ಮೈಸೂರು: ವರನಟ ಡಾ. ರಾಜ್‌ಕುಮಾರ್ ಅವರ ಪುತ್ರ, ಡಾ. ಪುನೀತ್‌ರಾಜ್‌ಕುಮಾರ್ ನೆಪಿನಲ್ಲಿ ಸಮಾಜ ಕಾರ್ಯ ಮಾಡಬೇಕೆಂಬ ಹಂಬಲದಿಂದ ಪ್ರಕಾಶ್ ರಾಜ್ ಫೌಂಡೇಷನ್ ರಾಜ್ಯದ 32 ಜಿಲ್ಲೆಗಳಲ್ಲೂ ‘ಅಪ್ಪು ಎಕ್ಸ್‌ಪ್ರೆಸ್’ ಹೆಸರಿನಲ್ಲಿ ಆಂಬ್ಯುಲೆನ್ಸ್ ಸೇವೆ ಒದಗಿಸಲು ಮುಂದಾಗಿದ್ದು, ಮೊದಲ ಸೇವಾ ಕಾರ್ಯವಾಗಿ ಮೈಸೂರಿನ ಮಿಷನ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ಅನ್ನು ದಾನವಾಗಿ ನೀಡಿದೆ.
ಬಹುಭಾಷ ನಟ, ಕನ್ನಡಿಗ ಪ್ರಕಾಶ್ ರಾಜ್ ನೇತೃತ್ವದಲ್ಲಿ ಶನಿವಾರ ಮಂಡಿ ಮೊಹಲ್ಲಾದ ಮಿಷನ್ ಆಸ್ಪತ್ರೆಗೆ ‘ಅಪ್ಪು ಎಕ್ಸ್‌ಪ್ರೆಸ್’ ಆಂಬ್ಯುಲೆನ್ಸ್ ಅನ್ನು ಸಿಸ್ಟರ್ ಸುಜಾತ ಅವರಿಗೆ ಹಸ್ತಾಂತರಿಸಿದರು. ಅತ್ಯಾಧುನಿಕ ಸೌಲಭ್ಯವುಳ್ಳ ಆಂಬ್ಯುಲೆನ್ಸ್‌ನಲ್ಲಿ ‘ರಾಜಕುಮಾರ’ ಚಿತ್ರದಲ್ಲಿ ಅಪ್ಪು ಕಾಣಿಸಿಕೊಂಡಿರುವ ಹೆಗಲ ಮೇಲೆ ಪಾರಿವಾಳ ಕುಳಿತ ಭಾವಚಿತ್ರವನ್ನು ಅಂಟಿಸಲಾಗಿದೆ. ಇದು ಇನ್ನು ಮುಂದೆ ಜನರ ಸೇವೆಗೆ ಲಭ್ಯವಿರಲಿದೆ.
ಅಪ್ಪು ಅವರ ಜೊತೆಗೆ 8 ವರ್ಷಗಳ ಒಡನಾಟವಿದ್ದು, 2 ಸಿನೆಮಾಗಳನ್ನು ಮಾಡಿದ್ದರೂ ಅವರು ಮಾಡಿದ್ದಂತಹ ಒಳ್ಳೆಯ ಕೆಲಸಗಳು ನಮಗೆ ಗೊತ್ತಿರಲಿಲ್ಲ. ಬಲಗೈಯಲ್ಲಿ ಮಾಡಿದ್ದ ಸಹಾಯ ಎಡಗೈಗೆ ಗೊತ್ತಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಅಪ್ಪು ನಮ್ಮೆಲ್ಲರ ಮನಸ್ಸಿನಲ್ಲಿ ದೇವರ ಸ್ಥಾನದಲ್ಲಿದ್ದಾರೆ. ಒಂದು ಹೋಟೆಲ್‌ನಲ್ಲಿ ಸಪ್ಲೈಯರ್ ಒಬ್ಬ ಅಳುತ್ತ ಹೇಳಿದರು. ಅಪ್ಪು ನಮಗೆ 50ಸಾವಿರ ರೂ. ಕೊಟ್ಟು ಹೃದಯ ಚಿಕಿತ್ಸೆಗೆ ನೆರವಾದರು ಅಂತ. ಇಂತಹ ಎಷ್ಟೋ ಘಟನೆಗಳು ನಮ್ಮ ನಡುವೆ ಇವೆ. ಈ ಮಣ್ಣಿನಲ್ಲಿ ಹುಟ್ಟಿದ ನಟನಿಗೆ ಇದೇ ಮಣ್ಣಿನಲ್ಲಿ ಹುಟ್ಟಿದ ಮತ್ತೊಬ್ಬ ನಟ ನೆನಪಿಸಿಕೊಂಡು ಸೇವೆ ಒದಗಿಸುತ್ತಿರುವುದು ಶ್ಲಾಘನೀಯ ಎಂದು ನಿರ್ದೇಶಕ ಸಂತೋಷ್ ಆನಂದ್ರಂ ತಿಳಿಸಿದರು.