ಸೋಲ್: ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಜಂಟಿಯಾಗಿ ಸಮರಾಭ್ಯಾಸ ನಡೆಸುತ್ತಿರುವ ಬೆನ್ನಲ್ಲೇ, ತನ್ನ ಮಿಲಿಟರಿ ಸಾಮರ್ಥ್ಯದ ಪ್ರದರ್ಶನಕ್ಕೆ ಮುಂದಾಗಿರುವ ಉತ್ತರ ಕೊರಿಯಾ ಭಾನುವಾರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ.
‘ಉತ್ತರ ಕೊರಿಯಾದ ಈಶಾನ್ಯ ಭಾಗದ ಟಾಂಗ್ಚಾಂಗ್ರಿ ಪ್ರದೇಶದಿಂದ ಉಡಾವಣೆ ಮಾಡಲಾದ ಕಡಿಮೆ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು ತಮ್ಮ ಕಡಲ ಗಡಿಯ ಪೂರ್ವ ಕರಾವಳಿಯಲ್ಲಿ ಅಪ್ಪಳಿಸಿವೆ’ ಎಂದು ದಕ್ಷಿಣ ಕೊರಿಯಾ ಹಾಗೂ ಜಪಾನ್ ಅಧಿಕಾರಿಗಳು ಹೇಳಿದ್ದಾರೆ.
ತನ್ನ ಮೇಲೆ ದಾಳಿ ನಡೆಸುವ ಉದ್ದೇಶದಿಂದಲೇ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಸಮರಾಭ್ಯಾಸ ಆರಂಭಿಸಿವೆ ಎಂದೇ ಅರ್ಥೈಸುತ್ತಿರುವ ಉತ್ತರ ಕೊರಿಯಾ, ಆ ರಾಷ್ಟ್ರಗಳಿಗೆ ತಿರುಗೇಟು ನೀಡುವುದಕ್ಕಾಗಿ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಮೂಲಗಳು ಹೇಳಿವೆ.
ಉತ್ತರ ಕೊರಿಯಾದ ಈ ನಡೆಗೆ ಬೇರೆ ಆಯಾಮಗಳೂ ಇವೆ. ತನ್ನ ಶಸ್ತ್ರಾಸ್ತ್ರಗಳ ಸಾಮರ್ಥ್ಯ ವೃದ್ಧಿಸಿಕೊಳ್ಳುವ ಜೊತೆಗೆ, ತಾನು ಸಹ ಅಣ್ವಸ್ತ್ರ ಹೊಂದಿರುವ ರಾಷ್ಟ್ರ ಎಂಬುದಾಗಿ ಅಂತರರಾಷ್ಟ್ರೀಯ ಸಮುದಾಯದಿಂದ ಮಾನ್ಯತೆ ಸಿಗಬೇಕು. ಆ ಮೂಲಕ ತನ್ನ ಮೇಲೆ ವಿಧಿಸಲಾಗಿರುವ ನಿರ್ಬಂಧಗಳನ್ನು ತೆರವಾಗುವಂತೆ ನೋಡಿಕೊಳ್ಳುವ ಉದ್ದೇಶ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.