ಬೆಂಗಳೂರು : ಹಿಜಾಬ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಹಾಗೂ ಹೇಮಂತ್ ಗುಪ್ತಾ ಇದ್ದ ದ್ವಿಸದಸ್ಯ ಪೀಠ ಭಿನ್ನ ನಿಲುವು ವ್ಯಕ್ತಪಡಿಸಿದೆ. ಈ ಪ್ರಕರಣದ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಈಗಾಗಲೇ ತೀರ್ಪು ಪ್ರಕಟ ಆಗಿದೆ. ಸಿಜೆಐ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಿದ್ದಾರೆ. ಸಿಜೆಐ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದರ ಮೇಲೆ ಎಲ್ಲವೂ ಡಿಪೆಂಡ್ ಆಗಿದೆ. ಕರ್ನಾಟಕ ಸರ್ಕಾರ ಸುಪ್ರೀಂ ತೀರ್ಪು ಎದುರು ನೋಡುತ್ತಿದೆ. ಹಿಜಾಬ್ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗದಂತೆ ಭದ್ರತೆ ಕೂಡ ಎಲ್ಲಾ ರೀತಿಯಲ್ಲಿ ಮಾಡಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಬಂದೋಬಸ್ತ್ ಮಾಡಿದ್ದೆವು. ಎಲ್ಲಾ ರೀತಿಯಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಆಗ್ತಿದೆ. ಹಿಜಾಬ್ ಮೇಲ್ಮನವಿಯನ್ನು ಒಬ್ಬ ನ್ಯಾಯಮೂರ್ತಿ ವಜಾ ಮಾಡಿದ್ದಾರೆ. ವಿಭಿನ್ನ ತೀರ್ಪು ಪ್ರಕಟವಾಗಿ ಈಗ ಸಿಜೆಐ ಪೀಠದಲ್ಲಿ ನಿರ್ಧಾರವಾಗಲಿದೆ. ಅವರು ಏನ್ ಆದೇಶ ಕೊಡ್ತಾರೆ ಅಂತ ಎದುರು ನೋಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಚಿಕ್ಕಮಗಳೂರು ದಲಿತ ಕುಟುಂಬಗಳಿಗೆ ಪ್ಲಾಂಟರ್ಗಳಿಂದ ದೌರ್ಜನ್ಯ ಪ್ರಕರಣದ ಕುರಿತಾಗಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಎಫ್ಐಆರ್ ಆಗಿದೆ. ಹೆಚ್ಚಿನ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ. ಕಾನೂನು ಎಲ್ಲರಿಗೂ ಒಂದೇ, ಕಾನೂನು ಪ್ರಕಾರ ಕ್ರಮ ತಗೋತೇವೆ ಎಂದರು. ಇದೇ ವೇಳೆ 3.5 ಸಾವಿರ ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಆಹ್ವಾನಿಸಲಾಗಿರುವ ಬಗ್ಗೆ ಮಾತನಾಡಿದ ಅವರು, ಪಿಸಿ ನೇಮಕಾತಿ ಪಾರದರ್ಶಕವಾಗಿ ನಡೆಸುತ್ತೇವೆ. ಹಿಂದಿನ ಪ್ರಕರಣ ಗಮನದಲ್ಲಿಟ್ಕೊಂಡು ಈ ಪರೀಕ್ಷೆಯನ್ನು ಲೋಪವಾಗದಂತೆ ನಡೆಸಲಿದ್ದೇವೆ. ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ನಡೆಯುತ್ತಿದೆ. ಈಗಾಗಲೇ 98 ಜನರ ಬಂಧನವಾಗಿದ್ದು, ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದಿದ್ದಾರೆ.