತಿದ್ದ ನೀರು ಇದೀಗ ಚಿತ್ರದುರ್ಗ, ತುಮಕೂರು ಜಿಲ್ಲೆಗಳ 12 ತಾಲೂಕುಗಳಿಗೆ ಹರಿಯುತ್ತಿದೆ. ಜನರ ಭಾವನೆಗಳಿಗೆ ಬೆಲೆ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ನೂರಕ್ಕೆ ನೂರರಷ್ಟು 17.5 ಟಿಎಂಸಿ ನೀರು ಲಿಫ್ಟ್ ಮಾಡುವ ಕೆಲಸ ನವೆಂಬರ್ ಒಳಗೆ ಪೂರ್ಣಗೊಳ್ಳಲಿದೆ ಎಂದರು.
ಸ್ಥಳದಲ್ಲಿ ಮಹಿಳೆಯರು ಬಾಗಿನ ಸಮರ್ಪಣೆ ವೇಳೆ ಆನಂದಭಾಷ್ಪ ಸುರಿಸಿ, ಒಡವೆ-ವಸ್ತ್ರಗಳಿಗಿಂತ ಈ ಜೀವಜಲವೇ ದೊಡ್ಡ ವರವೆಂದು ಹರಸಿದಾಗ ಸಚಿವರು ಭಾವುಕರಾಗಿ ಕೆಲಕಾಲ ಮಾತು ಮರೆತರು. “ನಿಮ್ಮ ಖುಷಿ ನೋಡಿ ನನಗೆ ಅದಕ್ಕಿಂತ ಹೆಚ್ಚಿನ ಸಂತೋಷವಾಗಿದೆ” ಎಂದು ಹೇಳಿದರು.
ರೈತರನ್ನು ಸಂತೈಸಿ ಕೆರೆಗಳಿಗೆ ನೀರು ನೀಡಲು ಸೂಚನೆ
ಮಾರ್ಗಮಧ್ಯೆ ಎಲ್ಲಪುರನಹಳ್ಳಿ ಮತ್ತು ಐಮಂಗಲ ಗ್ರಾಮಸ್ಥರು ತಮ್ಮೂರಿನ ಕೆರೆಗಳಿಗೂ ತುರ್ತಾಗಿ ನೀರು ಹರಿಸಬೇಕೆಂದು ಸಚಿವರ ವಾಹನ ತಡೆದು ಮನವಿ ಮಾಡಿದರು. ಅವರನ್ನು ಸಮಾಧಾನಪಡಿಸಿದ ಸಚಿವರು, ಕೆರೆಗಳೇ ಈ ನೆಲದ ರೈತರ ನಿಜವಾದ ಜೀವಾಳ. ಯಾವುದೇ ಆರ್ಥಿಕ ಅಥವಾ ತಾಂತ್ರಿಕ ಹೊಡೆತ ಎದುರಾದರೂ ಲೆಕ್ಕಿಸದೆ ಪ್ರತಿಯೊಂದು ಕೆರೆಗೂ ನೀರು ಮುಟ್ಟಿಸುವ ಹೊಣೆಗಾರಿಕೆಯನ್ನು ಸರ್ಕಾರ ನಿಭಾಯಿಸಲಿದೆ. ಚಿತ್ರದುರ್ಗ ಜಿಲ್ಲೆಗೆ ನೀರು ನೀಡುವ ಉದ್ದೇಶದಿಂದಲೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಬೆನ್ನುಹತ್ತಿ ಯೋಜನೆಯನ್ನು ಈ ಮಟ್ಟಕ್ಕೆ ತರಲಾಗಿದೆ. ಏನೇ ಕಷ್ಟವಾದರೂ ಈ ಭಾಗದ ಎಲ್ಲ ಕೆರೆಗಳಿಗೂ ನೀರು ನೀಡುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ದಿವಂಗತ ಡಿ.ಸುಧಾಕರ್ ಅವರ ಕನಸಿನ ಈ ಯೋಜನೆಗೆ ಈಗಾಗಲೇ 500 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಸೆ.24ರಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಗಂಗಾಪೂಜೆ ನೆರವೇರಿಸಲಿದ್ದಾರೆ ಎಂದರು.
ಏನಿದು ಯೋಜನೆ?
ತುಂಗಾದಿಂದ 17.5 ಟಿಎಂಸಿ ಮತ್ತು ಭದ್ರಾದಿಂದ 12.5 ಟಿಎಂಸಿ ಸೇರಿ ಒಟ್ಟು 30 ಟಿಎಂಸಿ ನೀರು ಎತ್ತುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, 22 ಟಿಎಂಸಿ ಸೂಕ್ಷ್ಮ ನೀರಾವರಿಗೆ ಮತ್ತು 6 ಟಿಎಂಸಿ ಕೆರೆ ತುಂಬಲು ಮೀಸಲು. ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಗಳ 12 ತಾಲೂಕುಗಳ 367 ಕೆರೆ ತುಂಬಿಸಿ 5 ಲಕ್ಷ ಎಕರೆಗೆ ನೀರುಣಿಸಿ 75 ಲಕ್ಷ ಜನರಿಗೆ ಆಸರೆಯಾಗುವ ಗುರಿ ಹೊಂದಿದೆ.
ಪರಿಷ್ಕೃತ ಅಂದಾಜು 21,500 ಕೋಟಿ ರೂ.ಗಳಲ್ಲಿ ಈಗಾಗಲೇ 12,250 ಕೋಟಿ ರೂ. ವೆಚ್ಚವಾಗಿದ್ದು, ಚಿತ್ರದುರ್ಗ ಶಾಖಾ ಕಾಲುವೆಯ 135 ಕಿ.ಮೀ ಪೈಕಿ 114 ಕಿ.ಮೀ ಕಾಮಗಾರಿ ಮುಗಿದು 199 ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಯುತ್ತಿದೆ. ಬಾಕಿ ಗೊಣೂರು ಅಕ್ವಾಡಕ್ಟ್ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಮುಗಿಸಿ ಜಗಳೂರು, ಮೊಳಕಾಲ್ಮುರು, ಚಳ್ಳಕೆರೆ, ಪಾವಗಡ ಭಾಗಕ್ಕೆ ವಿಸ್ತರಿಸಲಾಗುವುದು. ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಅನುದಾನ ಬಿಡುಗಡೆ ನಿರೀಕ್ಷೆಯ ನಡುವೆಯೂ ರಾಜ್ಯ ಸರ್ಕಾರ ಮಾರ್ಚ್ 2028ರೊಳಗೆ ಯೋಜನೆ ಸಂಪೂರ್ಣ ಲೋಕಾರ್ಪಣೆ ಮಾಡಲು ದಿಟ್ಟ ಹೆಜ್ಜೆ ಇಟ್ಟಿದೆ.
ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…
ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…
ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…
ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…
ಚಂದ್ರಶೇಖರ್ ಮೂರ್ತಿ ಕೆ.ಎಸ್. ಊರಿಂದ ಊರಿಗೆ ಬಸ್ ಹತ್ತಿ ಇಳಿದು ದುಡಿಮೆ ಮಾಡೋದು ಇದೆಯಲ್ಲ ಅದು ಅನುಭವಿಸುವ ಊರು ಬಿಟ್ಟ…