ಬೆಂಗಳೂರು- ರಾಜ್ಯದ ಎಲ್ಲ ಭಾಗಗಳಲ್ಲೂ ಉದ್ದಿಮೆಗಳು ನೆಲೆಯೂರುವಂತೆ ಮಾಡುವ ಮಹತ್ತ್ವಾಕಾಂಕ್ಷೆಯಿಂದ ರೂಪಿಸಿರುವ ‘ಬೆಂಗಳೂರು ಅಂಡ್ ಬಿಯಾಂಡ್’ ಉಪಕ್ರಮದಡಿ ಮೈಸೂರು ಕ್ಲಸ್ಟರ್ ಸೀಡ್ ಫಂಡ್, ಕರ್ನಾಟಕ ಆಕ್ಸಿಲರೇಟರ್ ನೆಟ್ವರ್ಕ್ ಮತ್ತು ಮೈಸೂರು ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಸೌಲಭ್ಯಗಳಿಗೆ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಶನಿವಾರ ಇಲ್ಲಿ ಚಾಲನೆ ನೀಡಿದರು.
ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮೈಸೂರು ಕ್ಲಸ್ಟರ್ ಸೀಡ್ ಫಂಡ್ಗೆ 25 ಕೋಟಿ ರೂ. ಕೊಟ್ಟಿದ್ದು, ಇದರ ಮೂಲಕ 70ಕ್ಕೂ ಹೆಚ್ಚು ಸ್ಟಾರ್ಟಪ್ಗಳಿಗೆ ಅಗತ್ಯ ನೆರವು ಸಿಗಲಿದೆ. ಇದರಿಂದ ಈ ಕ್ಲಸ್ಟರ್ನಲ್ಲಿ ವರ್ಷಕ್ಕೆ ಒಂದು ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಹಾಗೆಯೇ, ಕರ್ನಾಟಕ ಆಕ್ಸಿಲರೇಟರ್ ನೆಟ್ವರ್ಕ್ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 300ಕ್ಕೂ ಹೆಚ್ಚು ನವೋದ್ಯಮಗಳಿಗೆ ಬೆಂಬಲದ ವ್ಯವಸ್ಥೆ ಮಾಡಲಾಗುವುದು. ಈ ಎರಡು ಕ್ರಮಗಳಿಂದ ವರ್ಷಕ್ಕೆ 200 ಕೋಟಿ ರೂ.ಗಳಿಗೂ ಹೆಚ್ಚು ಆದಾಯ ಬರಲಿದ್ದು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮೂಲಕ ಇವು ಜಾರಿಗೆ ಬರಲಿವೆ” ಎಂದರು.
ಉಳಿದಂತೆ, ಮೈಸೂರು ಗ್ಲೋಬಲ್ ಟೆಕ್ನಾಲಜಿ ಸೆಂಟರ್ (ಎಂಜಿಟಿಸಿ) ಪ್ಲಗ್ & ಪ್ಲೇ ಮಾದರಿಯ ಜಾಗತಿಕ ಗುಣಮಟ್ಟದ ಮೂಲಸೌಲಭ್ಯವಾಗಿದೆ. ಇದರಡಿಯಲ್ಲಿ 2 ಲಕ್ಷ ಚದರ ಅಡಿಗಳಷ್ಟು ಮತ್ತು 3,000 ಜನರು ಕೆಲಸ ಮಾಡಬಹುದಾದಷ್ಟು ವಿಶಾಲ ವ್ಯವಸ್ಥೆ ನಿರ್ಮಾಣವಾಗಲಿದೆ. ಇದರಿಂದ ಐಟಿ, ಐಟಿಇಎಸ್, ಜಿಸಿಸಿ ಮತ್ತು ಇಎಸ್ಡಿಎಂ ವಲಯದ ನವೋದ್ಯಮಗಳ ಬೆಳವಣಿಗೆಗೆ ಇಂಬು ಸಿಗಲಿದ್ದು, ಬಂಡವಾಳವನ್ನು ಆಕರ್ಷಿಸಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ಆಕ್ಸಿಲರೇಟರ್ ನೆಟ್ವರ್ಕ್ (ಕೆಎಎನ್) ಉಪಕ್ರಮದ ಅಡಿಯಲ್ಲಿ ಬೆಂಗಳೂರಿನಲ್ಲಿ ನೆಲೆಯೂರಲಿರುವ ನವೋದ್ಯಮಗಳಿಗೆ ಮಾಗದರ್ಶನ ನೀಡಲು ಜೈನ್ ಇನ್ಕ್ಯುಬೇಟರ್, ಜಿನ್ಸರ್ವ್ ಮತ್ತು ಡರ್ಬಿ ಫೌಂಡೇಶನ್ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಮಿಕ್ಕಂತೆ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಕ್ಲಸ್ಟರ್ಗಳಲ್ಲಿ ಕ್ರಮವಾಗಿ ಎಸ್ಜೆಸಿಇ ಸ್ಟೆಪ್, ಶೈನ್ ಫೌಂಡೇಶನ್ ಮತ್ತು ಆಸ್ಟ್ರಾ ಸಂಸ್ಥೆಗಳು ಈ ಹೊಣೆಗಾರಿಕೆಗೆ ಹೆಗಲು ನೀಡಲಿವೆ ಎಂದು ಅವರು ನುಡಿದರು.
ಎಲೆಕ್ಟ್ರಾನಿಕ್ ವಲಯವು ರಾಜ್ಯದ ಆರ್ಥಿಕ ವ್ಯವಸ್ಥೆಗೆ ಶೇಕಡ 60ಕ್ಕಿಂತಲೂ ಹೆಚ್ಚು ಕೊಡುಗೆ ನೀಡುತ್ತಿದೆ. ಈ ವಲಯದ ಕಾಣಿಕೆಯು ವರ್ಷಕ್ಕೆ 160 ಶತಕೋಟಿ ಡಾಲರ್ಗಿಂತಲೂ ಹೆಚ್ಚಿದೆ. ಆದರೂ ನಾವು ಅಪೇಕ್ಷಿತ ಛಾಪು ಮೂಡಿಸಿಲ್ಲ. ಜೊತೆಗೆ ಉದ್ಯಮ ವಲಯವು ತನಗೆ ಏನು ಬೇಕೆಂದು ಸರಕಾರವನ್ನು ಕೇಳುತ್ತಿಲ್ಲ. ಆದರೆ, ಜಾಗತಿಕ ಸ್ಪರ್ಧೆಯ ಈ ಯುಗದಲ್ಲಿ ನಾವೆಲ್ಲರೂ ಸೇರಿಕೊಂಡು ಕೆಲಸ ಮಾಡಬೇಕಾದ ಸವಾಲಿದೆ ಎಂದು ಅವರು ಸೂಚಿಸಿದರು.
ನವೋದ್ಯಮ ಕ್ಷೇತ್ರದಲ್ಲಿ ಬೆಂಗಳೂರು ನಗರವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈಗ ಚಾಲನೆ ಪಡೆದಿರುವ ಉಪಕ್ರಮಗಳಿಂದ ಮೈಸೂರು ನಗರವು ಇನ್ನು ಮುಂದೆ ವಿಶ್ವದ ಡಿಜಿಟಲ್ ರಂಗದಲ್ಲಿ ಮುನ್ನೆಲೆಗೆ ಬರಲಿದೆ. ಅಲ್ಲದೆ, ಜಾಗತಿಕ ಮಟ್ಟದ ಕಂಪನಿಗಳು ಸ್ಥಳೀಯ ಪ್ರತಿಭಾವಂತರಿಗೆ ಉದ್ಯೋಗ ನೀಡಿ, ಇಲ್ಲೇ ತಮ್ಮ ಬ್ಯಾಕ್ ಆಫೀಸ್ಗಳನ್ನು ತೆರೆಯಬಹುದು. ಇದರಿಂದ ಭಾರತದ ಕಡೆಗೆ ಪ್ರತಿಭೆ ಹರಿದು ಬರಲಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ ವಿ ನಾಯ್ಡು, ಸಿಇಒ ಸಂಜೀವ್ ಗುಪ್ತ, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಇ.ವಿ.ರಮಣ ರೆಡ್ಡಿ, ಐಟಿ ಇಲಾಖೆ ನಿರ್ದೇಶಕ ಡಾ.ಶಿವಶಂಕರ್ ಮುಂತಾದವರು ಉಪಸ್ಥಿತರಿದ್ದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.