ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ಅ 7ರಂದು ಬೆಳಗ್ಗೆ 10.30 ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಿಳಿಸಿದರು.
ನಗರದ ತ್ರಿಪುರ ವಾಸಿನಿ, ಗೇಟ್ ನಂ.2 ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಪ್ರಭಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ಎಲ್ಲ ಕೋರ್ ಕಮಿಟಿ ಸದಸ್ಯರು, ಸಹ ಪ್ರಭಾರಿ ಶ್ರೀಮತಿ ಡಿ.ಕೆ.ಅರುಣಾ, 592 ಜನ ರಾಜ್ಯ ಕಾರ್ಯಕಾರಿಣಿಯ ಅಪೇಕ್ಷಿತ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಹಾಲಿ ಸಂಸದರು, ಹಾಲಿ ಶಾಸಕರು, ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ರಾಜ್ಯ ಅಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರು, ಜಿಲ್ಲೆ, ವಿಭಾಗಗಳ ಪ್ರಭಾರಿಗಳು, ಜಿಲ್ಲಾ ಬಿಜೆಪಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಈ ರಾಜ್ಯ ಕಾರ್ಯಕಾರಿಣಿಯ ಅಪೇಕ್ಷಿತ ಸದಸ್ಯರಾಗಿದ್ದಾರೆ ಎಂದು ವಿವರ ನೀಡಿದರು.
ಬೆಳಿಗ್ಗೆಯಿಂದ ಸಂಜೆವರೆಗೆ ಸಂಘಟನಾತ್ಮಕ ವಿಚಾರಗಳ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ಮೈಸೂರು ದಸರಾ ವೈಭವದಿಂದ ನಡೆದಿದೆ. ನವರಾತ್ರಿ, ವಿಜಯದಶಮಿ ಮತ್ತು ದಸರಾವು ಕೇವಲ ಸಾಂಸ್ಕøತಿಕ ವೈಭವದ ಪ್ರತೀಕ ಮಾತ್ರವಲ್ಲ; ದುಷ್ಟ ಶಕ್ತಿಗಳ ನಿಗ್ರಹ ಮತ್ತು ಸಜ್ಜನ ಶಕ್ತಿಗಳಿಗೆ ರಕ್ಷಣೆ ದೊರಕಲಿ ಎಂಬ ಉದ್ದೇಶದಿಂದ ದೇವಿಯ ಆರಾಧನೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು. ರಾಜ್ಯದ ಜನತೆಗೆ – ಮಾಧ್ಯಮ ಮಿತ್ರರಿಗೂ ಅವರು ಶುಭ ಹಾರೈಸಿದರು.
ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ಮತ್ತು ಮಹೇಶ್ ಟೆಂಗಿನಕಾಯಿ, ವಿಧಾನಪರಿಷತ್ ಸದಸ್ಯ ಹಾಗೂ ಬೆಂಗಳೂರು ವಿಭಾಗದ ಪ್ರಭಾರಿ ಗೋಪಿನಾಥ್ ರೆಡ್ಡಿ, ಸಹ ಪ್ರಭಾರಿ ಎಸ್.ಎನ್.ರಾಜಣ್ಣ, ಬೆಂಗಳೂರು ಮಹಾನಗರದ ಮೂವರು ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು.