ಎಪಿಎಂಸಿಗಳನ್ನು ಮುಚ್ಚುವುದಿಲ್ಲ: ಎಸ್‌ಟಿಎಸ್

ಬೆಳಗಾವಿ: ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಆವರಣದಲ್ಲೇ ಮಾರಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ಜಾರಿಗೆ ತರಲಾಗಿತ್ತು. ರೈತರು ಎಲ್ಲಿ ಬೇಕಾದರೂ ತಮ್ಮ ಬೆಳೆಗಳನ್ನು ಮಾರಬಹುದು ಎಂಬ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಭದಲ್ಲಿರುವ ಎಪಿಎಂಸಿಗಳನ್ನು ಯಾವ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಪಿಎಂಸಿ ಹೊರಗೆ ಮಾರಾಟ ಮಾಡಿದರೆ ದಂಡ ವಿಧಿಸಲಾಗುತ್ತಿತ್ತು ಮತ್ತು ನೋಟಿಸ್ ಕೊಡಲಾಗುತ್ತಿತ್ತು. ಈ ಎರಡನ್ನೂ ತೆಗೆದು ಹಾಕಿದ್ದೇವೆ. ಬೆಳಗಾವಿಯಲ್ಲಿ ಬೆಳೆದವರು ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಬೇಕಾದರೂ ಮಾರಬಹುದು. ಇದರಿಂದ ಯಾವ ರೈತರಿಗೂ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ ಎಂದು ಸಮರ್ಥಿಸಿಕೊಂಡರು.

ವಿರೋಧ ಪಕ್ಷದವರು, ಅಧಿವೇಶನದಲ್ಲಿ ಕೇವಲ ವಿರೋಧ ಮಾಡುವುದನ್ನು ಬಿಟ್ಟು ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಸರ್ಕಾರದ ಗಮನಸೆಳೆಯಬೇಕು ಎಂದು ಸಲಹೆ ನೀಡಿದರು.

ಟೆಂಡರ್ ನೀಡಲು ಶೇ ೪೦ರಷ್ಟು ಲಂಚ ಪಡೆಯಲಾಗುತ್ತಿದೆ ಎನ್ನುವುದು ಆರೋಪವಷ್ಟೆ. ಯಾರು ಸಾಬೀತು ಮಾಡಿದ್ದಾರೆ? ಸುಮ್ಮನೆ ಏನು ಬೇಕಾದರೂ ಹೇಳುತ್ತಾರೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಈ ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದರೆ ಉತ್ತರಿಸಲು ಸಿದ್ಧವಿದ್ದೇವೆ ಎಂದರು.

× Chat with us