ಹಾಸನ: ಮೇಕಪ್ ಅಂತಾ ಮುಗಿಬೀಳೋ ಹೆಣ್ಣುಮಕ್ಕಳು ಕೊಂಚ ಯಡವಟ್ಟಾದ್ರು ಏನಾಗುತ್ತೆ ಎನ್ನೋದಕ್ಕೇ ಹಾಸನದ ಇದೊಂದು ಘಟನೆ ಸಾಕ್ಷಿಯಾಗಿದೆ. ಇನ್ನೊಂದು ವಾರ ಇರುವಾಗ ಮದುಮಗಳ ಬಾಳಲ್ಲಿ ನಡೆದ ಈ ಮೇಕಪ್ ಯಡವಟ್ಟು ಕಹಾನಿ ಮದುವೆಯನ್ನೇ ಮುಂದೂಡುವಂತೆ ಮಾಡಿದೆ.
ಹಾಸನದಲ್ಲಿ ಇನ್ನೊಂದೇ ವಾರಕ್ಕೆ ಹಸೆಮಣೆ ಏರಬೇಕಿದ್ದ ಮದುಮಗಳು ಅಂದವಾಗಿ ಕಾಣಿಸಬೇಕು ಅಂತಾ ಮಾಡಿಸಿದ ಅದೊಂದು ಫೇಷಿಯಲ್ ಆಕೆಯ ಬಾಳಿನಲ್ಲಿ ಅಲ್ಲೋಕ ಕಲ್ಲೋಲವನ್ನೇ ಮಾಡಿದೆ. ಮಾರ್ಚ್ 2ಕ್ಕೆ ನೀಶ್ಚಯವಾಗಿದ್ದ ಮದುವೆಯೇ ರದ್ದಾಗಿದ್ದರೆ, ಆಕೆ ಆಸ್ಪತ್ರೆ ಸೇರಿ ಪರದಾಡಿದ್ದಾಳೆ! ಒಂದು ಮೇಕಪ್ ಎರಡು ಕುಟುಂಬಗಳನ್ನ ಕಣ್ಣೀರಿಡುವಂತೆ ಮಾಡಿದ್ದು ಮದುವೆ ಕ್ಯಾನ್ಸಲ್ ಅಗಿದ್ದು, ಹುಡುಗಿ ಆಸ್ಪತ್ರೆ ಸೇರಿದ್ದಾಳೆ. ಇದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿ ನಡೆದಿರೋ ಘಟನೆ ಇಡೀ ದೇಶದಲ್ಲಿ ಸದ್ದುಮಾಡುತ್ತಿದೆ.
ಮದುವೆಗೆ ಭರ್ಜರಿ ತಯಾರಿ ಕೂಡ ನಡೆದಿತ್ತು. ಮದುಮಗಳು ಅರಸೀಕೆರೆ ನಗರದ ಅದೊಂದು ಬ್ಯೂಟಿ ಪಾರ್ಲರ್ ಗೆ ಹೋಗಿ ಮದುವೆ ದಿನದ ಮೇಕಪ್ ಗೆ ಆರ್ಡರ್ ಮಾಡಿ, 10 ದಿನದ ಮೊದಲೇ ಮುಖದ ಕಾಂತಿ ಹೆಚ್ಚಿಸಿಕೊಳ್ಳೋಕೆ ಫೇಷಿಯಲ್ ಮಾಡಿಸಿಕೊಂಡಿದ್ದರು. ಮುಖ ಸ್ವಲ್ಪ ಫೇರ್ ಆಗಲಿ ಅಂತಾ ಮಾಡಿದ ಫೇಷಿಯಲ್ ಮರುದಿನ ಆಕೆಯ ಮುಖವನ್ನೇ ವಿಕಾರ ಮಾಡಿಬಿಟ್ಟಿದೆ!
ಇಡೀ ಮುಖ ಕಪ್ಪಾಗಿ ಸುಟ್ಟಂತೆ ಆಗಿದ್ದು ಮದುಮಗಳು ಹಾಗೂ ಇಡೀ ಕುಟುಂಬ ಆತಂಕಗೊಂಡಿದೆ. ಕೂಡಲೆ ಅರಸೀಕೆರೆಯ ಶಿವಕುಮಾರ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಮದುಮಗಳ ಮುಖ ಸಂಪೂರ್ಣ ವಿರೂಪಗೊಂಡಿದ್ದರಿಂದ ನಿಶ್ಚಯವಾಗಿದ್ದ ಮದುವೆ ದಿನಾಂಕವನ್ನು ರದ್ದುಮಾಡಿ ಮದುವೆಯನ್ನ ಮುಂದೂಡಲಾಗಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬ್ಯೂಟಿಷಿಯನ್ ಹಾಗೂ ಮದುಮಗಳ ಕಡೆಯವರ ರಾಜಿ ಸಂದಾನದಿಂದ ಪ್ರಕರಣ ಇತ್ಯರ್ಥವಾಗಿದೆಯಾದರೂ ನಡೆದಿರೋ ಘಟನೆಯ ಫೋಟೋಗಳು, ಎಲ್ಲೆಡೆ ವೈರಲ್ ಆಗಿದ್ದು ದೊಡ್ಡ ಸದ್ದುಮಾಡುತ್ತಿವೆ
ವೈದ್ಯರು ಚಿಕಿತ್ಸೆ ನೀಡಿದ್ದು ಇದು ಕೆಮಿಕಲ್ ರಿಯಾಕ್ಷನ್ ನಿಂದ ಆಗೋ ಅವಾಂತರಗಳು ಹಾಗಾಗಿ ಬ್ಯೂಟಿಷಿಯನ್ ಗಳು ತಮ್ಮ ಬಳಿ ಬರೋ ಗ್ರಾಹಕರ ಬಗ್ಗೆ ತಿಳಿದುಕೊಂಡು ಮೇಕಪ್ ಮಾಡಬೇಕು. ಆಗ ಇಂತಹ ಎಡವಟ್ಟು ಆಗೋದಿಲ್ಲ, ಅವರು ಈ ಹಿಂದೆ ಬಳಸುತ್ತಿದ್ದ ಮೇಕಪ್ ಗಳು ಯಾವುವು? ಅವರ ಚರ್ಮದ ಗುಣ ಎಂತಹದ್ದು? ಏನಾದ್ರು ಅಲರ್ಜಿ ಇದೆಯಾ? ಹೀಗೆ ಎಲ್ಲಾ ಮಾಹಿತಿ ಪಡೆದು ಮೇಕಪ್ ಮಾಡಿದ್ರೆ ಇಂತಹ ಅನಾಹುತಗಳು ಆಗೋದಿಲ್ಲ.
ಸದ್ಯ ಈ ಯುವತಿ ಚಿಕಿತ್ಸೆ ಬಳಿಕ ಅರೋಗ್ಯವಾಗಿ ಇದ್ದಾರೆ. ಇನ್ನು ಎರಡು ಮೂರು ವಾರದಲ್ಲಿ ಅವರ ಮುಖ ಮೊದಲಿನಂತೆ ಆಗಲಿದ್ದು ಯಾವುದೇ ಸಮಸ್ಯೆ ಇಲ್ಲ, ಆದರೆ ಬ್ಯೂಟಿ, ಮೇಕಪ್ ಅಂತಾ ತಲೆ ಕೆಡಸಿಕೊಳ್ಳೋ ಮೊದಲು ಆತುರ ಮಾಡದೆ ಆಲೋಚಿಸಿ ಅಂತಾರೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ. ಶಿವಕುಮಾರ್.
ಒಟ್ಟಿನಲ್ಲಿ ಮದುವೆ ದಿನ ತಾನು ಅಂದವಾಗಿ ಕಾಣಬೇಕು ಅಂತಾ ಮಾಡಿಸಿಕೊಂಡ ಮೇಕಪ್ ಆಕೆಯ ಬಾಳಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಆಗಿರೋ ಯಡವಟ್ಟು ಅರಿತ, ಸ್ವಂತ ಸಂಬಂಧಿಕರೇ ಆದ ವರನ ಕಡೆಯವರು ಮದುವೆ ದಿನಾಂಕ ಮುಂದೂಡಿ ಮದುವೆ ಮಾಡಿಕೊಳ್ಳಲು ಒಪ್ಪಿದ್ದು ಪ್ರಕರಣ ಸುಖಾಂತ್ಯವಾದಂತಾಗಿದೆ.