ಬೆಂಗಳೂರು: ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿ ಎಂದೇ ಹೇಳಲಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳ 3ನೇ ವಾರದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ದತೆ ನಡೆಸಿದ್ದು, ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಚುನಾವಣೆಗೆ ಅಗತ್ಯವಿರುವ ಸಿದ್ದತೆಗಳು ಬಹುತೇಕ ಪೂರ್ಣಗೊಳಿಸಿರುವ ಆಯೋಗ ಏಪ್ರಿಲ್ ತಿಂಗಳ 2ನೇ ವಾರದಲ್ಲಿ ದಿನಾಂಕವನ್ನು ಘೋಷಣೆ ಮಾಡಲಿದೆ. ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಪೂರ್ಣಗೊಳಿಸಿರುವುದು, ಇವಿಎಂ ಯಂತ್ರ ಉಪಯೋಗಿಸುವ ಕುರಿತಂತೆ ತರಬೇತಿ, ಭದ್ರತೆ ಸೇರಿದಂತೆ ಚುನಾವಣೆಗೆ ಬೇಕಿರುವ ಪ್ರಕ್ರಿಯೆಗಳು ಆರಂಭವಾಗಿರುವುದರಿಂದ ಮೇ 20ರೊಳಗೆ ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ಮುಗಿಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ. ಪ್ರಸಕ್ತ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ಮಾ.31ರಿಂದ ಪ್ರಾರಂಭವಾಗಿ ಏ.15ಕ್ಕೆ ಕೊನೆಗೊಳ್ಳಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಮಾ.9ರಿಂದ 29ರವರೆಗೆ ನಡೆಯಲಿದೆ.
ಉಳಿದಂತೆ ಪದವಿ ಪರೀಕ್ಷೆಗಳು ಏಪ್ರಿಲ್ ತಿಂಗಳ 2ನೇ ವಾರದೊಳಗೆ ಪೂರ್ಣಗೊಳ್ಳುವುದರಿಂದ ಮತ ಎಣಿಕೆ ಕೇಂದ್ರಗಳಿಗೆ ಶೈಕ್ಷಣಿಕ ಸಂಸ್ಥೆಗಳು ಲಭ್ಯವಾಗಲಿವೆ.
ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಕೇಂದ್ರ ಚುನಾವಣಾ ಆಯೋಗ ಚುನಾವಣೆ ನಡೆಸುವ ಸಂಬಂಧ 5 ದಿನಾಂಕಗಳನ್ನು ಕಳುಹಿಸಿಕೊಡುವಂತೆ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಮೊದಲ ಹಂತದಲ್ಲಿ ತುಮಕೂರು, ರಾಮನಗರ, ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳಲ್ಲಿ ಮತದಾನ ನಡೆಯುವ ಸಂಭವವಿದೆ. 2ನೇ ಹಂತದಲ್ಲಿ ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಾಪುರ, ಬೀದರ್, ಯಾದಗಿರಿ ಮತ್ತು ಗುಲ್ಬರ್ಗ ಸೇರಿದಂತೆ ಒಟ್ಟು 124 ಕ್ಷೇತ್ರಗಳಿಗೆ ಮತದಾನ ನಡೆಯುವ ಸಾಧ್ಯತೆ ಇದೆ.
ಈಗಾಗಲೇ ರಾಜ್ಯ ಮುಕ್ತ ಚುನಾವಣಾಧಿಕಾರಿ ಮನೋಜ್ಕುಮಾರ್ ಮೀನಾ ಅವರು, ಎಲ್ಲ ಜಿಲ್ಲಾಧಿಕಾರಿಗಳು, ಎಸ್ಪಿ, ವಲಯ ಐಜಿಪಿ ಸೇರಿದಂತೆ ಮತ್ತಿತರ ಇಲಾಖೆಯ ಅಧಿಕಾರಿಗಳ ಜೊತೆ ಒಂದು ಸುತ್ತಿನ ಸಭೆಯನ್ನು ನಡೆಸಿದ್ದಾರೆ. ಪ್ರಮುಖವಾಗಿ ಹೊರ ರಾಜ್ಯಗಳ ಜೊತೆ ಗಡಿ ಹಚ್ಚಿಕೊಂಡಿರುವ ಚಾಮರಾಜನಗರ ಮತ್ತಿತರ ಜಿಲ್ಲೆಗಳ ಚೆಕ್ಪೋಸ್ಟ್ಗಳನ್ನು ಬಿಗಿಗೊಳಿಸಲಾಗಿದೆ.
ಎರಡು ಹಂತಗಳಲ್ಲಿ ಮತದಾನ
ರಾಜ್ಯದಲ್ಲಿ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿಗೆ ಎರಡುಹಂತದ ಮತದಾನ ನಡೆಯುವ ಸಾಧ್ಯತೆ ಇದೆ. ಈ ಹಿಂದೆ ಸಾಮಾನ್ಯವಾಗಿ ಒಂದೇ ಹಂತದ ಮತದಾನ ನಡೆಯುತ್ತಿತ್ತು. ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಸಲು ಆಯೋಗ ಚಿಂತನೆ ನಡೆಸಿದೆ. 2008ರಲ್ಲಿ ಎರಡು ಹಂತದ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ನೂರು ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ 2ನೇ ಹಂತದಲ್ಲಿ ೧೨೪ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು.