ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣ, ಹೊಸ ಟರ್ಮಿನಲ್ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವರ್ಷದಲ್ಲಿ ಇದು ಮೂರನೇ ಭೇಟಿಯಾಗಿದ್ದು ಇಂದು ಐದು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ವಿಧಾನಸೌಧ ಸಮೀಪದ ಹೆಲಿಪ್ಯಾಡ್ಗೆ ಆಗಮಿಸಲಿರುವ ಮೋದಿ, ಶಾಸಕರ ಭವನದ ಆವರಣದಲ್ಲಿರುವ ಕನಕದಾಸ, ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ ನೆರವೇರಿಸುವರು. ನಂತರ ಮೆಜೆಸ್ಟಿಕ್ಗೆ ರಸ್ತೆ ಮಾರ್ಗದ ಮೂಲಕ ತೆರಳಲಿದ್ದು, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಕಾಶಿಯಾತ್ರೆಯ ವಿಶೇಷ ರೈಲಿಗೂ ಚಾಲನೆ ನೀಡಲಿದ್ದಾರೆ.ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಹೆಬ್ಬಾಳ ಹಲಿಪ್ಯಾಡ್ಗೆ ತೆರಳಿ ಹೆಲಿಕಾಪ್ಟರ್ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮೊದಲು ಹೊಸದಾಗಿ ನಿರ್ಮಿಸಿರುವ ಟರ್ಮಿನಲ್ 2 ಉದ್ಘಾಟನೆ ಮಾಡಲಿದ್ದು, ನಂತರ ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪುತ್ಥಳಿ ಅನಾವರಣಗೊಳಿಸಲಿದ್ದಾರೆ. ಮಧ್ಯಾಹ್ನ 12.30-1.30 ರವರೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ 1.45 ಕ್ಕೆ ತಮಿಳುನಾಡಿಗೆ ಪ್ರಯಾಣಿಸಲಿದ್ದಾರೆ.